Advertisement

ತರಕಾರಿ ವ್ಯಾಪಾರ ಯುವಕನ ಬದುಕು ಬದಲಿಸಿತು

02:06 AM Oct 21, 2020 | mahesh |

ಬಂಟ್ವಾಳ: ವಿದೇಶದಲ್ಲಿ ಎಲೆಕ್ಟ್ರಿಕಲ್‌ ವೃತ್ತಿ ನಿರ್ವಹಿಸುತ್ತಿದ್ದ ಯುವಕನೀಗ ಊರಿಗೆ ಮರಳಿ ಹಳ್ಳಿಹಳ್ಳಿಗಳಲ್ಲಿ ತರಕಾರಿ ಮಾರುತ್ತ ಎಲ್ಲರ ಮನವನ್ನಷ್ಟೇ ಅಲ್ಲ ; ಬದುಕನ್ನು ಗೆದ್ದಿರುವ ಕಥೆ ಇದು.

Advertisement

ಲಾಕ್‌ಡೌನ್‌ಗೆ ಮುನ್ನ ಊರಿನಲ್ಲಿ ಕ್ಯಾಂಟೀನ್‌ ಉದ್ಯಮ ನಡೆಸಲೆಂದು ವಿದೇಶದಿಂದ ಮರಳಿದ ಯುವಕನನ್ನು ಲಾಕ್‌ಡೌನ್‌ ಇನ್ನೊಂದು ವೃತ್ತಿಯಲ್ಲಿ ತೊಡಗುವಂತೆ ಮಾಡಿತು. ಅದೇ ಈಗ ಯಶಸ್ಸಿನ ಬಾಗಿಲು ತೋರಿಸಿದೆ. ಬಂಟ್ವಾಳ ತಾಲೂಕಿನ ಕೊಡ್ಮಣ್‌ ಗ್ರಾಮದ ಕೊಟ್ಟಿಂಜ ನಿವಾಸಿ ಶರತ್‌ಕುಮಾರ್‌ ಅವರೇ ಹಳ್ಳಿ ಹಳ್ಳಿಗಳಲ್ಲಿ ತರಕಾರಿ ಮಾರಿ ಬದುಕು ಬೆಳಗಿಕೊಂಡವರು. 5 ವರ್ಷಗಳಿಂದ ಕತಾರ್‌ನಲ್ಲಿ ಎಲೆಕ್ಟ್ರಿಶಿಯನ್‌ ಆಗಿದ್ದ ಶರತ್‌, 2019ರ ಜುಲೈಯಲ್ಲಿ ತಂಗಿಯ ಮದುವೆಗಾಗಿ ಊರಿಗೆ ಬಂದವರು ಇಲ್ಲೇ ಉದ್ಯಮ ನಡೆಸುವ ಆಲೋಚನೆಯಲ್ಲಿದ್ದರು. ಆದರೆ ಕತಾರ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆಯಿಂದ ಮತ್ತೆ ಕೆಲಸಕ್ಕೆ ಬರುವಂತೆ ಒತ್ತಡ ಬಂದಾಗ ತೆರಳಿದರು. ನಾಲ್ಕೈದು ತಿಂಗಳು ದುಡಿದು, ಡಿಸೆಂಬರ್‌ನಲ್ಲಿ ಊರಿಗೆ ಮರಳಿದರು. ಬಳಿಕ ತಮ್ಮ ಹಳೆಯ ಯೋಜನೆಗೇ ಒತ್ತುಕೊಟ್ಟರು.

ಕ್ಯಾಂಟೀನ್‌ ನಡೆಸಲು ಸಿದ್ಧರಾಗಿದ್ದರು
ಎಲ್ಲರ ಸಲಹೆಯಂತೆ ಮೊಬೈಲ್‌ ಕ್ಯಾಂಟೀನ್‌ ನಡೆಸುವ ತೀರ್ಮಾನಕ್ಕೆ ಬಂದರು. ಮಾರುತಿ ಆಮ್ನಿ ಖರೀದಿಸಿ 50-60 ಸಾ.ರೂ. ಬಂಡವಾಳದಲ್ಲಿ ಕ್ಯಾಂಟೀನ್‌ಗೆ ಸಿದ್ಧತೆ ಮಾಡಿಕೊಂಡರು. ಮಾರ್ಚ್‌ ವೇಳೆಗೆ ಹೊಸ ಉದ್ಯಮ ಆರಂಭವಾಗಬೇಕೆನ್ನುವಷ್ಟರಲ್ಲಿ ಲಾಕ್‌ಡೌನ್‌ ಜಾರಿಯಾಯಿತು. ಕೈಯಲ್ಲಿ ಕೆಲಸವಿಲ್ಲ, ಇದ್ದ ದುಡ್ಡನ್ನೆಲ್ಲ ಹೊಸ ಯೋಜನೆಗೆ ಹಾಕಿದ್ದರು. ಮುಂದೇನು ಎಂಬ ಚಿಂತೆಯಲ್ಲಿರುವಾಗಲೇ ಊರಿನ ದಿನೇಶ್‌ ಶೆಟ್ಟಿ ಅವರ ಸಲಹೆ ಹೊಸ ದಾರಿ ತೋರಿಸಿತು.

ಮೊಬೈಲ್‌ ಕ್ಯಾಂಟೀನ್‌ಗಾಗಿ ಮರು ರೂಪಿಸಿದ್ದ ಆಮ್ನಿಯಲ್ಲೇ ತರಕಾರಿ ಮಾರಾಟ ಆರಂಭಿಸಿದರು. ಪ್ರಾರಂಭದಲ್ಲಿ ಸುಮಾರು ಒಂದು ಸಾವಿರ ರೂ.ಗಳ ತರಕಾರಿ ಮಾರಾಟ ಮಾಡಿದರೆ ದಿನ ಕಳೆದಂತೆ ವ್ಯಾಪಾರ ಹೆಚ್ಚಾಗತೊಡಗಿತು. ಈಗ ಸುಮಾರು ವಹಿವಾಟು 5-6 ಸಾವಿರ ರೂ. ವರೆಗೂ ತಲುಪಿದೆ.

ದಿನಕ್ಕೊಂದು ರೂಟ್‌ನಲ್ಲಿ ಸಂಚಾರ
ಶರತ್‌ ದಿನಕ್ಕೊಂದು ರೂಟ್‌ಗೆ ತೆರಳಿ ತರಕಾರಿ ಮಾರುತ್ತಿದ್ದಾರೆ. ಪ್ರಸ್ತುತ ಕರಿಯಂಗಳ, ಪುಂಚಮೆ, ಕೊಳತ್ತಮಜಲು, ಬಡಕಬೈಲು, ಬೆಂಜನಪದವು, ಅಬೆಟ್ಟು, ಕಾಂಜಿಲಕೋಡಿ, ನೆತ್ತರಕೆರೆ, ಕಾಪಿಕಾಡ್‌, ಕುಮುಡೇಲು, ಕುಟ್ಟಿಕಳ ಹೀಗೆ ಸಂಚರಿಸುತ್ತಾರೆ. ಹೆಚ್ಚಿನ ದಿನ ಗಳಲ್ಲಿ ಬಿ.ಸಿ.ರೋಡು ರಖಂ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದರೆ ವಾರಕ್ಕೆ ಒಂದು ಬಾರಿ ಚಿಕ್ಕಮಗಳೂರು, ಹಾಸನದ ಕಡೆಗೆ ತೆರಳುತ್ತಾರೆ. ಜನರು ಅವರ ವಾಹನವನ್ನೇ ಕಾದು ತರಕಾರಿ ಖರೀದಿಸುವಷ್ಟರ ಮಟ್ಟಿಗೆ ಗ್ರಾಹಕರ ಮನಸ್ಸು ಗೆದ್ದಿದ್ದಾರೆ ಶರತ್‌.

Advertisement

ವೃತ್ತಿಯಲ್ಲಿ ನೆಮ್ಮದಿ ಇದೆ
ವಿದೇಶದಿಂದ ಊರಿಗೆ ಬಂದು ಉದ್ಯಮ ನಡೆಸುವ ಆಲೋಚನೆ ಇತ್ತು. ನನ್ನ ಯೋಜನೆ ಸಾಧ್ಯವಾಗದಿದ್ದರೂ ಸ್ವಾವಲಂಬಿಯಾಗಿದ್ದೇನೆ. ಈ ವೃತ್ತಿಯಲ್ಲಿ ನೆಮ್ಮದಿ ಇದೆ. ಜನರು ನಮ್ಮನ್ನೇ ಕಾದು ತರಕಾರಿ ಖರೀದಿಸುತ್ತಿದ್ದು, ಗೆಳೆಯ ಶಿವರಾಜ್‌ ಕೂಡ ತನ್ನ ಜತೆ ಸಾಥ್‌ ನೀಡುತ್ತಿದ್ದಾರೆ. ನನ್ನ ಕುಟುಂಬವನ್ನು ನಿರ್ವಹಿಸಲು ಸಹಾಯಕವಾಗಿದೆ.
– ಶರತ್‌ಕುಮಾರ್‌ ಕೊಟ್ಟಿಂಜ

ಕೊರೊನಾದಂಥ ಸಂಕಷ್ಟದ ಹೊತ್ತಿನಲ್ಲಿ ವೈರುಧ್ಯ ಸನ್ನಿವೇಶಗಳನ್ನೇ ಅವಕಾಶಗಳಾಗಿ ಬಳಸಿ ತಮ್ಮ ಬದುಕನ್ನು ಬೆಳಗಿಸಿಕೊಂಡವರ ಕಥೆಗಳು ಹಲವಾರು. ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಲೆಂದು ಈ ಮಾಲಿಕೆ “ಬದುಕು ಬೆಳಗಿಕೊಂಡವರು”. ನಿಮ್ಮ ಅಕ್ಕಪಕ್ಕದಲ್ಲೂ ಇಂಥ ಸಾಧಕರು ಇದ್ದರೆ ಹೆಸರು, ದೂರವಾಣಿ ಸಂಖ್ಯೆ ಇತ್ಯಾದಿ ವಿವರ ಕಳಿಸಿವಾಟ್ಸ್‌ಆ್ಯಪ್‌ ಸಂಖ್ಯೆ:  7618774529

 ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next