ಹುಮನಾಬಾದ: ಪ್ರತಿ ವರ್ಷ ಲಕ್ಷಾಂತರ ಭಕ್ತರ ಮಧ್ಯೆ ನಡೆಯುತ್ತಿದ್ದ ಕುಲದೇವ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ
ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಹೀಗಾಗಿ ಜಾತ್ರೆ ಕಳೆ ಕಳೆದುಕೊಂಡಂತಾಗಿದೆ. ನಿಜಾಮ್ ಆಳ್ವಿಕೆಯಲ್ಲಿಯೂ ವೈಭವದಿಂದ ನಡೆದ ಇಲ್ಲಿನ ಜಾತ್ರೆ ಈ ವರ್ಷ ಕಣ್ಣಿಗೆ ಕಾಣದ ವೈರಸ್‌ನಿಂದ ಭಕ್ತರ ಭಕ್ತಿಗೆ ಭಂಗ ತಂದಿದೆ.
ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ವೀರಭದ್ರೇಶ್ವರ ಜಾತ್ರೆ ಆಚರಣೆ ರದ್ದು ಮಾಡಿ ಆದೇಶ ಹೊರಡಿಸಿದ್ದು, ಸಾರ್ವಜನಿಕರ ಭಕ್ತಿಗೆ ಮಂಕು ಬಡಿದಂತಾಗಿದೆ. ಶಾಸಕ ರಾಜಶೇಖರ ಪಾಟೀಲ ಮುಂದಾಳತ್ವದಲ್ಲಿ ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆಸಿ ಧಾರ್ಮಿಕ ಆಚರಣೆಗಳಿಗೆ ಅವಕಾಶ ಕಲ್ಪಿಸಬೇಕೆಂಬ ಒತ್ತಾಯ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ ಎಂದು ಭಕ್ತರು ಹೇಳುತ್ತಿದ್ದಾರೆ.
ಜ.14ರಿಂದ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಅತೀ ಸರಳವಾಗಿ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ನಡೆಸಲಾಗುತ್ತಿದ್ದು, ಪಟ್ಟಣದಲ್ಲಿ ಜಾತ್ರೆಯ ಕಳೆ ಎಲ್ಲಿಯೂ ಕಂಡು ಬಂದಿಲ್ಲ. ಪ್ರತಿ ವರ್ಷ ಪಟ್ಟಣದ ಎಲ್ಲೆಡೆ ಹತ್ತಾರು ಕಮಾನು ಹಾಕಿ ಭಕ್ತರಿಗೆ ಸ್ವಾಗತ ಕೋರಲಾಗುತ್ತಿತ್ತು. ಅಲ್ಲದೇ ಪಟ್ಟಣಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ವಿವಿಧೆಡೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಯಾವುದೇ ಕಾರ್ಯ ಚಟುವಟಿಕೆಗಳಿಗೆ ಅವಕಾಶವಿಲ್ಲದ ಕಾರಣ ಕೇವಲ ಧಾರ್ಮಿಕ ಆಚರಣೆಗಳು ನಡೆಯಲಿವೆ. ಅದೂ ಸರಳವಾಗಿ ಆಚರಣೆ ಮಾಡಿ ಪರಂಪರೆ ಉಳಿಸುವ ಕೆಲಸ ನಡೆದಿದೆ.
ಜಾತ್ರೆ ನಿಮಿತ್ತ ವೀರಭದ್ರೇಶ್ವರ ಉತ್ಸವ ಮೂರ್ತಿಗೆ ಭಕ್ತರು ಶಾಲು ಹೊದಿಸಿ, ನೈವೇದ್ಯ ಅರ್ಪಿಸುವ ವಾಡಿಕೆ ಬೆಳೆದು ಬಂದಿದ್ದು, ಪಟ್ಟಣದ ಪ್ರತಿಯೊಂದು ಮನೆಯವರು ಅಲ್ಲದೇ, ರಾಜ್ಯ-ಹೊರ ರಾಜ್ಯದ ಸಾವಿರಾರು ಸಂಖ್ಯೆಯ ಕುಟುಂಬಗಳ ಜನರು ಕಡ್ಡಾಯವಾಗಿ ಶಾಲು ಹೊದಿಸುವ ಪ್ರತೀತಿ ಇದೆ. ಈ ವರ್ಷ ಶಾಲು ಹೊದಿಸುವ ಕಾರ್ಯಕ್ಕೂ ನಿಷೇಧಿಸಲಾಗಿದೆ. ದೇವಸ್ಥಾನ ಸುತ್ತಲಿನ ಪ್ರದೇಶದಲ್ಲಿನ ತೆಂಗಿನಕಾಯಿ ಅಂಗಡಿಗಳು ಮುಚ್ಚಿಸಲಾಗಿದೆ. ಆಟಿಕೆಗಳು ಸೇರಿದಂತೆ ಯಾವುದೇ ತರಹದ ಅಂಗಡಿ ಹಾಕದಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಬಂದ ಬೀದಿ ವ್ಯಾಪಾರಿಗಳು ನಿರಾಸೆಯಿಂದ ಮರಳಿ ಊರಿನತ್ತ
ತೆರಳಿರುವುದು ಕಂಡು ಬಂತು.
ಸೂಕ್ತ ಬಂದೋಬಸ್ತ್
ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತವಾಗಿ ಜಿಲ್ಲಾ ಪೊಲೀಸ್ ವತಿಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. 7 ಸಿಪಿಐ, 22 ಪಿಎಸ್‌ಐ, 47 ಎಎಸ್‌ಐ ಸೇರಿದಂತೆ 500ಕ್ಕೂ ಅಧಿಕ ಸಿಬ್ಬಂದಿ ನೇಮಕ ಮಾಡಲಾಗಿದೆ.
ವಾಹನ ಪ್ರವೇಶ ನಿಷೇಧ
ಪಟ್ಟಣದಲ್ಲಿ ಜ.26 ರಾತ್ರಿವರೆಗೆ ಬೇರೆ ಕಡೆಗಳಿಂದ ಬರುವ ವಾಹನಗಳಿಗೆ ಪಟ್ಟಣದಲ್ಲಿ ಪ್ರವೇಶಕ್ಕೆ ನಿಷೇಧಿ ಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ
ನೀಡಿದ್ದಾರೆ.
*ಧುರ್ಯೋಧನ ಹೂಗಾರ