ಕಲಬುರಗಿ: ಹಣ ಕೊಟ್ಟು ಪಡೆಯಲಾಗದ್ದೇ ಮೌಲ್ಯವಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು. ವಿಶ್ವಜ್ಯೋತಿ ಪ್ರತಿಷ್ಠಾನವು ನಗರದ ವಿವೇಕಾನಂದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಲಿಂ. ಚಂದ್ರಶೇಖರ ಪಾಟೀಲ ತೇಗಲತಿಪ್ಪಿ ಸ್ಮರಣಾರ್ಥ ಆಯೋಜಿಸಿದ್ದ ನುಡಿ ಬೆಳಗು ನೈತಿಕ ಬದುಕೇ ನೈಜ ಬದುಕು ಕುರಿತ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೌಲ್ಯಗಳು ಎಲ್ಲೂ ಸಿಗುವಂತದ್ದಲ್ಲ. ನಮ್ಮ ನಡೆ ನುಡಿಯಲ್ಲಿಯೇ ಕಂಡುಕೊಳ್ಳುವಂತಾಗಿದೆ. ಸರಳ ಬದುಕಿನಲ್ಲಿ ಸಾಗಿದರೆ, ಶಾಂತಿ, ಸಹನೆ, ಪ್ರಮಾಣಿಕತೆ, ಧೈರ್ಯ, ಸಹಿಷ್ಣುತೆ, ಪ್ರೀತಿಯ ಮಾನವೀಯ ಗುಣಗಳೇ ಮೌಲ್ಯಗಳಾಗಿವೆ. ಸ್ವಾಮಿ ವಿವೇಕಾನಂದರು ಹೇಳಿರುವಂತೆ ನೀನು ಗಳಿಸಿದ ಜ್ಞಾನ ದೇಶದ ಒಳಿತಿಗಾಗಿ ಬಳಸದಿದ್ದರೆ ಅದುವೇ ಶತ್ರು ಎಂದು ಹೇಳಿದ್ದಾರೆ. ಆದ್ದರಿಂದ ಇಂದು ತಾಂಡವಾಡುತ್ತಿರುವ ಅಪಮೌಲ್ಯ ವಿಜೃಂಭಣೆಗೆ ಕಡಿವಾಣ ಹಾಕಿ, ಯಾವುದು ಜೀವನ ಮೌಲ್ಯ ಎಂಬುದನ್ನು ಬದಲಾಯಿಸಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸುಂದರ ಹಾಗೂ ಆರ್ಥಿಕಾಭಿವೃದ್ಧಿ ಸಮಾಜ ನಿರ್ಮಾಣವಾಗಲು ನಮ್ಮ ನಡೆ ನುಡಿಯಲ್ಲಿ ಒಂದಾಗಬೇಕು, ಮೋಹದ ಬಲೆಗೆ ಒಳಗಾಗದಿರುವುದು, ಮಾಡುವ ಕಾಯಕದಲ್ಲಿ ಶ್ರದ್ಧೆ ಇರಬೇಕು, ಸರಳ ಬದುಕು ಸಾಗಿಸಬೇಕು ಎಂದು ಹೇಳಿದರು. ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಜಿ.ಪಂ. ಮಾಜಿ ಅಧ್ಯಕ್ಷ ಭೀಮರಾವ್ ತೇಗಲತಿಪ್ಪಿ, ಮಾಜಿ ಶಾಸಕಿ ಅರುಣಾ ಸಿ. ಪಾಟೀಲ ರೇವೂರ, ಪಾಲಿಕೆ ಸದಸ್ಯೆ ಗೀತಾ ರಾಜು ವಾಡೇಕರ್, ಹಿರಿಯ ಪತ್ರಕರ್ತ ಹಣಮಂತರಾವ ಭೈರಾಮಡಗಿ, ಪ್ರಾಧ್ಯಾಪಕ ಡಾ| ವಾಸುದೇವ ಸೇಡಂಕರ್ ಹಾಜರಿದ್ದರು.
ಪ್ರಾಚಾರ್ಯ ಪ್ರವೀಣ ನಾಯಕ ಅಧ್ಯಕ್ಷತೆ ವಹಿಸಿದ್ದರು. ವಿಶ್ವಜ್ಯೋತಿ ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಸ್ವಾಗತಿಸಿದರು. ಶಿವರಾಜ ಅಂಡಗಿ ನಿರೂಪಿಸಿದರು, ಸವಿತಾ ಪಾಟೀಲ ಸ್ವಾಗತ ಗೀತೆ ಹಾಡಿದರು. ಶ್ರೀಕಾಂತಗೌಡ ಪಾಟೀಲ ತಿಳಗೋಳ, ಎ.ಬಿ. ಪಾಟೀಲ ಬಮ್ಮನಳ್ಳಿ, ಪರಮೇಶ್ವರ ಶೆಟಕಾರ, ಜಗದೀಶ ಮರಮಪಳ್ಳಿ, ರವೀಂದ್ರಕುಮಾರ ಭಂಟನಳ್ಳಿ, ಅನೀಲಕುಮಾರ ತೇಗಲತಿಪ್ಪಿ, ಶಿವಾನಂದ ಮಠಪತಿ, ಗೌಡೇಶ ಬಿರಾದಾರ ಮುಂತಾದವರಿದ್ದರು.