ಬೆಂಗಳೂರು: ನಿರೀಕ್ಷೆಯಂತೆ ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದು ಬಿಜೆಪಿ ಬೀಗಿದೆ. 15 ರಲ್ಲಿ 12 ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಕಮಲ ಪಾಳೆಯ ಬಹಳ ಯೋಜನಾಬದ್ಧ ರೀತಿಯಲ್ಲಿ ಪಕ್ಷದ ಸ್ಥರವನ್ನು ಗಟ್ಟಿಯಾಗಿ ವಿಸ್ತರಿಸಿಕೊಂಡಿದೆ. ಕಾಂಗ್ರೆಸ್-ಜೆಡಿಎಸ್‌ನ 17 ಮಂದಿ ಅನರ್ಹ ಶಾಸಕರ ಪೈಕಿ 15 ಕ್ಷೇತ್ರಗಳಲ್ಲಿ 13 ಕಡೆ “ಪ್ರಾಥಮಿಕ ಬಂಡವಾಳ’ ರೂಪದಲ್ಲಿ ಹೂಡಿಕೆ ಮಾಡುವ ಮೂಲಕ ಚುನಾವಣೆ ಎಂಬ ಷೇರು ಮಾರು ಕಟ್ಟೆ ಯಲ್ಲಿ ಓಟಿನ ಮುಖಬೆಲೆ ಹೆಚ್ಚಿಸಿ ಕೊಂಡು ಬಿಜೆಪಿ ಭರ್ಜರಿ ಲಾಭ ಗಿಟ್ಟಿಸಿಕೊಂಡಿದೆ.
ಮುಖ್ಯವಾಗಿ ಬಿಜೆ ಪಿಗೆ ಅಷ್ಟೊಂದು ನೆಲೆ ಇಲ್ಲದ ಹಳೇ ಮೈಸೂರು ಭಾಗದ ಚಿಕ್ಕಬಳ್ಳಾಪುರ, ಕೆ.ಆರ್.ಪೇಟೆ, ಮಹಾಲಕ್ಷ್ಮೀ ಲೇಔಟ್, ಯಶವಂತಪುರ, ಹುಣಸೂರು ಕ್ಷೇತ್ರಗಳಲ್ಲಿ ಬಿಜೆಪಿ ನೆಲೆ ವಿಸ್ತರಿಸಿ ಕೊಂಡಿದೆ. ವಿಶೇಷವಾಗಿ ಜೆಡಿಎಸ್ ಭದ್ರಕೋಟೆ ಎನಿಸಿಕೊಂಡ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಹಾಗೂ ಕಾಂಗ್ರೆಸ್ ಭದ್ರಕೋಟೆ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಖಾತೆ ತೆರೆಯುವ ಮೂಲಕ ದಾಖಲೆ ನಿರ್ಮಿಸಿದೆ. ಹುಣಸೂರಿನಲ್ಲಿ ಬಿಜೆಪಿ ಸೋತಿದ್ದರೂ ಕಳೆದ ಬಾರಿಗಿಂತ 45 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡಿದೆ. ಶಿವಾಜಿನಗರದಲ್ಲೂ ತನ್ನ ನೆಲೆ ಕಾಯ್ದುಕೊಂಡಿದೆ. ಹೊಸಕೋಟೆ ಹಾಗೂ ಕೆ.ಆರ್. ಪುರದಲ್ಲಿ ಬಿಜೆಪಿಗೆ ಕಳೆದ ಬಾರಿಗಿಂತ ಕಡಿಮೆ ಮತ ಸಿಕ್ಕಿದೆ.
ಉಳಿದಂತೆ ಮುಂಬೈ ಹಾಗೂ ಉತ್ತರ ಕರ್ನಾಟಕ ಭಾಗದ ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೆಕೇರೂರು, ರಾಣಿಬೆನ್ನೂರು, ವಿಜಯನಗರ ಏಳು ಕ್ಷೇತ್ರಗಳಲ್ಲಿ ಸಹಜವಾಗಿ ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಡೆದುಕೊಂಡಿದ್ದ ಮತಗಳಿಗಿಂತ ಹೆಚ್ಚು ಮತಗಳನ್ನು ಪಡೆದುಕೊಂಡಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಈ 15 ಕ್ಷೇತ್ರಗಳಲ್ಲಿ ಬಿಜೆಪಿ ಒಟ್ಟು 8.32 ಲಕ್ಷ ಮತಗಳನ್ನು ಪಡೆದುಕೊಂಡಿತ್ತು. ಈ ಉಪ ಚುನಾವಣೆಯಲ್ಲಿ 12.63 ಲಕ್ಷ ಮತಗಳನ್ನು ಪಡೆದುಕೊಂಡಿದೆ. ಅಂದರೆ, ಕಳೆದ ಚುನಾವಣೆಗಿಂತ ಬರೋಬ್ಬರಿ 4.30 ಲಕ್ಷ ಹೆಚ್ಚುವರಿ ಮತಗಳನ್ನು ಪಡೆದುಕೊಂಡಿದೆ.
ಅದರಲ್ಲಿ ಏಳು ಕ್ಷೇತ್ರಗಳಲ್ಲಿ ಶೇ.3ರಿಂದ ಶೇ.35ರಷ್ಟು ಅತ್ಯಂತ ಕಡಿಮೆ ಮತಗಳನ್ನು ಪಡೆದುಕೊಂಡಿದ್ದರೆ, 8 ಕ್ಷೇತ್ರಗಳಲ್ಲಿ ಶೇ.35ರಿಂದ ಶೇ.48 ರಷ್ಟು ಮತಗಳನ್ನು ಬಿಜೆಪಿ ಪಡೆದಿಕೊಂಡಿತ್ತು. ವಿಶೇಷವಾಗಿ ಚಿಕ್ಕ ಬಳ್ಳಾಪುರ-5,576 (ಶೇ.3.21), ಹುಣಸೂರು-6,406 (ಶೇ.3.44), ಕೆ.ಆರ್. ಪೇಟೆ-9,819 (ಶೇ.5.64), ಯಶವಂತಪುರ-59,576 (ಶೇ.20.65), ರಾಣಿಬೆನ್ನೂರು-48,937 (ಶೇ.27.31), ಮಹಾಲಕ್ಷ್ಮೀಲೇಔಟ್-47,118 (ಶೇ.29.47), ಕಾಗವಾಡ-50 ಸಾವಿರ (ಶೇ.34)ರಂತೆ ಕಡಿಮೆ ಮತಗಳನ್ನು ಪಡೆದುಕೊಂಡಿದ್ದ ಬಿಜೆಪಿ ಈ ಕ್ಷೇತ್ರದಲ್ಲಿ ಈ ಬಾರಿ ಗಣನೀಯವಾಗಿ ಮತಪ್ರಮಾಣ ಹೆಚ್ಚಿಸಿಕೊಂಡಿದೆ.
ಅದರಲ್ಲೂ ಮುಖ್ಯವಾಗಿ ಚಿಕ್ಕಬಳ್ಳಾಪುರ, ಕೆ.ಆರ್. ಪೇಟೆ, ಹುಣಸೂರಿನಲ್ಲಿ ಶೇ.3ರಿಂದ 5ರಷ್ಟು ತೀರಾ ನಗಣ್ಯ ಮತಗಳನ್ನು ಪಡೆದುಕೊಂಡಿದ್ದ ಬಿಜೆಪಿ ಈ ಬಾರಿ ಈ 3 ಕ್ಷೇತ್ರಗಳಲ್ಲಿ 50 ರಿಂದ 80 ಸಾವಿರ ಮತಗಳನ್ನು ಪಡೆದುಕೊಂಡಿದೆ. ಅದಲ್ಲದೇ ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೆಕೇರೂರು, ವಿಜಯನಗರ, ಕೆ.ಆರ್.ಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆಯಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿತ್ತು. ಈ ಬಾರಿ ಹೊಸಕೋಟೆ ಹೊರತುಪಡಿಸಿ ಉಳಿದೆಲ್ಲ ಕಡೆ ಗೆದ್ದಿದೆ. ಅದೇ ರೀತಿ ಚಿಕ್ಕಬಳ್ಳಾಪುರ, ಯಶವಂತಪುರ, ಕೆ.ಆರ್.ಪೇಟೆ, ಹುಣಸೂರಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಬಿಜೆಪಿ ಈ ಬಾರಿ ಗೆಲುವಿನ ನಗೆ ಬೀರಿದೆ.
* ರಫೀಕ್ ಅಹ್ಮದ್