Advertisement
ಪಾರಂಪರಿಕ ಕಂದಕಕ್ಕೆ ಸೇರುತ್ತಿರುವ ಚರಂಡಿ ನೀರು, ಸ್ಮಾರಕಗಳ ಬಳಿ ಬಯಲು ಬಹಿರ್ದೇಸೆ, ತಿಪ್ಪೆ ಗುಂಡಿಗಳಿಂದಾಗಿ ಮಾಲಿನ್ಯ-ದುರ್ವಾಸನೆ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರತೊಡಗಿದೆ. ಈ ದುರವಸ್ಥೆ ನಿವಾರಣೆ ವಿಷಯದಲ್ಲಿ ಭಾರತೀಯ ಪುರಾತತ್ವ ಇಲಾಖೆ ಹಾಗೂ ಮಹಾನಗರ ಪಾಲಿಕೆ ಮಧ್ಯೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.
Related Articles
Advertisement
ಚರಂಡಿ ನೀರನ್ನು ಕಂದಕಗಳಿಗೆ ಬೀಡುತ್ತಿರುವುದನ್ನು ತಡೆಯುವಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳು ಪಾಲಿಕೆ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಪಾಲಿಕೆಯ ಬೇಜವಾಬ್ದಾರಿ ನಡೆಯಿಂದ ನಮ್ಮ ಸ್ಮಾರಕಗಳು ಅಪಾಯಕ್ಕೆ ಸಿಲುಕಿವೆ ಎಂದೆಲ್ಲ ದೂರುತ್ತಾರೆ. ಕಂದಕಗಳಲ್ಲಿ ಚರಂಡಿ ನೀರು ಶೇಖರಣೆಗೊಂಡು ನಗರದಲ್ಲಿ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತಿರುವ ಕುರಿತು ಆರೋಗ್ಯ ಇಲಾಖೆ ಕೂಡ ಪಾಲಿಕೆಗೆ ಪತ್ರ ಬರೆದಿದೆ. ಆದರೂ ಕಂದಕದ ಕೊಳಕು ನಿವಾರಣೆಗೆ ಮುಂದಾಗಿಲ್ಲ.
ಈ ಕುರಿತು ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಹೇಳುವುದೇ ಬೇರೆ. ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಮಾರಕ, ಕೋಟೆ, ಕಂದಕಗಳನ್ನು ಒತ್ತುವರಿ ಮಾಡಿದ ಬೃಹತ್ ಕಟ್ಟಡಗಳನ್ನು ಕಟ್ಟಿದ ಜನರ ವಿರುದ್ಧ ಚಕಾರ ಎತ್ತುವುದಿಲ್ಲ. ಆದರೆ ಮಹಾನಗರ ಪಾಲಿಕೆ ನಗರದಲ್ಲಿ ಚರಂಡಿ, ರಸ್ತೆ ನಿರ್ಮಾಣದಂಥ ಮೂಲಭೂತ ಸೌಲಭ್ಯ ಕಲ್ಪಿಸುವ ವಿಷಯದಲ್ಲಿ ಪರಂಪರೆ ಯಾವುದಕ್ಕೂ ಧಕ್ಕೆ ಆಗದಂತೆ ಅಭಿವೃದ್ಧಿ ಕಾಮಗಾರಿ ರೂಪಿಸಿದರೆ ತಕರಾರು ಮಾಡುತ್ತಾರೆ ಎಂದು ದೂರುತ್ತಾರೆ.
ಪರಿಣಾಮ ನಗರದ ಕೋಟೆ ಸುತ್ತಲೂ ಯಾವುದೇ ಸಮಸ್ಯೆ ಆಗದಂತೆ ಚರಂಡಿ ನಿರ್ಮಿಸಲು ಮುಂದಾಗಿ ಸರ್ಕಾರದಿಂದ 2.50 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಿಸಿತ್ತು. ಆದರೆ ಪುರಾತತ್ವ ಇಲಾಖೆ ಮೊಂಡುತನದಿಂದ ಅನುದಾನ ಮರಳಿ ಹೋಗಿದೆ. ಹೀಗಾಗಿ ನಗರದಲ್ಲಿ ಪರಂಪರೆಗೆ ಹಾನಿಯಾಗದಂತೆ ಕೋಟೆ ಸುತ್ತಲೂ ರಾಜಕಾಲುವೆ ಮಾದರಿಯಲ್ಲಿ ಚರಂಡಿ ನಿರ್ಮಿಸಲು ಮಹಾನಗರ ಪಾಲಿಕೆ 35 ಕೋಟಿ ರೂ. ಪ್ರವಸ್ತಾವನೆ ಸಲ್ಲಿಸಿದೆ.
ಕಂದಕ ಮಾತ್ರವಲ್ಲ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಬರುವ ಬರುವ ಪ್ರವಾಸಿಗರ ಅನುಕೂಲಕ್ಕೆ ಉತ್ತಮ ರಸ್ತೆ, ನಗರದ ಸೌಂದರ್ಯಕ್ಕೆ ಚರಂಡಿ ನಿರ್ಮಾಣಕ್ಕೆ ಮುಂದಾದ ಸಂದರ್ಭದಲ್ಲೆಲ್ಲ ಪುರಾತತ್ವ ಇಲಾಖೆ ಮಹಾನಗರ ಪಾಲಿಕೆ ವಿರುದ್ಧ ಸ್ಮಾರಕಕ್ಕೆ ಧಕ್ಕೆ, ಪರಂಪರೆ ನಾಶದ ಕುರಿತು ಪ್ರಕರಣ ದಾಖಲಿಸಿದೆ. ಇದರಿಂದ ನಗರದಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳೂ ಅನುದಾನ ಸರ್ಕಾರಕ್ಕೆ ಮರಳಿ, ಸೌಲಭ್ಯಗಳು ನನೆಗುದಿಗೆ ಬೀಳುವಂತಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಇನ್ನು ಗಗನಮಹಲ್ ಬಳಿ ಕಂದಕ ಸ್ವಚ್ಛತೆ ವಿಷಯದಲ್ಲೂ ಇದೇ ರೀತಿ ಸಮಸ್ಯೆ ಇದೆ. ಮಾಧ್ಯಮಗಳು ವರದಿ ಮಾಡಿ ಗಮನ ಸೆಳೆದಾಗ ಆಗೊಮ್ಮೆ ಈಗೊಮ್ಮೆ ಪುರಾತತ್ವ ಇಲಾಖೆ ಕಂದಕದ ತಾಜ್ಯ ಹೊರ ಹಾಕುವುದನ್ನು ಬಿಟ್ಟರೆ ಕಂದಕ ರಕ್ಷಣೆಗೆ ಮುಂದಾಗಿಲ್ಲ. ಪಾಲಿಕೆ ಆಧಿಕಾರಿಗಳು ನಿಯಮ ಬಾಹೀರವಾಗಿ ಪಾರಂಪರಿಕ ಕಂದಕಕ್ಕೆ ನಗರದ ಚರಂಡಿ ನೀರನ್ನು ಬಿಡುವ ಮೂಲಕ ಸ್ಮಾರಕಗಳ ಪರಿಸರವನ್ನು ವಿರೂಪಗೊಳಿಸುವ ಕೆಲಸ ಮಾಡುತ್ತಿದೆ. ಇದರಿಂದ ಸ್ಮಾರಕಗಳ ಸುತ್ತಲೂ ಕಂದಕಗಳಲ್ಲಿ ಚರಂಡಿ ಮಲೀನ ಸಂಗ್ರಹವಾಗಿ ದುರ್ವಾಸನೆ ಹರಡಿಕೊಂಡು, ನಿರ್ವಹಣೆ ಅಸಾಧ್ಯವಾಗುತ್ತಿದೆ. ಪಾಲಿಕೆ ಅಧಿಕಾರಿಗಳ ಕಡೆಗೆ ಬೆರಳು ತೋರಿಸಿ ಹರಿಹಾಯುತ್ತಾರೆ.
ಇನ್ನೂ ಗಗನಮಹಲ್ ಬಳಿಯ ಕಂದಕ ನಿರ್ವಹಣೆಗೆ ಪ್ರವಾಸಿಗರ ಆಕರ್ಷಣೆ ಮಾಡಲು ಕಂದಕದ ನೀರನ್ನು ಶುಚಿಗೊಳಿಸಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲು ಈ ಹಿಂದೆ ಹಲವು ಬಾರಿ ವಿವಿಧ ಮಜಲುಗಳಲ್ಲಿ ಪ್ರಯತ್ನಗಳು ನಡೆದಿದ್ದರೂ ಕನಸು ನನಸಾಗಿಲ್ಲ. 2015ರಲ್ಲಿ ಫೆಬ್ರವರಿ 28ರಿಂದ ಮಾರ್ಚ್ 1ರವರೆಗೆ ನಡೆದ ನವಸರಪುರ ಉತ್ಸವದ ಸಂದರ್ಭದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಆಲಮಟ್ಟಿಯಲ್ಲಿ ಬೋಟಿಂಗ್ ಗುತ್ತಿಗೆ ಪಡೆದಿರುವ ಗುತ್ತಿಗೆದಾರರಿಂದಲೇ ಪೆಡಲಿಂಗ್ ಹಾಗೂ ಯಾಂತ್ರೀಕೃತ ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು.
ನವರಸಪುರ ಉತ್ಸವದಲ್ಲಿ ಮೊದಲ ಬಾರಿಗೆ ನಡೆದ ಬೋಟಿಂಗ್ ಪ್ರಯೋಗ ಯಶಸ್ವಿಯಾಗುತ್ತಲೇ ಕಂದಕ ನಿರ್ವಹಣೆ ಜೊತೆಗೆ ಪ್ರವಾಸೋದ್ಯಮಕ್ಕೆ ಪೂರಕವಾಗಿ ಶಾಶ್ವತ ಬೋಟಿಂಗ್ ವ್ಯವಸ್ಥೆಗೂ ಚಿಂತಿಸಲಾಗಿತ್ತು. ಆದರೆ ಪುರಾತತ್ವ ಇಲಾಖೆ ತಕರಾರು ತೆಗೆದ ಕಾರಣ ಯೋಚನೆ ಯೋಜನೆ ರೂಪ ಪಡೆಯುವ ಹಂತದಲ್ಲೇ ನನೆಗುದಿಗೆ ಬಿದ್ದಿತ್ತು. ಇದರ ಹೊರತಾಗಿ ಕಳೆದ ವರ್ಷ ಈ ಕಂದಕದಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆ ಸುಮಾರು 50 ಲಕ್ಷ ರೂ. ವೆಚ್ಚ ಯೋಜನೆಗೆ ಮಂಜೂರಾತಿ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದರ ಕಥೆ ಏನಾಗಿದೆ ಎಂದು ಹೇಳಲು ಇಲಾಖೆಯಲ್ಲಿ ಪ್ರಭಾರಿ ಅಧಿಕಾರಿಗಳು ಲಭ್ಯವಾಗುವುದೇ ಇಲ್ಲ.
ಇನ್ನು ಕಂದಕದ ಮಾಲಿನ್ಯ ಹಾಗೂ ದುರ್ವಾಸನೆ ಕಥೆ ಒಂದೆಡೆಯಾದರೆ, ನಗರದ ಹಲವು ಸ್ಮಾರಕಗಳು ಬಯಲು ಬಹಿರ್ದೆಸೆ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ. ಅದರಲ್ಲಿ ನಿತ್ಯವೂ ಸಾವಿರಾರು ಜನರು ಭೇಟಿ ನೀಡುವ ಇಬ್ರಾಹಿಂ ರೋಜಾ, ತಾಜಬಾವಡಿ ಸ್ಮಾರಕಗಳ ಸುತ್ತಲೂ ಚರಂಡಿ ನೀರಿನ ದುರ್ವಾಸನೆ ಮಾತ್ರವಲ್ಲದೇ, ಸುತ್ತಲೂ ತಿಪ್ಪೆಗುಂಡಿಗಳನ್ನು ಹಾಕಲಾಗಿದೆ. ಪರಿಣಾಮ ದೇಶ-ವಿದೇಶಿ ಪ್ರವಾಸಿಗರಿಗೆ ವಿಜಯಪುರ ಜಿಲ್ಲೆಯ ಪಾರಂಪರಿಕ ಸ್ಮಾರಕಗಳ ವೀಕ್ಷಣೆ ಪ್ರವಾಸದ ಕುರಿತು ನಕಾರಾತ್ಮಕ ಸಂದೇಶ ರವಾನಿಸುವಂತಾಗಿದೆ.
ಇಂಥ ಹಲವು ಕಾರಣಗಳಿಂದಾಗಿ ಐತಿಹಾಸಿಕ ಸ್ಮಾರಕಗಳು ಬಯಲು ಶೌಚಾಲಯಗಳಾಗಿ ಪರಿವರ್ತನೆ ಗೊಂಡಿದ್ದರೆ, ಪಾರಂಪರಿಕ ಕಂದಕಗಳು ಚರಂಡಿ-ಕೊಳಚೆ ಸಂಗ್ರಹಾಗಾರವಾಗಿ ಮಾರ್ಪಾಡಾಗಿವೆ. ಪ್ರವಾಸೋದ್ಯಮ ಅಭಿವೃದ್ಧಿ ಮೇಲೆ ಪುರಾತತ್ವ ಇಲಾಖೆ ಹಾಗೂ ಪಾಲಿಕೆ ಅಧಿಕಾರಿಗಳ ಮಧ್ಯದ ಈ ಸಂಘರ್ಷ ನೇರ ಪರಿಣಾಮ ಬೀರುವಂತಾಗಿದೆ.
•ಜಿ.ಎಸ್. ಕಮತರ