ಮೈಸೂರು: ಮನುಷ್ಯನ ನಡುವೆ ಉಂಟಾಗಿರುವ ಗೋಡೆಗಳನ್ನು ಕೆಡುಗುವ ಕೆಲಸವನ್ನು ಪುಸ್ತಕಗಳು ಮಾಡಬೇಕು ಎಂದು ವಿದ್ವಾಂಸ ಪ್ರೊ.ರಾಮೇಗೌಡ (ರಾಗೌ) ತಿಳಿಸಿದರು.
ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ವಾಚಸ್ಪತಿ ಪ್ರಕಾಶನದಿಂದ ನಡೆದ ಪ್ರೊ.ಸಿ.ಪಿ.ಸಿದ್ಧಾಶ್ರಮ ಅವರ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ನುಡಿದಂತೆ ಬದುಕಬೇಕು. ಬರೆದಂತೆ ಜೀವಿಸಬೇಕು. ಬರವಣಿಗೆ ಬದುಕಾಗಬೇಕು ಎಂಬುದು ಪ್ರೊ.ಸಿ.ಪಿ. ಸಿದ್ಧಾಶ್ರಮ ನಿಲುವು. ಸಾಹಿತ್ಯ ವಲಯವನ್ನು ವಿಸ್ತರಿಸಿಕೊಂಡೇ ವಿಮರ್ಶೆ ಕ್ಷಿತಿಜವನ್ನು ಅವರು ದಾಟಿ ದ್ದಾರೆ. ಸಿದ್ಧಾಶ್ರಮ ಅವರು
ಇಚ್ಛಾಶಕ್ತಿಯಿಂದ ಮೇಲೆ ಬಂದವರು. ಜೀವನವನ್ನು ಪ್ರೀತಿಯಿಂದ ಬದುಕು ರೂಪಿಸಿಕೊಂಡರು. ಕನ್ನಡದ ಪ್ರಮುಖ ಬರಹಗಾರರು, ಉತ್ತಮ ವಿದ್ವಾಂಸರು ಹಾಗೂ ಕವಿಯಾಗಿಯೂ ಆಗಿ ದ್ದಾರೆ ಎಂದರು.
ಲೇಖಕ ಸಿದ್ಧಾಶ್ರಮ ಅವರು ಸೃಜನಶೀಲ, ಸೃಜನಶೀಲಯೇತರ ಎರಡು ವಿಭಾಗದಲ್ಲಿಯೂ ಕೆಲಸ ಮಾಡಿದ್ದಾರೆ. ಜೀವನದ ಮೌಲ್ಯವನ್ನು ಸಾಹಿತ್ಯ ಮೌಲ್ಯವಾಗಿಸಿಕೊಂಡಿದ್ದಾರೆ. ಸಾಮಾಜಿಕ, ವೈಚಾರಿಕ ಮನೋಭಾವ ಇವರ ಬರವಣಿಗೆಯಲ್ಲಿ ಕಂಡು ಬರುತ್ತದೆ. ಅರಿವು ಮತ್ತು ಎಚ್ಚರ ಬರವಣಿಗೆಯಲ್ಲಿ ಮನೆ ಮಾಡಿದೆ. ನೇರ ನಡೆ, ರಾಜಿ ಮಾಡಿಕೊಳ್ಳದ ಧೋರಣೆ, ಸಾಮಾಜಿಕ ಬದ್ಧತೆ, ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಇವರ ಬರವಣಿಗೆಯಲ್ಲಿ ಕಂಡು ಬರುವ ಪ್ರಮುಖ ಸಂಗತಿಯಾಗಿದೆ ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಮಾತನಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಬಿ.ವಿ.ವಸಂತ ಕುಮಾರ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಂ.ಜಿ. ಮಂಜುನಾಥ್, ಜಾನಪದ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ನಂಜಯ್ಯ ಎಂ.ಹೊಂಗನೂರು, ಇಂಗ್ಲಿಷ್ ಪ್ರಾಧ್ಯಾಪಕರಾದ ಪ್ರೊ.ಕೃಷ್ಣಕುಮಾರಿ ಮನವಳ್ಳಿ, ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಪ್ರೊ.ಕೆ.ತಿಮ್ಮ , ಡಾ.ಎಚ್.ಎಲ್.ಶೈಲಾ ಹಾಜರಿದ್ದರು.