Advertisement

ಇತಿಹಾಸದ ಮೌಲ್ಯ ದೊಡ್ಡದು

04:57 PM Apr 07, 2018 | |

ಶಿವಮೊಗ್ಗ: ಸಮಾಜಕ್ಕೆ ಮರೆವಿನ ಕಾಯಿಲೆ ಬರಬಾರದು. ಇತಿಹಾಸವನ್ನು ಕಡೆಗಣಿಸಿದರೆ ಸಮಾಜಕ್ಕೆ ಆಲ್‌ಸೈಮರ್ಸ್‌
ರೋಗ ಬಂದಂತೆ ಎಂದು ಇತಿಹಾಸಕಾರ ಪ್ರೊ| ಬಿ. ಸುರೇಂದ್ರರಾವ್‌ ಅಭಿಪ್ರಾಯಪಟ್ಟರು.

Advertisement

ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು ಭಾರತೀಯ ಇತಿಹಾಸ ಸಂಕಲನ ಸಮಿತಿಯ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿರುವ “ಕರ್ನಾಟಕದಲ್ಲಿ

ಕ್ವಿಟ್‌ ಇಂಡಿಯಾ ಚಳವಳಿ: ವಿವಿಧ ಆಯಾಮಗಳು’ ಕುರಿತ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ
ಭಾಷಣಕಾರರಾಗಿ ಅವರು ಮಾತನಾಡಿದರು. ಕ್ವಿಟ್‌ ಇಂಡಿಯಾ ಚಳವಳಿ ಕುರಿತು ಮಾತನಾಡಿದ ಅವರು, ಇತಿಹಾಸ ನಮ್ಮ ಸಮಾಜದ ಸ್ಮೃತಿಪಟಲದಲ್ಲಿ ಸೃಷ್ಟಿಸಿರುವ ಸಾಂಕೇತಿಕ ಘಟನೆ ಮತ್ತು ಐತಿಹಾಸಿಕ ಮೈಲಿಗಲ್ಲುಗಳು ಸಮಕಾಲೀನ ಸಮಾಜಕ್ಕೆ ಏಕೆ ಪ್ರಸ್ತುತ ಎಂಬುದನ್ನು ಉಲ್ಲೇಖೀಸುತ್ತಾ, ಸಿಪಾಯಿ ದಂಗೆ, ಚೌರಿಚೌರಾ, ಉಪ್ಪಿನ ಸತ್ಯಾಗ್ರಹ, ಕ್ವಿಟ್‌ ಇಂಡಿಯಾದಂತಹ ಚಳುವಳಿ
ಭಾರತೀಯ ಸಮಾಜ ಯಾವತ್ತಿಗೂ ಮರೆಯಬಾರದಂತಹ ಸಂಕೇತಗಳಾಗಿ ನಿಲ್ಲಬೇಕು ಎಂದರು.

ಕ್ವಿಟ್‌ ಇಂಡಿಯಾ ಗಾಂಧೀಜಿ ಅವರ ಹೆಸರಿನಲ್ಲಿ ನಡೆದ ಕೊನೆಯ ಚಳವಳಿ. ಆರಂಭವಾದ ಕೆಲವೇ ತಿಂಗಳುಗಳಲ್ಲಿಯೇ ಬ್ರಿಟಿಷ್‌ ಸರ್ಕಾರ ಚಳವಳಿಯನ್ನು ಹತ್ತಿಕ್ಕಿತು. ಆದರೂ ಕೂಡ 1942ರಲ್ಲಿ ಶುರುವಾದ ಚಳವಳಿ ಕಾವು 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬರುವವರೆಗೂ ಇತ್ತು. ಗಾಂಧೀಜಿ, ನೆಹರು, ವಲ್ಲಭಬಾಯಿ ಪಟೇಲ್‌ ರಂತಹ ಅಗ್ರಪಂಕ್ತಿಯ ನಾಯಕರು ಬಂಧನಕ್ಕೊಳಗಾದ ನಂತರ, ಅರುಣಾ ಅಸಫ್‌ ಅಲಿ, ವೈ.ಬಿ. ಚವ್ಹಾಣ್‌ರಂತಹ ಎರಡನೆ ಹಂತದ ನಾಯಕರು ಮತ್ತು ವಿದ್ಯಾರ್ಥಿಗಳು ಕ್ವಿಟ್‌ ಚಳುವಳಿಯ ಕಾವನ್ನು ಕಾಪಾಡಿಕೊಂಡು ಬಂದಿದ್ದರು ಎಂದು ವಿಶ್ಲೇಷಿಸಿದರು.

1857ರಲ್ಲಿ ಸಿಪಾಯಿ ದಂಗೆಯ ಮೂಲಕ ಪ್ರಾರಂಭವಾದ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಕ್ವಿಟ್‌ ಇಂಡಿಯಾ ಚಳವಳಿ ಮೂಲಕ ಪರಿಪೂರ್ಣಗೊಳ್ಳುತ್ತದೆ. ಅಹಿಂಸಾತ್ಮಕವಾಗಿದ್ದ ಭಾರತೀಯರ ಹೋರಾಟ ಸ್ವಲ್ಪ ಮಟ್ಟಿಗೆ ಹಿಂಸಾತ್ಮಕ ಸ್ವರೂಪ ಪಡೆದುಕೊಳ್ಳುತ್ತದೆ. ಕ್ವಿಟ್‌ ಇಂಡಿಯಾದ ಪ್ರತಿಧ್ವನಿ ಸುಭಾಷ್‌ ಚಂದ್ರ ಬೋಸ್‌ ಅವರ ಐಎನ್‌ ಎಗೆ ಕೂಡ ಸ್ಫೂರ್ತಿದಾಯಕವಾಯಿತು. ವಿದ್ಯಾರ್ಥಿಗಳು ಮೊಟ್ಟಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಮೊದಲ ಚಳವಳಿ ಇದು ಎಂದು ವಿವರಿಸಿದರು.

Advertisement

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಮಹಾತ್ಮ ಗಾಂಧಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಜಿ.ಬಿ. ಶಿವರಾಜ, ಇತಿಹಾಸದ ಬಗ್ಗೆ ಸೂಕ್ತ ತಿಳುವಳಿಕೆಯಿಲ್ಲದವರು ಗಾಂಧೀಜಿ, ಅಂಬೇಡ್ಕರ್‌, ಭಗತ್‌ ಸಿಂಗ್‌ ಅವರಂತಹ ವ್ಯಕ್ತಿಗಳನ್ನು ಮತ್ತು ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ತಪ್ಪಾಗಿ ವಿಶ್ಲೇಷಿಸಿ ಸಮಾಜದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮಹಾನ್‌ ಸಾಧಕರು ಮತ್ತು ಚಿಂತಕರ ಉದಾತ್ತವಾದ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬ ಇತಿಹಾಸಕಾರನ ಕರ್ತವ್ಯ
ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ| ಜೋಗನ್‌ ಶಂಕರ್‌, ಅಂಬೇಡ್ಕರ್‌ ಮತ್ತು ಗಾಂಧೀಜಿ ಅವರನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದು, ಅವರ ಅನುಯಾಯಿಗಳ ಸಮಸ್ಯೆ. ಸಮಾಜದಲ್ಲಿ ಹೆಚ್ಚುತ್ತಿರುವ ಕೋಮುವಾದ ಮತ್ತು ಜಾತಿವಾದವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಇತಿಹಾಸ ದಾರಿದೀಪವಾಗಲಿ ಎಂದು ಆಶಿಸಿದರು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪರಮೇಶ್ವರ್‌, ಇತಿಹಾಸ ಸಂಕಲನ ಸಮಿತಿಯ ರಾಜ್ಯ ಉಪಾಧ್ಯಕ್ಷ ಖಂಡೋಬ ರಾವ್‌, ಸ್ಥಳೀಯ ಕಾರ್ಯದರ್ಶಿ ನಿಧಿನ್‌
ಓಲೀಕರ್‌ ಇದ್ದರು. ಕುಲಸಚಿವ ಪ್ರೊ| ಎಚ್‌ ಎಸ್‌. ಭೋಜ್ಯಾನಾಯ್ಕ ಅತಿಥಿಗಳಾಗಿದ್ದರು. ಪ್ರೊ| ರಾಜಾರಾಂ ಹೆಗಡೆ ಸ್ವಾಗತಿದರು. ಪ್ರೊ| ಬಾಲಕೃಷ್ಣ ಹೆಗಡೆ ವಂದಿಸಿದರು. ಡಾ| ಹಸೀನಾ ಖಾದ್ರಿ ನಿರೂಪಿಸಿದರು.

ನಂತರ ನಡೆದ ಗೋಷ್ಠಿಗಳಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ| ಜಮುನಾ, ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ| ಮುಗಳಿ ಮತ್ತಿತರರು ವಿಚಾರ ಮಂಡಿಸಿದರು.

ಸನ್ಮಾನ: ಇದೇ ಸಂದರ್ಭದಲ್ಲಿ ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಹಿರಿಯ ಸ್ವಾತಂತ್ರ್ಯ ಯೋಧರಾದ ಈಸೂರಿನ ಎನ್‌.ಎಸ್‌.ಹುಚ್ಚರಾಯಪ್ಪ (107) ಮತ್ತು ಶಿವಮೊಗ್ಗದ ಎಂ.ಡಿ. ಶ್ಯಾಮಾಚಾರ್‌ (92) ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next