Advertisement

ಒಂದು ಮತದ ಮೌಲ್ಯ

12:30 AM May 10, 2018 | |

ಭಾರತವು ಗಣರಾಜ್ಯವಾದಾಗ ನಮ್ಮದೇ ಸಂವಿಧಾನ ಜಾರಿಗೆ ಬಂದಿತು. ಸಂವಿಧಾನದ ಕಲಂ 326ರಲ್ಲಿ ಮತ ಚಲಾವಣೆಯ ಹಕ್ಕನ್ನು ಭಾರತೀಯರಿಗೆ ನೀಡಲಾಯಿತು. ಹದಿನೆಂಟು ವರುಷ ತುಂಬಿದ ಭಾರತೀಯರೆಲ್ಲರಿಗೂ ಈ ಹಕ್ಕು ಲಭಿಸಿದೆ. ನಂತರ ನಡೆದ ಅನೇಕ ಚುನಾವಣೆಗಳಲ್ಲಿ ಜನರು ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿದ್ದಾರೆ. ಇದರ ಫ‌ಲವಾಗಿ ದೇಶದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಆಳವಾಗಿ ಇಳಿದಿವೆ. ಚುನಾವಣೆ ಸುಧಾರಣೆಗಳ ಬಗ್ಗೆ ಅಂದಿನ ಚುನಾವಣಾ ಆಯೋಗದ ಅಧ್ಯಕ್ಷರಾದ ಟಿ.ಎನ್‌. ಶೇಷನ್‌ ಕೈಗೊಂಡ ಬದಲಾವಣೆಗಳು ಉಲ್ಲೇಖಾರ್ಹ. 

Advertisement

ಆದರೂ ಕಳೆದ ಎರಡು ದಶಕಗಳಿಂದ ಚುನಾವಣೆಯಲ್ಲಿ ಮತದ ಹಕ್ಕನ್ನು ಚಲಾಯಿಸುವ ಸುಶಿಕ್ಷಿತರ ಸಂಖ್ಯೆ ಕಡಿಮೆ ಆಗುತ್ತಲಿದೆ. ಅದರಲ್ಲೂ ನಗರ ಪ್ರದೇಶಗಳ ಯುವ ಮತದಾರರು ಮತ ಚಲಾವಣೆಯಿಂದ ವಿಮುಖರಾಗುತ್ತಿದ್ದಾರೆ. ಇದಕ್ಕೆ ಹಲವಾರು ಕಾರಣಗಳು ಉಂಟು. 

ಮತದಾರರಲ್ಲಿ ಉದಾಸೀನತೆ, ನಿರಾಶಾವಾದ, ಜಡ ಮನೋಭಾವ, ಜಾತಿ ರಾಜಕಾರಣ, ಹಣ, ಹೆಂಡದ ಅಟ್ಟಹಾಸ, ಸಮರ್ಥ ಅಭ್ಯರ್ಥಿಗಳ ಕೊರತೆ, ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳು, ಅಧಿಕಾರಕ್ಕಾಗಿ ಕಚ್ಚಾಡುವ ರಾಜಕಾರಣಿಗಳು ಮುಂತಾದವುಗಳು. ಇನ್ನೂ ಅನೇಕ ಕಾರಣಗಳನ್ನು ಗುರುತಿಸಬಹದು. ಇಂತಹ ಸಂಕೀರ್ಣ ಸವಾಲುಗಳ ಮಧ್ಯೆ ಹೆಚ್ಚಿನ ಪ್ರಮಾಣದಲ್ಲಿ ವೋಟಿಂಗ್‌ ಸಾಧ್ಯವೇ ಎಂಬ ಪ್ರಶ್ನೆ ಮಾಡುತ್ತದೆ.

 ಭಾರತದ ಚುನಾವಣಾ ಆಯೋಗ ಈ ದಿಕ್ಕಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಆಸ್ತಿ ವಿವರಗಳ ಘೋಷಣೆ, ಚುನಾವಣಾ ವೆಚ್ಚದ ಮೇಲೆ ನಿರ್ಬಂಧ, ಪ್ರಚಾರದ ಅವಧಿ ಕಡಿತ, ವಿದ್ಯುನ್ಮಾನ ಮತ ಯಂತ್ರ-ಇತ್ಯಾದಿ. ಆದರೂ ಚುನಾವಣೆಯ ದಿನ-ಮತದಾರ ಪಟ್ಟಿಯ ಗೊಂದಲಗಳು, ಮತ ಚೀಟಿ ಇದ್ದರೂ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದು, ನಕಲಿ ಗುರುತಿನ ಚೀಟಿಗಳಂಥ ಸಮಸ್ಯೆಗಳು ಮುಂದುವರಿದಿವೆ. ಕಂಪ್ಯೂಟರ್‌ ಯುಗದಲ್ಲಿ ಈ ಸಮಸ್ಯೆಗಳ ನಿವಾರಣೆ ಅಸಾಧ್ಯವಾದುದೇನೂ ಇಲ್ಲ. 

ಈ ರೀತಿಯ ತಪ್ಪುಗಳಿಂದಾಗಿ ಅನೇಕ ಮತದಾರರಿಗೆ ವೋಟಿಂಗ್‌ ಎಂದರೆ ರೇಜಿಗೆ ಹುಟ್ಟುವಂತಾಗಿಬಿಟ್ಟಿದೆ. ಈ ಸಮಸ್ಯೆಗಳನ್ನು ಬಗೆಹರಿಸಿ, ಸುಧಾರಣೆ ತರುವತ್ತ ತುರ್ತು ಗಮನ ಹರಿಸಬೇಕಿದೆ. ಇಂಥ ಅನೇಕ ಸಂಗತಿಗಳು ಜನರಲ್ಲಿ ವ್ಯವಸ್ಥೆ ಬಗ್ಗೆ ಅಪನಂಬಿಕೆ ಮೂಡಲು ಕಾರಣವಾಗಿವೆ. ಇಂದು ಚುನಾವಣಾ ಪ್ರಕ್ರಿಯೆಯಲ್ಲಿ ನಡೆಯುವ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವ ಕಾನೂನುಗಳ ಬಗ್ಗೆಯೂ ಜನರಿಗೆ ಅಪನಂಬಿಕೆ ಹೆಚ್ಚುತ್ತಲೇ ಇರುವುದು ವಿಪರ್ಯಾಸ. 

Advertisement

ಗಮನಿಸಬೇಕಾದ ಸಂಗತಿಯೆಂದರೆ, ವೋಟಿಂಗ್‌ ಅನ್ನು ಮತದಾನ ಎಂದು ಕರೆಯಲಾಗುತ್ತದಾದರೂ ಅದ‌ು ದಾನ ವಾಗಲೇಬಾರದು. ಏಕೆಂದರೆ ದಾನ ಮಾಡಿದವನು ತೆಗೆದುಕೊಂಡವನಿಗೆ ಏನೂ ಕೇಳಲು ಆಗುವುದಿಲ್ಲ! ಅದಕ್ಕೇ ಇದನ್ನು ಮತ ಚಲಾವಣೆ ಎಂದು ಕರೆಯುವುದೇ ಸೂಕ್ತ. ನಗರ ಪ್ರದೇಶ ಹಾಗೂ ಹಳ್ಳಿಗಳಲ್ಲಿ ಮತದಾರರಿಗೆ ಅನೇಕ ಆಮಿಷಗಳ ಸುರಿಮಳೆಯಾಗುತ್ತಲಿದೆ. ಮದ್ಯ ಅನೇಕ ಮಾರ್ಗಗಳ ಮೂಲಕ ಸರಬರಾಜು ಆಗುತ್ತಲಿದೆ. ಹಗಲು-ರಾತ್ರಿ ಹಣ ಹಂಚುವ ಕಾರ್ಯಸಾಗಿದೆ. ಜಾತಿ ರಾಜಕಾರಣದ ಕ್ಯಾನ್ಸರ್‌ ಸಮಾಜದಲ್ಲಿ ಎಲ್ಲ ತರಹದ ಕೆಡುಕನ್ನು ಮಾಡುತ್ತಾ ಬೆಳದಿದೆ. ಅವ್ಯಾಹತವಾಗಿ ನಡೆಯುತ್ತಲಿರುವ ಇಂಥ ಅನೇಕ ಅಕ್ರಮಗಳಿಗೆ ಕಡಿವಾಣ ಹಾಕಲು ಚುನಾವಣಾ ಆಯೋಗ ಪರಿಶ್ರಮಿಸುತ್ತಲಿದೆ. ಆದರೂ ಹಲವು ಪ್ರಕರಣಗಳು ವರದಿಯಾಗುತ್ತಲೇ ಇವೆ. 

ಇದೇನೇ ಇದ್ದರೂ ಮತದಾರರಾಗಿ ನಮಗೂ ಹಲವು ಜವಾಬ್ದಾರಿಗಳಿರುತ್ತವೆ. ಆದರೆ ನಾವು ಸಮಾಜದ ಸಮಸ್ಯೆಗಳಿಗೆ ಬಹಿರ್ಮುಖವಾಗಿ ನಿಲ್ಲುತ್ತೇವೆ. ಪರಿಹಾರದ ಪ್ರಶ್ನೆ ಬಂದಾಗ ಪಲಾಯನ ಮಾಡುತ್ತೇವೆ. ಸಮಸ್ಯೆಗಳ ಬಗ್ಗೆ ಅನೇಕರೊಂದಿಗೆ ಮಾತನಾಡುತ್ತೇವೆ. ಆದರೆ ರಾಜಕೀಯ ಸುಧಾರಣೆಯೂ ಸಮಾಜ ಸುಧಾರಣೆಯ ಒಂದು ಪ್ರಮುಖ ಭಾಗ ಎಂಬುದನ್ನು ಮರೆತಿದ್ದೇವೆ. ಭಾರತಕ್ಕೆ ಭವಿಷ್ಯವೇ ಇಲ್ಲ ಎಂಬ ಜಡತ್ವವನ್ನು ತುಂಬಿಕೊಂಡಿದ್ದೇವೆ. ಸಕ್ರಿಯರಾದವರನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಅದರಲ್ಲಿ ಚುನಾವಣಾ ನಿರಾಸಕ್ತಿಯೂ ಒಂದು. ಚುನಾವಣೆಯ ದಿನ ಹಲವರಿಗೆ ರಜೆಯ ದಿನ! 

ಅಂದು ಮನೆಯಲ್ಲಿ ಕುಳಿತುಕೊಂಡು ಪತ್ರಿಕೆಗಳನ್ನು ಓದುತ್ತಾ, ಟಿ.ವಿ. ನೋಡುತ್ತಾ ಅಥವಾ ಪ್ರವಾಸಕ್ಕೂ ಹೋಗಿ ದಿನವನ್ನು ವ್ಯರ್ಥ ಮಾಡುತ್ತೇವೆ. ನನ್ನ ಒಂದು ಮತದಿಂದ ಬದಲಾವಣೆ ಆಗುವುದಿಲ್ಲ ಎಂಬ ಅನಗತ್ಯ ಹತಾಶೆಯು ಈ ನಿರಾಸಕ್ತಿಗೆ ಕಾರಣ. ಆದರೆ ನಾವು ಚಲಾಯಿಸುವ ಒಂದು ಮತಕ್ಕೆ ರಾಜ್ಯದ ಭವಿಷ್ಯವನ್ನು ಬದಲಿಸುವ ಶಕ್ತಿಯಿರುತ್ತದೆ. 

ಪ್ರಜಾಪ್ರಭುತ್ವ ಪಾಳೆಗಾರಿಕೆಯಾಗಬಾರದು. ಹೀಗಾಗಿ ನಾವು ವರ್ತಮಾನದ ಕ್ರಿಯೆಗಳಿಂದ ಭವಿಷ್ಯವನ್ನು ಭದ್ರಗೊಳಿಸಬೇಕು. ಪ್ರಜಾಪ್ರಭುತ್ವವನ್ನು ಸಕ್ರಿಯ ಹಾಗೂ ಸಬಲಗೊಳಿಸಬೇಕು. ಈ ಕ್ರಿಯೆಯಲ್ಲಿ ಮುಖ್ಯವಾಗಿ ಯುವಕರು, ವಿದ್ಯಾರ್ಥಿಗಳು, ಮಹಿಳೆಯರು, ರೈತರು, ಕೂಲಿ-ಕಾರ್ಮಿಕರು, ಸ್ವಸಹಾಯ ಗುಂಪುಗಳು ಮತ್ತು ಸಮಾಜದ ಎಲ್ಲ ವರ್ಗಗಳ ಜನರು ಭಾಗಿಯಾಗಬೇಕು. 

ಪ್ರತಿ ಅಭ್ಯರ್ಥಿಯೂ ತನ್ನ ಅರ್ಹತೆಯ ಆಧಾರದ ಮೇಲೆಯೇ ಆಯ್ಕೆಯಾಗಬೇಕು. ಎಚ್ಚೆತ್ತ ಮತದಾರನಿಂದ ಒಳ್ಳೆಯ ನಾಯಕರ ಹಾಗೂ ವ್ಯವಸ್ಥೆಯ ನಿರ್ಮಾಣ ಸಾಧ್ಯವಿದೆ. ಚುನಾವಣೆಯ ದಿನ ಜಾತಿ, ಹೆಂಡ, ಹಣದ ಆಮಿಷಗಳಿಗೆ ಬಲಿಯಾಗದೇ ಮತ ಚಲಾಯಿಸಬೇಕು. ನಾವೆಲ್ಲರೂ ಸರಿಯಾದ ವ್ಯಕ್ತಿಯನ್ನು ಆರಿಸಿ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡೋಣ.

ಗೋಪಾಲಕೃಷ್ಣ ಕಮಾಲಾಪುರ

Advertisement

Udayavani is now on Telegram. Click here to join our channel and stay updated with the latest news.

Next