Advertisement

ಕರುನಾಡಿನ ವೈಷ್ಣೋ ದೇವಿ

07:27 PM Oct 04, 2019 | Lakshmi GovindaRaju |

ವೈಷ್ಣೋ ದೇವಿ ದೇಗುಲ, ಜಮ್ಮು ಮತ್ತು ಕಾಶ್ಮೀರದ, ಕಾಟ್ರಾ ಸಮೀಪವಿರುವ ಅತ್ಯಂತ ಸುಪ್ರಸಿದ್ಧ ಶಕ್ತಿಪೀಠ. ಆ ದೇಗುಲದ ತದ್ರೂಪವನ್ನೇ ಉತ್ತರ ಕರ್ನಾಟಕದ ಕಲಬುರ್ಗಿಯಲ್ಲಿ ನಿರ್ಮಿಸಲಾಗಿದೆ. ಕಲಬುರ್ಗಿಯ ಆಳಂದ ರಸ್ತೆಗೆ ಹೊಂದಿಕೊಂಡಿರುವ ಗಬರಾದಿ ಲೇಔಟ್‌ನಲ್ಲಿ 2 ಎಕರೆ ವಿಶಾಲ ಜಾಗದ ಮಧ್ಯೆ ವೈಷ್ಣೋ ದೇವಿ, ಪ್ರತಿಷ್ಠಾಪಿತಳಾಗಿದ್ದಾಳೆ. ಕಲಬುರ್ಗಿಯ ವರ್ತಕರಾದ ಗಬರಾದಿ ಮನೆತನದವರ ಕನಸಿನ ಪ್ರತಿಫ‌ಲವೇ ಈ ವೈಷ್ಣೋ ದೇವಿ ದೇಗುಲ. ಬಡಬಗ್ಗರು ಜಮ್ಮು ಪ್ರವಾಸ ಕೈಗೊಂಡು ದೇವಿಯ ದರ್ಶನ ಮಾಡುವುದು ಅಸಾಧ್ಯ. ಈ ಕಾರಣಕ್ಕೆ ಇವರು ಇಲ್ಲಿ ದೇಗುಲ ಕಟ್ಟಿದರು.

Advertisement

ವಿನ್ಯಾಸವೇ ಆಕರ್ಷಕ: ಈ ದೇಗುಲದ ವಿನ್ಯಾಸಕ್ಕೆ ತಲೆದೂಗಲೇಬೇಕು. ಕಲ್ಲಿನ ಗೋಡೆಗೆ ಸಿಮೆಂಟ್‌ ಮತ್ತು ಕಬ್ಬಿಣದ ಸರಳು ಬಳಸಿ ಮಾಡಿದ ನೂರಾರು ಕೆಂಪು ಬಣ್ಣದ, ವಿವಿಧ ಗಾತ್ರದ ಕೃತಕ ಗುಂಡುಕಲ್ಲುಗಳೇ ಈ ದೇಗುಲದ ಪ್ರಮುಖ ಆಕರ್ಷಣೆ. ಮುಗಿಲು ಚುಂಬಿಸುವಂತೆ ಭಾಸ ಆಗುವಷ್ಟು ಎತ್ತರ ನಿರ್ಮಿಸಿರುವ ದೇಗುಲವನ್ನು ನೋಡೋದೇ ಒಂದು ವಿಶೇಷ ಅನುಭೂತಿ. ದೇಗುಲದ ನೆತ್ತಿ ಮೇಲಿಂದ ಸಣ್ಣದಾಗಿ ಬೀಳುವ ನೀರು ಜಲಪಾತದಂತೆ ಕಂಗೊಳಿಸುತ್ತದೆ. ಇಡೀ ಕೆಂಪು ಗುಡ್ಡದ ನೆತ್ತಿಯ ಮೇಲೆ ಮತ್ತು ಅಲ್ಲಲ್ಲಿ ಬಿಳಿ ಬಣ್ಣದ ದೇಗುಲಗಳು, ಶಿಖರಗಳು… ಸೂಜಿಗಲ್ಲಿನಂತೆ ಸೆಳೆಯುತ್ತವೆ.

ಕಣಿವೆಯ ನೆತ್ತಿಯಲ್ಲಿ ದೇವಿ: ಗುಡ್ಡಗಾಡು, ಏಳು ಸುತ್ತಿನ ಕೋಟೆ ಹೋಲುವ ದೇಗುಲ 108 ಅಡಿ ಎತ್ತರದಲ್ಲಿದೆ. ತುತ್ತತುದಿಯಲ್ಲಿ ಭೈರವನ ದೇಗುಲವಿದ್ದರೆ, ಅದಕ್ಕಿಂತ ಮೊದಲು ವೈಷ್ಣೋ ದೇವಿಯ ಸನ್ನಿಧಿ ಇದೆ. ಮೇಲೇರಲು ಮೆಟ್ಟಿಲುಗಳ ಬದಲಾಗಿ, ಸಮತಟ್ಟಾದ ದಾರಿ ನಿರ್ಮಿಸಲಾಗಿದೆ. ವಯೋವೃದ್ಧರಿಗೆ ಆರೋಹಣ ಮಾಡಲು ಕಷ್ಟವಾದರೆ, ಲಿಫ್ಟ್ ಸೌಲಭ್ಯವೂ ಉಂಟು. ಸೊಳ್ಳಂಬಳ್ಳ ಹಾದಿಯನ್ನು ಸುತ್ತು ಹಾಕಿ ಮೇಲೇರುವಾಗ, ಸುರಂಗ, ಗುಹೆಗಳು ಸಿಗುತ್ತವೆ. “ಯಾವುದೋ ಗುಹಾಂತರ ದೇಗುಲವನ್ನು ನೋಡಿದ ಖುಷಿ ಆಗುತ್ತದೆ’ ಎನ್ನುತ್ತಾರೆ, ಪ್ರವಾಸಿಗ ಚಿದಾನಂದ.

ಜೈಪುರದಿಂದ ಬಂದ ಮೂರ್ತಿಗಳು
ಪ್ರವೇಶ ದ್ವಾರದಲ್ಲಿಯೇ ಚರಣ ಪಾದುಕೆಯ ದರ್ಶನವಾಗುತ್ತದೆ. ನಂತರ ಗಣಪತಿ, ಹನುಮಾನ್‌, ಅರ್ಧಕವಾರಿ, ದತ್ತಾತ್ರೇಯ, ಬಾಲಾಜಿ, ಮಹಾಕಾಳಿ.. ಹೀಗೆ ಅನೇಕ ದೇವರುಗಳ ದರ್ಶನ ಆಗುತ್ತದೆ. ನಂತರ ಸಿಗುವುದು ಭೈರವ. “ಇನ್ನೂ ದೇಗುಲ ಕಟ್ಟುವ ಕಾರ್ಯ ಪ್ರಗತಿಯಲ್ಲಿದ್ದು, ಭವಿಷ್ಯದಲ್ಲಿ ಮಂಜುಗಡ್ಡೆಯ ಅಮರನಾಥ ಶಿವಲಿಂಗ ಮತ್ತು 12 ಜ್ಯೋತಿರ್ಲಿಂಗ, ರಾಘವೇಂದ್ರ, ಅಯ್ಯಪ್ಪ, ಮಹಾವೀರ, ನವಗ್ರಹ ದೇವಾಲಯ ಸ್ಥಾಪನೆ ಮಾಡುತ್ತೇವೆ’ ಎನ್ನುತ್ತಾರೆ ದೇಗುಲದ ಟ್ರಸ್ಟಿ ರಾಜಕುಮಾರ್‌. ಇಲ್ಲಿರುವ ಎಲ್ಲಾ ಮೂರ್ತಿಗಳನ್ನೂ ಜೈಪುರದಿಂದ ತಂದಿರುವುದು ವಿಶೇಷ.

ದರುಶನಕೆ ದಾರಿ…: ಕಲಬುರ್ಗಿ ನಗರದಿಂದ 4 ಕಿ.ಮೀ. ದೂರದಲ್ಲಿ ವೈಷ್ಣೋ ದೇವಿಯ ದೇಗುಲವಿದೆ. ಸಿಟಿ ಬಸ್ಸಿನ ವ್ಯವಸ್ಥೆಯಿದೆ.

Advertisement

* ಸ್ವರೂಪಾನಂದ ಕೊಟ್ಟೂರು

Advertisement

Udayavani is now on Telegram. Click here to join our channel and stay updated with the latest news.

Next