ಧಾರವಾಡ: ವಚನ ಸಾಹಿತ್ಯ ಕನ್ನಡದ ಅಂತಃಸತ್ವದ ರಸಪಾಕ. ವಚನ ಸಾಹಿತ್ಯ ಎರವಲು ತಂದದ್ದಲ್ಲ. ಅದು ಕನ್ನಡದ ಸ್ವಯಾರ್ಜಿತ ಸ್ವತ್ತು. ವಚನಕಾರರೆಲ್ಲ ಅಚ್ಚಕನ್ನಡದ ಬೇಸಾಯಗಾರರು. ಶರಣರ ವಚನಗಳು ಆತ್ಮಸಾಕ್ಷಾತ್ಕಾರ ಮೂಡಿಸುವ ದೇವಗನ್ನಡಿಯಾಗಿವೆ ಎಂದು ಹಿರಿಯ ಸಾಹಿತಿ ಡಾ| ವೀರಣ್ಣ ರಾಜೂರ ಹೇಳಿದರು.
ಬಸವಣ್ಣನವರು ಆಡುಭಾಷೆಯನ್ನೇ ದೇವಭಾಷೆ ಯನ್ನಾಗಿ ಮಾಡಿದರು. ಅವರ ಘನ ಕೃಪೆಯಿಂದ ವಚನಗಳು ಮಹಾಮಂತ್ರಗಳಾದವು. ಶರಣರು ಲೋಕಪೂಜ್ಯರಾದರು. ವಚನಗಳು ಜನಸಾಮಾನ್ಯರ ಆಂದೋಲನದ ಒಂದು ಭಾಗವಾಗಿ ಬೆಳೆದು ಬಂದಿತು. ಅವು ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶೇಷ ಕಾವ್ಯಪ್ರಕಾರವಾಗಿದೆ ಎಂದರು.
ಖ್ಯಾತ ಹಿಂದುಸ್ತಾನಿ ಸಂಗೀತಗಾರ ಡಾ|ಎಂ. ವೆಂಕಟೇಶಕುಮಾರ ಮಾತನಾಡಿ, ಬಸವಾದಿ ಶರಣರ ವಚನಗಳನ್ನು ಸಂಗೀತಕ್ಕೆ ಅಳವಡಿಸುವುದು ತುಂಬಾ ಕಷ್ಟ. ಇದಕ್ಕೆ ಸಂಗೀತಗಾರನಿಗೆ ಸಾಕಷ್ಟು ಸಮಯಾವಕಾಶ, ತಾಳ್ಮೆ, ಶ್ರದ್ಧೆ ಅಗತ್ಯವಾಗಿದೆ. ಧಾರವಾಡದ ಈ ನೆಲ ಸಂಗೀತ-ಸಾಹಿತ್ಯದ ಪುಣ್ಯಭೂಮಿ. ಶರಣರ ವಚನಗಳನ್ನು ಸಂಗೀತದ ಮೂಲಕ ಆಲಿಸಿದರೆ ನಮ್ಮ ಜೀವನ ಮೌಲ್ಯಗಳನ್ನು ಅರಿಯಲು ಸಾಧ್ಯ ಎಂದು ಹೇಳಿದರು.
ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಮಾತನಾಡಿದರು. ವಚನ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಲಾವಣ್ಯ ಪಾಮಡಿ, ದ್ವಿತೀಯ ಸ್ಥಾನ ಪಡೆದ ಈರಪ್ಪ ಗೂಳೆಣ್ಣನವರ ಮತ್ತು ತೃತೀಯ ಸ್ಥಾನ ಪಡೆದ ಶರ್ಮಿಳಾ ಹಿರೇಮಠ ಅವರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಭಾರತಿ ಪರ್ವತೀಕರ ಸಮಾಧಾನಕರ ಬಹುಮಾನ ಪಡೆದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಡಾ|ಜ್ಯೋತಿಲಕ್ಷ್ಮೀ ಕೂಡ್ಲಗಿ, ಸುಜಾತಾ ಕಮ್ಮಾರ (ಗುರವ) ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.
Advertisement
ಕವಿಸಂನಲ್ಲಿ ಕಲಾಮಂಟಪವು ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ವಚನ ಗಾಯನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಶಿವಣ್ಣ ಬೆಲ್ಲದ ಸ್ವಾಗತಿಸಿದರು. ಕಲಾ ಮಂಟಪದ ಸಂಚಾಲಕ ಶಂಕರ ಕುಂಬಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಪ್ರಮಿಳಾ ಜಕ್ಕಣ್ಣವರ ಪ್ರಾರ್ಥಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಮೇಘಾ ಹುಕ್ಕೇರಿ ವಂದಿಸಿದರು.