ಹೊಸದಿಲ್ಲಿ: ಕೋವಿಡ್ ಲಸಿಕೆ “ಕೊವಾಕ್ಸಿನ್’ (covaxin)ಅನ್ನು ಆ.15ರ ಒಳಗಾಗಿ ಕ್ಲಿನಿಕಲ್ ಟ್ರಯಲ್ ನಡೆಸಿ ಬಳಕೆಗೆ ಬಿಡುಗಡೆ ಮಾಡಬೇಕು ಎಂಬ ನಿರ್ದೇಶನವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಮರ್ಥನೆ ನೀಡಿದೆ.
ಸ್ವಾತಂತ್ರ್ಯ ದಿನದಂದೇ ಲಸಿಕೆ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಈ ನಿರ್ದೇಶನ ನೀಡಲಾಗಿದೆ ಎಂಬ ಆರೋಪಗಳ ನಡುವೆಯೇ, ಈ ಬೆಳವಣಿಗೆ ನಡೆದಿದೆ. “ಜನರ ಆರೋಗ್ಯ ಸಂರಕ್ಷಣೆಯ ನಿಟ್ಟಿನಲ್ಲಿ ದೇಶಿಯವಾಗಿಯೇ ಲಸಿಕೆ ಕಂಡುಹಿಡಿದು ಅದನ್ನು ಜನರ ಉಪಯೋಗಕ್ಕೆ ಬಿಡುಗಡೆ ಮಾಡುವುದು ಉದ್ದೇಶ. ಜಗತ್ತಿನ ಇತರ ರಾಷ್ಟ್ರಗಳಲ್ಲಿ ಕೂಡ ಇದೇ ರೀತಿ ಶೀಘ್ರವಾಗಿ ಪ್ರಯೋಗಕ್ಕೆ ಒಳಪಡಿಸಲು ಸೂಚನೆ ಇದೆ’ ಎಂದು ಸ್ಪಷ್ಟನೆ ನೀಡಿದೆ.
ಕರ್ನಾಟಕದ ಬೆಳಗಾವಿಯಲ್ಲಿನ ಜೀವನರೇಖಾ ಆಸ್ಪತ್ರೆ ಸೇರಿದಂತೆ ಒಟ್ಟು 12 ಸಂಸ್ಥೆಗಳಿಗೆ ಶೀಘ್ರ ಲಸಿಕೆ ಪ್ರಯೋಗಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ.
ಕಾಂಗ್ರೆಸ್ ನಾಯಕ, ಮಹಾರಾಷ್ಟ್ರ ಕಂದಾಯ ಸಚಿವ ಅಶೋಕ್ ಚವಾಣ್ ಪ್ರತಿಕ್ರಿಯೆ ನೀಡಿ, ಪ್ರಧಾನಿಯವರು ಆ.15ರಂದು ಕೆಂಪು ಕೋಟೆಯಿಂದ ಭಾಷಣ ಮಾಡುವ ವೇಳೆ ದೊಡ್ಡ ಘೋಷಣೆ ಮಾಡುವ ನಿಟ್ಟಿನಲ್ಲಿಯೇ ಈ ದಿನಾಂಕ ನಿಗದಿ ಮಾಡಲಾಗಿದೆ ಎಂದು ದೂರಿದ್ದಾರೆ.
ಮತ್ತೊಂದೆಡೆ, ಕ್ಷಿಪ್ರ ಗತಿಯಲ್ಲಿ ಸೋಂಕು ಪತ್ತೆ ಕಿಟ್‌ಗೆ ಸಂಬಂಧಿಸಿದಂತೆ ಭಾರತ ಮತ್ತು ದಕ್ಷಿಣ ಕೊರಿಯಾ ಸಹಭಾಗಿತ್ವದ 14 ಕಂಪನಿಗಳ ಪೈಕಿ ಒಂದು ಸಂಸ್ಥೆಗೆ ಮಾತ್ರ ಐಸಿಎಂಆರ್ ಅನುಮತಿ ನೀಡಿದೆ.