Advertisement

ಲಸಿಕೆ ವ್ಯರ್ಥವಾಗದಂತೆ ನೋಡಿಕೊಳ್ಳಬೇಕಿದೆ

11:36 PM Mar 23, 2021 | Team Udayavani |

ದೇಶದಲ್ಲಿ ಕೊರೊನಾ ಲಸಿಕೆ ವಿತರಣೆ ಅಭಿಯಾನ ಆರಂಭವಾದಾಗಿನಿಂದ ಈವರೆಗೆ ಸರಾಸರಿ 6.5ರಷ್ಟು ಲಸಿಕೆ ವ್ಯರ್ಥವಾಗಿದೆ ಎಂದು ವರದಿಗಳು ತಿಳಿಸಿವೆ. ಲಸಿಕೆಯ ಒಂದು ಸೀಸೆ ತೆರೆದರೆ ಅದನ್ನು ಮುಂದಿನ 4 ಗಂಟೆಗಳ ಒಳಗಾಗಿ ಬಳಸಬೇಕು. ಆದರೆ ಲಸಿಕೆ ಪಡೆಯುವವರ ಸಂಖ್ಯೆ ಇಳಿಮುಖವಾದ ಕಾರಣ, ಸೀಸೆಯಲ್ಲಿರುವ ಹನಿಗಳು ಖಾಲಿಯಾಗುತ್ತಿಲ್ಲ. ಹೀಗಾಗಿ ಆ ಲಸಿಕೆ ವೇಸ್ಟ್‌ ಆಗುತ್ತಿದೆ. ಮುಂದಿನ ತಿಂಗಳಿನಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ನಿರ್ಧರಿಸಲಾಗಿರುವುದರಿಂದ ವ್ಯರ್ಥವಾಗುವ ಲಸಿಕೆಯ ಪ್ರಮಾಣದಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ.

Advertisement

ಶೇ. 55ರಷ್ಟು ಮಾತ್ರ
ಕೆಲವು ಕಡೆಗಳಲ್ಲಿ ಅಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಜನರಲ್ಲಿ ಲಸಿಕೆ ಜಾಗೃತಿ ಮೂಡಿಸುತ್ತಿದ್ದು ಇತರರನ್ನೂ ಕರೆದು ಲಸಿಕೆ ಪಡೆಯುಲು ಅವರಿಗೆ ಪ್ರೇರಣೆ ನೀಡುವ ಮೂಲಕ ಲಸಿಕೆ ವ್ಯರ್ಥ ವಾಗುವುದನ್ನು ತಡೆಯುತ್ತಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ ಪ್ರತೀ 100 ಮಂದಿಯ ಪೈಕಿ ಕೇವಲ 55 ಮಂದಿ ಮಾತ್ರ ಲಸಿಕೆ ಪಡೆಯಲು ಆಸಕ್ತಿ ತೋರುತ್ತಿದ್ದಾರೆ.

ಲಸಿಕೆ ವ್ಯರ್ಥ ಹೇಗೆ ಸಂಭವಿಸುತ್ತದೆ?
ಲಸಿಕೆ ವ್ಯರ್ಥವಾಗುವಿಕೆಯನ್ನು ತೆರೆಯದ ಬಾಟಲು ಗಳಲ್ಲಿ ಮತ್ತು ತೆರೆದ ಬಾಟಲುಗಳಲ್ಲಿ ವ್ಯರ್ಥ ಎಂದು 2 ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಲಸಿಕೆಯ ನಿಗದಿತ ಅವಧಿ ಮುಕ್ತಾಯವಾಗಿದ್ದರೆ (ಎಕ್ಸ್‌ ಪೈರಿಂಗ್‌ ಡೇಟ್‌), ಶಾಖಕ್ಕೆ ಒಳಗಾದರೆ, ಹೆಪ್ಪುಗಟ್ಟಿದ್ದರೆ, ಬಾಟಲ್‌ ಒಡೆ ದರೆ, ದಾಸ್ತಾನು ಕಳ್ಳತನವಾದರೆ ಮತ್ತು ವ್ಯಾಕ್ಸಿನೇಷನ್‌ ಕೇಂದ್ರದಲ್ಲಿ ಸರಿಯಾಗಿ ನಿರ್ವಹಣೆ ಮಾಡದೇ ಇದ್ದರೆ, ನಿರೀಕ್ಷಿತ ಜನರಿಗೆ ಲಸಿಕೆ ನೀಡಲು ಸಾಧ್ಯವಾಗದಿದ್ದರೆ ಮತ್ತು ಲಸಿಕೆ ನೀಡುವಾಗ ಲಸಿಕೆಗಳು ವ್ಯರ್ಥವಾಗುತ್ತವೆ. ಸಾಗಣೆ ಸಂದರ್ಭ, ಕೋಲ್ಡ್ ಚೈನ್‌ ಪಾಯಿಂಟ್‌ ಮತ್ತು ವ್ಯಾಕ್ಸಿನೇಷನ್‌ ಕೇಂದ್ರಗಳು ಹಾಗೂ ವಿತರಣೆ ಸಂದರ್ಭ ಹೀಗೆ ಈ ಮೂರು ಹಂತಗಳಲ್ಲಿ ವೇಸ್ಟ್‌ ಆಗುತ್ತವೆ.

ಜನರ ಪಾತ್ರ ಏನು?
ಲಸಿಕೆ ಪಡೆಯಲು ಸಮಯ ಪಡೆದುಕೊಂಡ ಜನರು ತಪ್ಪದೇ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆಯನ್ನು ಪಡೆದುಕೊಳ್ಳಿ. ಒಂದು ವೇಳೆ ನಿಮಗೆ ಲಸಿಕೆ ಪಡೆದು ಕೊಳ್ಳಲು ಅನಿವಾರ್ಯ ಕಾರಣದಿಂದ ಆಗದೇ ಇದ್ದರೆ, ಮುಂಚಿತವಾಗಿ ತಿಳಿಸಿ. ಇದರಿಂದ ನಿಮ್ಮ ಪಾಲಿನ ಲಸಿಕೆ ಮತ್ತೂಬ್ಬರಿಗೆ ದೊರೆಯುವ ಮೂಲಕ ನಷ್ಟವಾಗದಂತೆ ನೋಡಿಕೊಳ್ಳಬಹುದು.

ಲಸಿಕೆ ವ್ಯರ್ಥ ಎಂದರೇನು?
ಲಸಿಕೆ ವ್ಯರ್ಥಗೊಳ್ಳುವಿಕೆ ಯಾವುದೇ ದೊಡ್ಡ ವ್ಯಾಕ್ಸಿನೇಷನ್‌ ಡ್ರೈವ್‌ನಲ್ಲಿ ಸಾಮಾನ್ಯವಾಗಿ ಕಾಣುವಂಥ ಅಂಶವಾಗಿದೆ. ನಿಯಮದ ಪ್ರಕಾರ ವ್ಯರ್ಥದ ಪ್ರಮಾಣವು ಶಿಫಾರಸು ಮಾಡಿದ ಮಿತಿಯಲ್ಲಿರಬೇಕು. ಲಸಿಕೆಯ ವ್ಯರ್ಥದ ಪ್ರಮಾಣ ಹೆಚ್ಚಿದಂತೆ ಬೇಡಿಕೆ ಜಾಸ್ತಿಯಾಗುತ್ತದೆ. ಕೊರೊನಾದಂಥ ಸಾಂಕ್ರಾಮಿಕಗಳ ಸಂದರ್ಭದಲ್ಲಿ ಸಕಾಲದಲ್ಲಿ ಬೇಡಿಕೆಗೆ ತಕ್ಕಷ್ಟು ಲಸಿಕೆ ಉತ್ಪಾದನೆ ಬಲುದೊಡ್ಡ ಸವಾಲಾಗಿರುತ್ತದೆ. ಒಂದು ಲಸಿಕೆಯ ಸೀಸೆಯಲ್ಲಿ ನಿರ್ದಿಷ್ಟ ಸಂಖ್ಯೆಯ ಜನರಿಗೆ ನಿಗದಿತ ಸಮಯದೊಳಗೆ ಲಸಿಕೆಯನ್ನು ನೀಡಲೇಬೇಕು. ಇದು ತನ್ನ ಗುರಿಯನ್ನು ತಲುಪಿಲ್ಲ ಎಂದರೆ ಅದನ್ನು ವ್ಯರ್ಥ(ವೇಸ್ಟ್‌) ಲಸಿಕೆ ಎಂದು ಪರಿಗಣಿಸಲಾಗುತ್ತದೆ.

Advertisement

ತೆಲಂಗಾಣದಲ್ಲಿ ಅತೀ ಹೆಚ್ಚು ನಷ್ಟ: ತೆಲಂಗಾಣದಲ್ಲಿ ಅತೀ ಹೆಚ್ಚು ಲಸಿಕೆ ವ್ಯರ್ಥವಾಗುತ್ತಿರುವುದಾಗಿ (ಶೇ. 17.6 ರಷ್ಟು)ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ ಕೇಂದ್ರದ ಈ ಮಾಹಿತಿ ಸತ್ಯಕ್ಕೆ ದೂರ ಎಂದು ತೆಲಂಗಾಣ ಸರಕಾರ ಹೇಳಿದೆ. ನಮ್ಮಲ್ಲಿ ವ್ಯಾಸಿನ್‌ ವೇಸ್ಟ್‌ ಪ್ರಮಾಣ ಶೇ. 0.76ರಷ್ಟು ಇದೆ ಎಂದಿದೆ.

ಅಮೆರಿಕದ ಮಾದರಿ ಯಾವುದು?: ಲಸಿಕೆ ವಿತರಣೆಯ ವಿಚಾರದಲ್ಲಿ ಅಮೆರಿಕ ಉತ್ತಮ ನಡೆಯನ್ನು ಅನುಸರಿಸಿದೆ. ಅಮೆರಿಕದಲ್ಲಿ ಲಸಿಕೆ ವಿತರಣೆಯ ನಿಗದಿತ ಸಮಯದಲ್ಲಿ ಫ‌ಲಾನುಭವಿಗಳು ಕಾರಣಾಂತರಗಳಿಂದ ಬರದಿದ್ದರೆ, ಅವರ ಪಾಲಿನ ಲಸಿಕೆಯನ್ನು ವಿತರಣ ಘಟಕದ ಸನಿಹದಲ್ಲಿರುವ ಸಾರ್ವಜನಿಕರಿಗೆ ನೀಡಲಾಗುತ್ತದೆ. ಇದು ಮೇಲ್ನೋಟಕ್ಕೆ ಪರ್ಯಾಯ ಕ್ರಮ ಎಂದಷ್ಟೇ ಕಂಡರೂ ಭಾರೀ ಪ್ರಮಾಣದ ಲಸಿಕೆ ವ್ಯರ್ಥವಾಗುವುದನ್ನು ಇದು ತಪ್ಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next