Advertisement

ಉಗ್ರರ ನೇಮಕಕ್ಕೆ ಮದರಸಾಗಳ ಬಳಕೆ

01:11 AM Jul 03, 2019 | mahesh |

ನವದೆಹಲಿ: ಪಶ್ಚಿಮ ಬಂಗಾಳದ ಮದರಸಾಗಳನ್ನು ಬಳಸಿಕೊಂಡು ಬಾಂಗ್ಲಾದ ಜಮಾತ್‌-ಉಲ್-ಮುಜಾಹಿದೀನ್‌ ಉಗ್ರ ಸಂಘಟನೆಯು ಉಗ್ರಗಾಮಿತ್ವವನ್ನು ಪ್ರೇರೇಪಿಸುವ ಹಾಗೂ ಉಗ್ರರ ನೇಮಕ ಮಾಡುವ ಕೆಲಸವನ್ನು ಮಾಡುತ್ತಿದೆ ಎಂಬ ಆತಂಕಕಾರಿ ವಿಚಾರವನ್ನು ಕೇಂದ್ರ ಗೃಹ ಇಲಾಖೆ ಲೋಕಸಭೆಯಲ್ಲಿ ಬಹಿರಂಗಪಡಿಸಿದೆ.

Advertisement

ಪಶ್ಚಿಮ ಬಂಗಾಳದ ಮಸೀದಿಗಳು ಧಾರ್ಮಿಕ ತೀವ್ರಗಾಮಿತ್ವವನ್ನು ಉತ್ತೇಜಿಸುತ್ತಿದ್ದು, ಉಗ್ರ ಸಂಘಟನೆಗಳಿಗೆ ನೆರವಾಗುತ್ತಿದೆ ಎಂಬ ವರದಿಗಳೇನಾದರೂ ಬಂದಿವೆಯೇ ಎಂದು ಬಿಜೆಪಿ ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ಮಂಗಳವಾರ ಕೇಂದ್ರ ಗೃಹ ಇಲಾಖೆ ಈ ಉತ್ತರ ನೀಡಿದೆ. ಇಂತಹ ವರದಿಗಳು ಬಂದಿದ್ದು, ಈ ಕುರಿತು ಪ.ಬಂಗಾಳ ಸರ್ಕಾರಕ್ಕೂ ಮಾಹಿತಿ ನೀಡಿರುವುದಾಗಿ ಇಲಾಖೆ ತಿಳಿಸಿದೆ.

ಸೋನಿಯಾ ಆರೋಪ: ರಾಯ್‌ಬರೇಲಿಯಲ್ಲಿನ ರೈಲ್ವೆ ಮಾಡರ್ನ್ ಕೋಚ್ ಫ್ಯಾಕ್ಟರಿ ಸೇರಿದಂತೆ ದೇಶದಲ್ಲಿನ ಉತ್ಪಾದನಾ ಘಟಕಗಳನ್ನು ಕಾರ್ಪೊರೇಟ್‌ಗಳಿಗೆ ವಹಿಸುವ ಮೂಲಕ ಸರ್ಕಾರವು ಸರ್ಕಾರಿ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ ಎಂದು ಲೋಕಸಭೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ತಿರಸ್ಕರಿಸಿದ ರೈಲ್ವೆ ಇಲಾಖೆ, ಇದು ಖಾಸಗೀಕರಣ ಅಲ್ಲ. ಅವುಗಳ ನಿಯಂತ್ರಣವು ಸರ್ಕಾರದ ಬಳಿಯೇ ಇರುತ್ತದೆ ಎಂದು ಸ್ಪಷ್ಟಪಡಿಸಿದೆ.

ಈ ನಡುವೆ, ನೋಟು ಅಮಾನ್ಯದಿಂದ ದೇಶದ ಆರ್ಥಿಕತೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರಿಲ್ಲ. ಭಾರತದ ಈಗಲೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ಎಂಬ ಹೆಸರನ್ನು ಉಳಿಸಿಕೊಂಡಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಸದಸ್ಯರ ಖಂಡನೆ: ಇಸ್ರೇಲಿ ಕಂಪನಿಯ ಮದ್ಯದ ಬಾಟಲಿಗಳಲ್ಲಿ ಮಹಾತ್ಮ ಗಾಂಧಿ ಚಿತ್ರ ಪ್ರಕಟಿಸಿರುವುದನ್ನು ರಾಜ್ಯಸಭೆ ಖಂಡಿಸಿದೆ. ಈ ಕುರಿತು ಕ್ರಮ ಕೈಗೊ ಳ್ಳುವಂತೆ ವಿದೇಶಾಂಗ ಇಲಾಖೆಗೆ ಸಭಾಧ್ಯಕ್ಷರು ಸೂಚಿಸಿದ್ದಾರೆ.

Advertisement

ಮಸೂದೆ ಪಾಸ್‌: ಕೇಂದ್ರ ಹೋಮಿಯೋಪಥಿ ಮಂಡಳಿ ಮರುಸ್ಥಾಪನೆಯ ಅವಧಿಯನ್ನು ಈಗಿರುವ 1 ವರ್ಷದಿಂದ 2 ವರ್ಷಕ್ಕೇರಿಸುವ ವಿಧೇಯಕಕ್ಕೆ ಪಕ್ಷಭೇದ ಮರೆತು ರಾಜ್ಯಸಭೆ ಸದಸ್ಯರು ಅನುಮೋದನೆ ನೀಡಿದ್ದಾರೆ.

ಎಲ್ಲ ಪ್ರಶ್ನೆಗಳಿಗೂ ಅವಕಾಶ: ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಗೆಂದು ನಿಗದಿಯಾದ ಎಲ್ಲ ಪ್ರಶ್ನೆಗಳನ್ನೂ ಕೇಳಲು ಅವಕಾಶ ಕಲ್ಪಿಸಿದ್ದಕ್ಕೆ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರನ್ನು ರಾಜ್ಯಸಭಾ ಸದಸ್ಯರು ಮಂಗಳವಾರ ಅಭಿನಂದಿಸಿದ್ದಾರೆ.

ಟಿಕ್‌ಟಾಕ್‌ ವಿರುದ್ಧ ಆರೋಪ: ಟಿಕ್‌ಟಾಕ್‌ ಸಂಸ್ಥೆಯು ಅಕ್ರಮವಾಗಿ ಭಾರತೀಯರ ದತ್ತಾಂಶಗಳನ್ನು ಸಂಗ್ರಹಿಸಿ, ಚೀನಾಗೆ ಮಾರಾಟ ಮಾಡುತ್ತಿದೆ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಆರೋಪಿಸಿದ್ದಾರೆ. ಜತೆಗೆ, ಇದೊಂದು ರಾಷ್ಟ್ರೀಯ ಭದ್ರತೆಯ ವಿಚಾರವಾಗಿದ್ದು, ದೇಶದಲ್ಲಿ ಸಮಗ್ರವಾದ ದತ್ತಾಂಶ ಸುರಕ್ಷತಾ ನಿಯಮ ಇಲ್ಲದೇ ಇರುವುದೇ ಇಂಥ ಸಮಸ್ಯೆಗಳಿಗೆ ಕಾರಣ ಎಂದಿದ್ದಾರೆ.

ರಸಗೊಬ್ಬರ ಸ್ಥಾವರಗಳ ಪುನಸ್ಥಾಪನೆ: ಡಿವಿಎಸ್‌
ಮುಚ್ಚಲ್ಪಟ್ಟಿದ್ದ 5 ರಸಗೊಬ್ಬರ ಸ್ಥಾವರಗಳನ್ನು ಸರ್ಕಾರವು 37,971 ಕೋಟಿ ರೂ. ವೆಚ್ಚ ಮಾಡಿ ಪುನಸ್ಥಾಪಿಸಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಯೂರಿಯಾ ಆಮದು ತಗ್ಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಭಾರತವು ಸುಮಾರು 241 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ಉತ್ಪಾದಿಸುತ್ತದೆ. ಆದರೆ, 305 ಲಕ್ಷ ಮೆ.ಟನ್‌ಗೆ ಬೇಡಿಕೆಯಿದೆ. ಆಮದು ಮಾಡಿಕೊಳ್ಳುವ ಮೂಲಕ ಈ ಬೇಡಿಕೆಯನ್ನು ಈಡೇರಿಸಲಾಗುತ್ತಿದೆ. ಪ್ರಸ್ತುತ ದೇಶದಲ್ಲಿ ಯೂರಿಯಾ ಕೊರತೆ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next