ಹಾವೇರಿ: ಹೂವಿನ ವ್ಯಾಪಾರಸ್ಥರು ಕಡ್ಡಾಯವಾಗಿ ಎಲೆಕ್ಟ್ರಾನಿಕ್ ತೂಕದ ಯಂತ್ರ ಬಳಸಬೇಕು. ಇಲ್ಲದಿದ್ದರೆ ಅಂಥ ವ್ಯಾಪಾರಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ರಮೇಶ ಚಾವಡಿ ಎಚ್ಚರಿಕೆ ನೀಡಿದರು.
ಹೂವಿನ ಮಾರುಕಟ್ಟೆಗೆ ಹೂ ಮಾರಾಟಕ್ಕೆ ಬರುವ ರೈತರಿಗೆ ತೂಕದಲ್ಲಿ ಮೋಸವಾಗುತ್ತಿರುವ ಕುರಿತು ರೈತರಿಂದ ದೂರು ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಎಪಿಎಂಸಿ ಸಭಾಭವನದಲ್ಲಿ ಹೂವಿನ ವ್ಯಾಪಾರಸ್ಥರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಹೂವಿನ ವ್ಯಾಪಾರದಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರ ಬಳಸಲು ನಿಯಮವಿದೆ. ಆದರೂ ನಗರದಲ್ಲಿ ತೂಕದ ಕಲ್ಲಿನ ಯಂತ್ರ ಉಪಯೋಗಿಸುತ್ತಿರುವ ಹಾಗೂ ತೂಕದ ವೇಳೆಯಲ್ಲಿ 20 ಕೆ.ಜಿ ಹೂವಿಗೆ 5ರಿಂದ 7ಕೆಜಿಯಷ್ಟು ಕಡಿತವಾಗುವ ದೂರು ಬಂದಿದೆ. ಈ ಕುರಿತು ಎಪಿಎಂಸಿ ಅಧಿಕಾರಿಗಳು ಪರಿಶೀಲನೆ ಮಾಡಿದ ವೇಳೆಯಲ್ಲಿಯೂ ವ್ಯಾಪಾರಸ್ಥರು ಕಲ್ಲಿನ ಕಾಟಾ ಬಳಕೆ ಮಾಡಿರುವುದು ಕಂಡುಬಂದಿದೆ. ಎಪಿಎಂಸಿ ಕಾಯ್ದೆ ಪ್ರಕಾರ ಕೃಷಿ ಉತ್ಪನ್ನ ಮಾರಾಟದಲ್ಲಿ ಪಾರದರ್ಶಕತೆ ತರಲು 30-6-2018 ರಲ್ಲಿಯೇ ಎಲೆಕ್ಟ್ರಾನಿಕ್ ತೂಕದ ಯಂತ್ರ ಬಳಸಬೇಕೆಂದು ತಿಳಿವಳಿಕೆ ಪತ್ರವನ್ನು ವ್ಯಾಪಾರಸ್ಥರಿಗೆಲ್ಲ ನೀಡಲಾಗಿದೆ. ಆದರೂ ನೀವು ಕಲ್ಲಿನ ಕಾಟಾ ಬಳಸುವುದು ಅಪರಾಧವಾಗುತ್ತದೆ ಎಂದರು.
ಎಪಿಎಂಸಿ ಕಾರ್ಯದರ್ಶಿ ಪರಮೇಶ ನಾಯಕ ಮಾತನಾಡಿ, ಇನ್ಮುಂದೆ ಎಲ್ಲರೂ ಕಡ್ಡಾಯವಾಗಿ ಎಲೆಕ್ಟ್ರಾನಿಕ್ ತೂಕದ ಯಂತ್ರಗಳ ಮೂಲಕವೇ ರೈತರ ಉತ್ಪನ್ನ ಖರೀದಿಸಬೇಕು. ತೂಕದಲ್ಲಿ ರೈತರಿಗೆ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ವ್ಯಾಪಾರಸ್ಥರೆಲ್ಲರೂ ಎಲೆಕ್ಟ್ರಾನಿಕ್ ಹಾಗೂ ಕಲ್ಲಿನ ಕಾಟಾದ ತೂಕದ ಯಂತ್ರಗಳ ಸತ್ಯಾಪನೆ ಪ್ರಮಾಣಪತ್ರಗಳನ್ನು ಎಪಿಎಂಸಿಗೆ ನೀಡಬೇಕು. ಸತ್ಯಾಪನೆ ಪ್ರಮಾಣ ಪತ್ರ ಪಡೆಯದೇ ಇದ್ದವರೂ ಕೂಡಲೇ ತೂಕ ಮತ್ತು ಮಾಪನ ಇಲಾಖೆ ನಿರೀಕ್ಷಕರಿಂದ ಪ್ರಮಾಣ ಪತ್ರ ಪಡೆದು ಎಪಿಎಂಸಿಗೆ ನೀಡಬೇಕು ಎಂದರು.
ಈ ವೇಳೆ ವ್ಯಾಪಾರಸ್ಥರು ಮಾತನಾಡಿ, ರೈತರು ತರುವ ಉತ್ಪನ್ನ ಎಲೆಕ್ಟ್ರಾನಿಕ್ ಯಂತ್ರದ ಮೂಲಕ ತೂಕ ಮಾಡುತ್ತೇವೆ. ಆದರೆ, ಕೆಲವು ರೈತರು ಹೂವಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಿಂಪಡಿಸಿಕೊಂಡು ಮಾರಾಟಕ್ಕೆ ತರುತ್ತಾರೆ. ಇಂತಹ ಉತ್ಪನ್ನ ಎಲೆಕ್ಟ್ರಾನಿಕ್ ಯಂತ್ರದಲ್ಲಿ ಖರೀದಿಸುವುದರಿಂದ ನಮಗೆ ನಷ್ಟವಾಗುತ್ತದೆ. ಹೆಚ್ಚಿನ ನೀರು ಸಿಂಪಡಿಸಿರುವ ಹೂವುಗಳನ್ನು ಕಲ್ಲಿನ ಕಾಟಾದಲ್ಲಿ ತೂಕ ಮಾಡುತ್ತಿದ್ದೆವು. ಇನ್ಮುಂದೆ ತಮ್ಮ ಸೂಚನೆಯಂತೆ ಕಡ್ಡಾಯವಾಗಿ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನೇ ಬಳಕೆ ಮಾಡುತ್ತೇವೆ ಎಂದರು.
ಎಪಿಎಂಸಿ ಉಪಾಧ್ಯಕ್ಷ ಸಣ್ಣಪ್ಪ ಮಾಳಿ, ಸಹ ಕಾರ್ಯದರ್ಶಿ ಮನೋಹರ ಬಾರ್ಕಿ, ಮಾರುಕಟ್ಟೆ ಮೇಲ್ವಿಚಾರಕ ಪಿ.ಜಿ. ಛತ್ರದಮಠ ಹಾಗೂ ವ್ಯಾಪಾರಸ್ಥರು ಸಭೆಯಲ್ಲಿದ್ದರು.