Advertisement
ಘಟನೆಯನ್ನು ಖಂಡಿಸಿ ಮಂಗಳೂರಿನಲ್ಲಿ ಶನಿವಾರ ಶ್ರೀ ಕ್ಷೇತ್ರದ ಭಕ್ತರ ಒಂದು ಸಮೂಹ ಮತ್ತು ಪಟ್ಲ ಸತೀಶ್ ಶೆಟ್ಟಿ ಅಭಿಮಾನಿಗಳ ಬಳಗದ ಸಭೆ ಜರಗಿತು. “ಭಾಗವತ ಪಟ್ಲ ಸತೀಶ್ ಶೆಟ್ಟಿಯವರನ್ನು ರಂಗಸ್ಥಳದಿಂದ ಇಳಿಸಿದ ಆಡಳಿತದ ಕ್ರಮವನ್ನು ಸಭೆ ತೀವ್ರವಾಗಿ ಖಂಡಿಸುತ್ತದೆ. ಈ ಕುರಿತಾಗಿ ಕಾನೂನು, ನ್ಯಾಯಗಳ ಚೌಕಟ್ಟಿನಲ್ಲಿ ಸರಕಾರಿ ಇಲಾಖೆ-ದೇವಾಲಯದ ಆಡಳಿತದ ಮತ್ತು ಕಲಾವಿದರ ಘನತೆಗೆ ತಕ್ಕಂತೆ ಸೂಕ್ತ ಸೌಹಾರ್ದಯುತ ಪರಿಹಾರವನ್ನು ರೂಪಿಸಿ ಭಾಗವತರನ್ನು ಮರಳಿ ಮೇಳಕ್ಕೆ ಸಂಯೋಜಿಸಿ ಆಗಿರುವ ತಪ್ಪನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸೋಮವಾರ ಮಧ್ಯಾಹ್ನ 3 ಗಂಟೆಗೆ ಈ ಬಗ್ಗೆ ಡಿಸಿಗೆ ಮನವಿ ನೀಡಲು ನಿರ್ಧರಿಸಲಾಯಿತು.
Related Articles
ಘಟನೆಯ ಬಗ್ಗೆ ಸಭೆಯಲ್ಲಿ ವಿವರ ನೀಡಿದ ಪಟ್ಲ ಸತೀಶ್ ಶೆಟ್ಟಿ, “ರಂಗಸ್ಥಳಕ್ಕೆ ಭಾಗವತಿಕೆಗೆ ಹೋಗದಂತೆ ನನಗೆ ಮೊದಲು ಯಾವುದೇ ಮುನ್ಸೂಚನೆ ನೀಡಿರಲಿಲ್ಲ. ಮೇಳದ ಮೆನೇಜರ್ ಕೂಡ ವಿಷಯ ತಿಳಿಸಿರಲಿಲ್ಲ. ನಾನು ನಮ್ಮ ಮೇಳದ ಹಿರಿಯ ಭಾಗವತರಿಂದ ಅನುಮತಿ ಪಡೆದು ರಂಗಸ್ಥಳಕ್ಕೆ ಹೋದೆ. ಆಗ ಮೇಳದ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರು ನನ್ನನ್ನು ಭಾಗವತಿಕೆ ಮಾಡದಂತೆ ಹಿಂದಕ್ಕೆ ಕರೆಸಿದರು. ಜಿಲ್ಲಾಧಿಕಾರಿಯವರಿಗೆ ಮೇಳದ ವಿರುದ್ಧ ದೂರು ನೀಡಿದ್ದ 7 ಕಲಾವಿದರನ್ನು ಮೇಳದ ಯಜಮಾನರು ಶ್ರೀ ಕ್ಷೇತ್ರಕ್ಕೆ ಕರೆಯಿಸಿ ಎಚ್ಚರಿಕೆ ನೀಡಿದ್ದರು. ಒಂದು ವೇಳೆ ನನ್ನಲ್ಲಿ ಏನಾದರೂ ತಪ್ಪು ಆಗಿದ್ದರೆ ನನ್ನನ್ನೂ ಕರೆಯಿಸಿ ಕೇಳಬಹುದಿತ್ತು. ಇದು ಯಾವುದೂ ಮಾಡದೆ ನಾನು ರಂಗಸ್ಥಳಕ್ಕೆ ಹೋದ ಮೇಲೆ ನನ್ನನ್ನು ಹಿಂದಕ್ಕೆ ಕರೆದಿದ್ದಾರೆ. ಸುಮಾರು 20 ವರ್ಷಗಳಿಂದ ನಾನು ಯಕ್ಷಗಾನ ಕಲಾಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ನನ್ನಿಂದ ಆದಷ್ಟು ಸಹಾಯ ಮಾಡಿದ್ದೇನೆ. ಮೇಳಕ್ಕೆ, ಯಜಮಾನರಿಗೆ, ಸೇವಾಕರ್ತರಿಗೆ ಎಂದೂ ದ್ರೋಹ ಮಾಡಿಲ್ಲ’ ಎಂದರು.
Advertisement