ಯಲ್ಲಾಪುರ: ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲಿ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವಿಧರ ಶಿಕ್ಷಕರೆಂದು ಪರಿಗಣಿಸಿ, ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿ ನಿಗದಿಗೊಳಿಸಬೇಕೆಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ ಆಗ್ರಹಿಸಿದ್ದಾರೆ.
ಅವರು ಪಟ್ಟಣದ ನೌಕರರ ಸಂಘದ ಸಭಾಭವನದಲ್ಲಿ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆಯ ಯೋಜನೆಯನ್ನೇ ಮುಂದುವರಿಸಬೇಕು. ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಆಗದೇ ಇರುವುದರಿಂದ ಈಗ ಪ್ರಕ್ರಿಯೆ ಆರಂಭವಾಗಿದೆ. ಇದು ಮುಗಿದ ತಕ್ಷಣ ಅಕ್ಟೋಬರ್ ತಿಂಗಳಲ್ಲಿ ಮತ್ತೂಮ್ಮೆ ಕೇವಲ ಕೋರಿಕೆ ವರ್ಗಾವಣೆ ನಡೆಸಬೇಕು.
ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಬೇಕು. ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಯಲ್ಲಿರುವ ನ್ಯೂನತೆ ಸರಿಪಡಿಸಿ, ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಪರಿಗಣಿಸಬೇಕು. ಶಿಕ್ಷಕ-ವಿದ್ಯಾರ್ಥಿ ಅನುಪಾತ ಗುರುತಿಸುವಾಗ ಮುಖ್ಯೋಪಾಧ್ಯಾಯ, ದೈಹಿಕ ಶಿಕ್ಷಕರನ್ನು ಹೊರತುಪಡಿಸಿ ಹೆಚ್ಚುವರಿ ಪ್ರಕ್ರಿಯೆ ಆರಂಭಿಸಬೇಕು. 6ನೇ ವೇತನ ಆಯೋಗದ ಅಂತಿಮ ವರದಿ ಶಿಫಾರಸ್ಸಿನ ಪ್ರಕಾರ ಮುಖ್ಯ ಗುರುಗಳಿಗೆ 10, 15, 20, 25, 30 ವರ್ಷದ ಭಡ್ತಿ ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪನಿರ್ದೇಶಕರ ಹುದ್ದೆವರೆಗೂ ಬಡ್ತಿ ನೀಡಬೇಕು. ಗ್ರಾಮೀಣ ಕ್ರಪಾಂಕ ಶಿಕ್ಷಕರ ವಜಾ ಆದ ಸೇವೆಯನ್ನು ಸತತ ಎಂದು ಪರಿಗಣಿಸಿ ಆರ್ಥಿಕ ಹಾಗೂ ಇನ್ನಿತರ ಸೇವಾ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಈ ಬೇಡಿಕೆಗಳನ್ನು ಮನ್ನಿಸಿ ಈಡೇರಿಸದೇ ಇದ್ದಲ್ಲಿ ಪ್ರತಿಭಟನೆಗೆ ಸಂಘ ಮುಂದಾಗಲಿದೆ. ಜು.9 ರಂದು ಜಿಲ್ಲಾ ಹಂತದಲ್ಲಿ ಶಿಕ್ಷಕರನ್ನು ಸೇರಿಸಿ ಬೃಹತ್ ರ್ಯಾಲಿಯ ಮೂಲಕ ಹಕ್ಕೊತ್ತಾಯ ಮಂಡಿಸಲಾಗುವುದು. ಅದಕ್ಕೂ ಸ್ಪಂದಿಸದೇ ಇದ್ದರೆ ಸೆ.5 ರಂದು ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ, ವಿಧಾನಸೌಧ ಚಲೊ ನಡೆಸಲಾಗುತ್ತದೆ. ಇದಕ್ಕೂ ಸರ್ಕಾರ ಬಗ್ಗದಿದ್ದಲ್ಲಿ ಶಾಲೆ ಬಂದ್ ಮಾಡಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಆರ್.ಆರ್. ಭಟ್ಟ, ಕಾರ್ಯದರ್ಶಿ ಸಿ.ಜಿ. ನಾಯ್ಕ, ಸಂಘಟನಾ ಕಾರ್ಯದರ್ಶಿ ನಾಗರಾಜ ಹುಡೇದ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ಖಜಾಂಚಿ ವಿ.ಎಸ್. ಭಟ್ಟ, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ವಿಶಾಲ ನಾಯಕ, ಸಿಆರ್‌ಪಿ ದಿನೇಶ ಭಟ್ಟ ಇದ್ದರು.