ಸಕಲೇಶಪುರ: ಚಿಮ್ಮಿಕೋಲು ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಆಗ್ರಹಿಸಿ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ತಾಲೂಕಿನ ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಖಾಲಿ ಕೊಡ ಇಟ್ಟು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅಂಬೇಡ್ಕರ್ ಯುವಕ ಸಂಘದ ವಿಶ್ವನಾಥ್, ಚಿಮ್ಮಿಕೋಲು ಗ್ರಾಮದಲ್ಲಿ ತೆರೆದ ಬಾವಿಯೊಂದಿದ್ದು, ಗ್ರಾಮಸ್ಥರು ಹಾಗೂ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆ ಗಾಗಿ ಇದೇ ನೀರನ್ನು ಕುಡಿಯಲು ಹಾಗೂ ಇನ್ನಿತರ ಅಗತ್ಯಗಳಿಗಾಗಿ ಉಪಯೋಗಿಸ ಬೇಕಾಗಿದೆ.
ಆದರೆ ಈ ಬಾವಿಗೆ ಯಾವುದೇ ರೀತಿಯ ಸರಿಯಾದ ರಕ್ಷಣೆ ಇಲ್ಲದೇ ಬಾವಿಯಲ್ಲಿ ಮಣ್ಣು ಹಾಗೂ ಕಸ ಕಡ್ಡಿ ತುಂಬಿಕೊಳ್ಳುವುದರಿಂದ ಕೆಸರು ನೀರನ್ನೇ ಗ್ರಾಮಸ್ಥರು ಬಳಸಬೇಕಾಗಿದೆ ಎಂದರು. ಮಳೆಗಾಲದಲ್ಲಿ ಈ ಸಮಸ್ಯೆಯಾದರೆಬೇಸಿಗೆಯಲ್ಲಿ ಜಲ ಉಕ್ಕುವ ಕಡೆ ಮಣ್ಣು ಸೇರಿಕೊಂಡು ನೀರು ಬರಲು ಸಾಧ್ಯವಾಗದೇ ಗ್ರಾಮಸ್ಥರು ಕುಡಿಯುವ ನೀರಿಗೆ ತುಂಬಾ ತೊಂದರೆ ಅನುಭವಿಸಬೇಕಾಗಿದೆ. ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳ ಬಿಸಿಯೂಟಕ್ಕಾಗಿ ಶಾಲಾ ಸಿಬ್ಬಂದಿ ಹಾನುಬಾಳು ಗ್ರಾಮದಿಂದ ಬಾಡಿಗೆ ವಾಹನ ಗಳ ಮೂಲಕ ಪ್ರತಿನಿತ್ಯ ಶಾಲೆಗೆ ನೀರನ್ನು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಸುಮಾರು 30ಕ್ಕೂ ಹೆಚ್ಚು ದಲಿತ ಕುಟುಂಬಗಳಿದ್ದು ಈ ಬಗ್ಗೆ ಕ್ಯಾಮನಹಳ್ಳಿ ಗ್ರಾಮಪಂಚಾಯಿತಿ ಆಡಳಿತ ಮಂಡಳಿಯ ಗಮನಕ್ಕೆ ಹಲವು ಬಾರಿ ತಂದರೂ ಸಮಸ್ಯೆಯನ್ನು ಬಗೆಹರಿಸಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಗ್ರಾಪಂ ಕಾರ್ಯದರ್ಶಿ ಧರ್ಮಪ್ಪ ಮಾತನಾಡಿ, ನಾಳೆಯಿಂದಲೇ ಗ್ರಾಮದ ಕುಡಿ ಯುವ ನೀರಿನ ಬಾವಿಯನ್ನು ಸರಿಪಡಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಯುವಕ ಸಂಘದ ಪದಾಧಿಕಾರಿಗಳಾದ ಸುನೀಲ್, ಅನಿಲ್, ಲೋಹಿತ್, ಹರೀಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.