ಕೋಲಾರ: ರಾಜ್ಯದ ಪ್ರವಾಹ ಸಂತ್ರಸ್ತರಿಗೆ ನಿರೀಕ್ಷಿತ ಪರಿಹಾರ ಕೊಡಿಸಲು ವಿಫಲರಾದ ಸಂಸದರು ರಾಜೀನಾಮೆ ನೀಡಬೇಕು ಆಗ್ರಹಿಸಿ ಬಹುಜನ ಸಮಾಜ ಪಕ್ಷದಿಂದ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಬಿಎಸ್‌ಪಿ ಜಿಲ್ಲಾಧ್ಯಕ್ಷ ಎಂ.ಜಿ.ಜಯಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು, 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಜನತೆ ತತ್ತರಿಸಿ ಹೋಗಿದ್ದರು. ಪ್ರವಾಹದಿಂದ 87 ಮಂದಿ ಜೀವ ಕಳೆದುಕೊಂಡಿದ್ದಾರೆ, 1.79 ಲಕ್ಷ ಮನೆಗಳ ಹಾನಿಯಾಗಿವೆ, 7.82 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ, 5 ಸಾವಿರ ಹೆಕ್ಟೇರ್ ವ್ಯವಸಾಯ ಭೂಮಿ ಸಂಪೂರ್ಣ ನಾಶವಾಗಿದೆ ಎಂದು ಹೇಳಿದರು.
35 ಸಾವಿರ ಕಿ.ಮೀ. ರಸ್ತೆ ಹಾಳಾಗಿದೆ. 2828 ಸೇತುವೆಗಳು ಕೊಚ್ಚಿ ಹೋಗಿವೆ. 58 ಸಾವಿರ ವಿದ್ಯುತ್ ಕಂಬಗಳು ನಾಶವಾಗಿವೆ, 4076 ಟ್ರಾನ್ಸ್ ಫಾರ್ಮರ್ ಗಳು ನೆಲಸಮವಾಗಿವೆ, ಲೆಕ್ಕ ಸಿಗದಷ್ಟು ಜಾನುವಾರುಗಳು ಕಣ್ಮರೆಯಾಗಿವೆ. ಶಾಲಾ, ಆಸ್ಪತ್ರೆ ಮತ್ತು ಅಪಾರ ಪ್ರಮಾಣದ ಸಂಪನ್ಮೂಲ ನಾಶವಾಗಿದ್ದು, ಸರ್ಕಾರ ವರದಿ ಪ್ರಕಾರ 38,451 ಕೋಟಿ ರೂ. ನಷ್ಟವಾಗಿದೆ ಎಂದು ದೂರಿದರು.
ಕರ್ನಾಟಕದಲ್ಲಿ ಹೆಚ್ಚು ಸಂಸದರನ್ನು ಹೊಂದಿರುವ ಬಿಜೆಪಿಯು ರಾಜ್ಯಕ್ಕೆ ನಷ್ಟ ತುಂಬಿಸಿಕೊಡುವ ಪ್ರಯತ್ನ ಮಾಡಲಿಲ್ಲ, ಸಮ್ಮಿಶ್ರ ಸರ್ಕಾರವನ್ನು ಪತನ ಮಾಡಿ ಭದ್ರತೆ ನೀಡುವ ಭರವಸೆ ನೀಡಿದ್ದ ಬಿಜೆಪಿ ಸರ್ಕಾರ, ಪ್ರವಾಹ ಪೀಡಿತ ಜನರಿಗೆ ಸ್ಪಂದಿಸದೆ ಅಸಹಾಯಕವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಬಿಎಸ್‌ಪಿ ಜಿಲ್ಲಾಧ್ಯಕ್ಷ ಎಂ.ಜಿ.ಜಯಪ್ರಸಾದ್, ತಾಲೂಕು ಅಧ್ಯಕ್ಷ ವಿ.ಚಂದ್ರಪ್ಪ, ಸಂಗಸಂದ್ರ ವಿಜಯಕುಮಾರ್, ಶ್ರೀನಿವಾಸಪುರ ರಾಜು, ಆರೀಫ್, ನಾಸೀರ್ ಪಾಷಾ ಇತರರು ಇದ್ದರು.