Advertisement

ಲೋಕಸಭೆಯಲ್ಲಿ ಕೋಲಾಹಲ

01:16 AM Jun 25, 2019 | mahesh |

ನವದೆಹಲಿ: ಹದಿನೇಳನೇ ಲೋಕಸಭೆಯ ಮೊದಲ ಅಧಿವೇಶನದ ಶುರುವಿನ ಹಂತದಲ್ಲಿಯೇ ಕೋಲಾಹಲ ಉಂಟಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಸೋಮವಾರ ಲೋಕಸಭೆಯಲ್ಲಿ ವಾಗ್ವಾದವೇ ನಡೆದಿದೆ. ಬಿಜೆಪಿ ಪರವಾಗಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿರುವ ಕೇಂದ್ರ ಸಚಿವ ಪ್ರತಾಪ್‌ ಚಂದ್ರ ಸಾರಂಗಿ ಅವರನ್ನು ಮಾತನಾಡಲು ಅಖಾಡಕ್ಕೆ ಇಳಿಸಿತ್ತು. ಜನರು ನೀಡಿದ ಮತಾದೇಶವನ್ನು ಗೌರವಿಸುವಂತೆ ಕಾಂಗ್ರೆಸ್‌ಗೆ ಅವರು ಸಲಹೆ ಮಾಡಿದರೆ, ಪ್ರಧಾನಿ ನರೇಂದ್ರ ಮೋದಿ ದೊಡ್ಡ ಸೇಲ್ಸ್ಮ್ಯಾನ್‌ ಎಂದು ಕಾಂಗ್ರೆಸ್‌ ಟೀಕಿಸಿದೆ.

Advertisement

ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದ ಸಮರ್ಪಿಸುವ ಚರ್ಚೆಯಲ್ಲಿ ಈ ಬೆಳವಣಿಗೆ ನಡೆದಿದೆ. ಒಂದು ಗಂಟೆ ನಿರರ್ಗಳವಾಗಿ ಮಾತನಾಡಿದ ಸಾರಂಗಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಕೊಂಡಾಡಿದರು. ವಂದೇಮಾತರಂ ಅನ್ನು ವಿರೋಧಿಸುವವರು ಭಾರತದಲ್ಲಿ ವಾಸಿಸಲು ಅರ್ಹರೇ ಎಂದು ಪ್ರಶ್ನಿಸಿದರು. ದೇಶವನ್ನು ತುಂಡು ತುಂಡು ಮಾಡಬೇಕು ಎಂದು ಹೇಳುವವರನ್ನು ದೇಶ ಸಹಿಸುವುದಿಲ್ಲ ಎಂದರು. ಮೋದಿಯವರನ್ನು ಟೀಕೆ ಮಾಡುವುದು ಎಂದರೆ ಹಿಮಾಲಯ ಪರ್ವತಕ್ಕೆ ತಲೆ ಜಜ್ಜಿಕೊಂಡಂತೆ ಎಂದು ವ್ಯಾಖ್ಯಾನಿಸಿದರು. ಬಾಲಕೋಟ್ ದಾಳಿಯಲ್ಲಿ ಎಷ್ಟು ಮಂದಿ ಉಗ್ರರು ಅಸುನೀಗಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಕೊಡಿ ಎಂದು ಕೇಳಿದ್ದ ಪ್ರತಿಪಕ್ಷಗಳತ್ತ ವಾಗ್ಬಾ ಣ ಎಸೆದ ಅವರು ಇದು ‘ತಂದೆಯನ್ನು ತಂದೆ ಎಂದು ಕರೆಯುವುದಕ್ಕೆ ತಾಯಿಯಲ್ಲಿ ಸಾಕ್ಷ್ಯ ಕೇಳಿದಂತೆ’ ಎಂದು ವ್ಯಾಖ್ಯಾನಿಸಿದ್ದಾರೆ. ಪ್ರತಿಪಕ್ಷಗಳು ಚುನಾವಣೆಯಲ್ಲಿ ಜನರು ನೀಡಿದ ಆದೇಶವನ್ನು ಗೌರವಿಸಬೇಕು ಎಂದಿದ್ದಾರೆ ಸಾರಂಗಿ.

ಸೇಲ್ಸ್ಮ್ಯಾನ್‌: ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಟೀಕಿಸಿ ಪ್ರಧಾನಿ ಮೋದಿ ಅಧಿಕಾರಕ್ಕೆ ಏರಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ದೂರಿದ್ದಾರೆ. ಮೋದಿ ನೇತೃತ್ವದ ಸರ್ಕಾರ ಯಾವತ್ತೂ ಪ್ರಚಾರವನ್ನೇ ಬಯಸುತ್ತದೆ ಎಂದು ಆರೋಪ ಮಾಡಿದರು. ಪ್ರಧಾನಿ ವಿರುದ್ಧ ಚೌಧರಿ ಮಾಡಿದ ಆರೋಪಗಳ ಬಗ್ಗೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಅದನ್ನು ಕಡತದಿಂದ ತೆಗೆದು ಹಾಕಲು ಸ್ಪೀಕರ್‌ ಓಂ ಬಿರ್ಲಾ ಆದೇಶಿಸಿದರು. ಅದಕ್ಕೆ ಸ್ಪಷ್ಟನೆ ನೀಡಿದ ಚೌಧರಿ ‘ಹಿಂದಿ ಭಾಷೆಯಲ್ಲಿ ನನಗೆ ಹಿಡಿತ ಇಲ್ಲದೇ ಇದ್ದ ಕಾರಣ ಹೀಗಾಗಿದೆ’ ಎಂದರು.ಪ್ರಧಾನಿ ದೊಡ್ಡ ಸೇಲ್ಸ್ಮ್ಯಾನ್‌ ಮತ್ತು ಅದರಲ್ಲಿ ಪರಿಣತಿ ಸಾಧಿಸಿದ್ದಾರೆ ಎಂದೂ ಕಾಂಗ್ರೆಸ್‌ ನಾಯಕ ಆರೋಪಿಸಿದ್ದಾರೆ.

ವಿಧೇಯಕ ಮಂಡನೆ: ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿರುವ ಜನರಿಗೆ ನೀಡಿದಂತೆಯೇ ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ನೆಲೆಸಿರುವ ಜನರಿಗೆ ನೇರ ನೇಮಕದಲ್ಲಿ ಮೀಸಲಾತಿ ನೀಡುವ ವಿಧೇಯಕವನ್ನು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಜಿ.ಕಿಶನ್‌ ರೆಡ್ಡಿ ಲೋಕಸಭೆಯಲ್ಲಿ ಮಂಡಿಸಿದ್ದಾರೆ.

ಎಸ್‌ಇಜೆಡ್‌ ಮಸೂದೆ: ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್‌)ಗಳಲ್ಲಿ ಟ್ರಸ್ಟ್‌ಗಳನ್ನು ಸ್ಥಾಪಿಸಲು ಅನುಕೂಲವಾಗುವ ತಿದ್ದುಪಡಿ ಇರುವ ವಿಧೇಯಕ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಮಾರ್ಚ್‌ನಲ್ಲಿ ಹೊರಡಿಸಲಾಗಿರುವ ಸುಗ್ರಿವಾಜ್ಞೆ ಸ್ಥಾನದಲ್ಲಿ ಅದು ಬರಲಿದೆ. ಅಂಗೀಕಾರವಾದ ಬಳಿಕ ವಿಶೇಷ ಅರ್ಥ ವಲಯ ಕಾಯ್ದೆ 2005ರ ಉಪವಿಧಿ 5ರ ಸೆಕ್ಷನ್‌ 2ಕ್ಕೆ ತಿದ್ದುಪಡಿಯಾಗಿ ಕೇಂದ್ರ ಸರ್ಕಾರದಿಂದ ಅನುಮೋದನೆಗೊಂಡ ಟ್ರಸ್ಟ್‌ ಅಥವಾ ಸಂಸ್ಥೆಯನ್ನು ಅದರಲ್ಲಿ ಸ್ಥಾಪಿಸಲು ಅನುಕೂಲವಾಗುತ್ತದೆ. ಬಂಡವಾಳ ಹೂಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ‘ವ್ಯಕ್ತಿ’ ಬದಲಾಗಿ ‘ಟ್ರಸ್ಟ್‌’ ರಚನೆ ವಿಚಾರ ಸೇರ್ಪಡೆ ಮಾಡಲಾಗಿದೆ.

Advertisement

ಆಧಾರ್‌ ವಿಧೇಯಕ ಮಂಡನೆ: ಬ್ಯಾಂಕ್‌ಗಳಲ್ಲಿ ಹೊಸತಾಗಿ ಖಾತೆ ತೆರೆಯಲು ಮತ್ತು ಮೊಬೈಲ್ ಸಂಪರ್ಕ ಪಡೆಯಲು ಆಧಾರ್‌ ಅನ್ನು ಸ್ವಯಂ ಇಚ್ಛೆಯಿಂದ ನೀಡಲು ಅವಕಾಶ ಮಾಡಿಕೊಡುವ ವಿಧೇಯಕವನ್ನು ಲೋಕಸಭೆಯಲ್ಲಿ ಪ್ರತಿಪಕ್ಷಗಳ ವಿರೋಧದ ನಡುವೆ ದೂರಸಂಪರ್ಕ ಸಚಿವ ರವಿಶಂಕರ ಪ್ರಸಾದ್‌ ಮಂಡಿಸಿದ್ದಾರೆ. ಅದು ಮಾರ್ಚ್‌ನಲ್ಲಿ ಹೊರಡಿಸಲಾಗಿದ್ದ ಸುಗ್ರೀವಾಜ್ಞೆಯನ್ನು ಮತ್ತು 2016ರ ಆಧಾರ್‌ ಕಾಯ್ದೆ ಸ್ಥಾನದಲ್ಲಿ ಜಾರಿಯಾಗಲಿದೆ. ಕೇಂದ್ರದ ಉದ್ದೇಶ ವಿರೋಧಿಸಿದ ರೆವೊಲ್ಯೂಷನರಿ ಸೋಶಿಯಲಿಸ್ಟ್‌ ಪಕ್ಷದ ಸಂಸದ ಎನ್‌.ಕೆ.ಪ್ರೇಮಚಂದ್ರನ್‌, ‘ಇದು ಸುಪ್ರೀಂಕೋರ್ಟ್‌ ತೀರ್ಪಿನ ಸ್ಪಷ್ಟ ಉಲ್ಲಂಘನೆ’ ಎಂದು ಟೀಕಿಸಿದ್ದಾರೆ.

ಭಾಷೆಗಳ ಆಯ್ಕೆಗೆ ಅನುಕೂಲ

ಭಾಷೆಗಳ ಆಯ್ಕೆ ಸುಲಭವಾಗಿ ಇರಲಿ ಎಂಬ ನಿಟ್ಟಿನಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರ ಶಿಫಾರಸು ಮಾಡಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೋಖ್ರೀಯಾಲ್ ನಿಶಾಂಕ್‌ ಸ್ಪಷ್ಟನೆ ನೀಡಿದ್ದಾರೆ. ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿರಂಗನ್‌ ನೇತೃತ್ವದ ಸಮಿತಿಯಲ್ಲಿ ಹಿಂದಿ ಭಾಷೆ ಕಡ್ಡಾಯ ಎಂದು ಶಿಫಾರಸು ಮಾಡಿದ್ದು ಎಂಬ ಅಂಶಕ್ಕೆ ಕರ್ನಾಟಕ, ತಮಿಳುನಾಡುಗಳಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು. ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಒವೈಸಿ ಮತ್ತು ಡಿಎಂಕೆ ಸಂಸದರು ಲೋಕಸಭೆಯಲ್ಲಿ ಈ ವಿಚಾರಕ್ಕೆ ಕೋಲಾಹಲ ಸೃಷ್ಟಿಸಿದರು.

490 ಬಿಲಿಯನ್‌ ಡಾಲರ್‌ ಕಪ್ಪುಹಣ

ವಿದೇಶಗಳ ಮತ್ತು ತೆರಿಗೆ ಸ್ವರ್ಗ ರಾಷ್ಟ್ರಗಳಲ್ಲಿ ಭಾರತೀಯರು ಕಾನೂನು ಬಾಹಿರವಾಗಿ ಹೂಡಿಕೆ ಮಾಡಿರುವ ಮೊತ್ತ 216.48 ಬಿಲಿಯನ್‌ ಅಮೆರಿಕನ್‌ ಡಾಲರ್‌ಗಳಿಂದ 490 ಬಿಲಿಯನ್‌ ಅಮೆರಿಕನ್‌ ಡಾಲರ್‌ ವರೆಗೆ ಇರಬಹುದು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್‌ ಫೈನಾನ್ಸ್‌ ಆ್ಯಂಡ್‌ ಪಾಲಿಸಿ (ಎನ್‌ಐಪಿಎಫ್ಪಿ), ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್‌ ಇಕನಾಮಿಕ್‌ ರಿಸರ್ಚ್‌ (ಎನ್‌ಸಿಎಇಆರ್‌), ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫೈನಾನ್ಶಿಯಲ್ ಮ್ಯಾನೇಜ್‌ಮೆಂಟ್ (ಎನ್‌ಐಎಫ್ಎಂ) ಎಂಬ ಮೂರು ಸಂಸ್ಥೆಗಳು ನಡೆಸಿದ ಅಧ್ಯಯನದಿಂದ ಈ ದತ್ತಾಂಶ ಲಭ್ಯವಾಗಿದೆ ಎಂದು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಸ್ಥಾಯಿ ಸಮಿತಿಯ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಅದನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ. ರಿಯಲ್ ಎಸ್ಟೇಟ್, ಗಣಿಗಾರಿಕೆ, ಪಾನ್‌ ಮಸಾಲಾ, ತಂಬಾಕು, ಸಿನಿಮಾ, ಶಿಕ್ಷಣ, ಬುಲಿಯನ್‌ ಕ್ಷೇತ್ರಗಳಲ್ಲಿ ನಿಯಮ ಮೀರಿ ಸಿಕ್ಕಿದ ಮೊತ್ತವನ್ನು ವಿದೇಶಿ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಮೂರು ಸಂಸ್ಥೆಗಳು ನಡೆಸಿದ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next