Advertisement

ಮೇಲ್ದರ್ಜೆಗೇರಿ ವರ್ಷವಾದರೂ ಸೌಲಭ್ಯವಿಲ್ಲ 

03:44 PM Oct 07, 2017 | Team Udayavani |

ಪುತ್ತೂರು: ಪುತ್ತೂರು-ಸುಳ್ಯದ ಗಡಿ ಭಾಗದ ಪ್ರದೇಶ ಬೆಳ್ಳಾರೆಯ ಹೊರ ಠಾಣೆಯನ್ನು ಮೇಲ್ದರ್ಜೆಗೇರಿಸ ಬೇಕು ಎನ್ನುವ ದಶಕಗಳ ಬೇಡಿಕೆ ಈಡೇರಿ ವರ್ಷ ಕಳೆದಿದ್ದರೂ, ಸಿಬಂದಿ ವಸಂತಿ ಗೃಹ, ವಿಶ್ರಾಂತಿ ಕೊಠಡಿ, ಸುಸಜ್ಜಿತ ಕಟ್ಟಡ ಇಲ್ಲದೇ ಪರದಾಡುವ ಸ್ಥಿತಿ ಎದುರಾಗಿದೆ.

Advertisement

ಹೊರ ಠಾಣೆಗೆ ಸೇರಿದ ಕಟ್ಟಡದಲ್ಲಿ ಪೂರ್ಣಪ್ರಮಾಣದ ಠಾಣೆ ಕಾರ್ಯ ನಿರ್ವಹಿಸುತ್ತಿದೆ. ಒಟ್ಟು 21 ಪೊಲೀಸ್‌ ಕಾನ್ಸ್‌ಟೆಬಲ್‌ ಹುದ್ದೆಗಳ ಪೈಕಿ ಇನ್ನೂ 9 ಹುದ್ದೆ ಭರ್ತಿ ಆಗಿಲ್ಲ. ಹಾಗಾಗಿ ಇರುವ 12 ಸಿಬಂದಿಯೇ ಸಂಪೂರ್ಣ ಹೊಣೆ ಹೊರಬೇಕಿದ್ದು, ಹೆಚ್ಚುವರಿ ಕೆಲಸ ನಿರ್ವಹಿಸಬೇಕಿದೆ. ಆದರೆ, ಇವರಿಗೆ ವಿಶ್ರಾಂತಿ ಕೊಠಡಿಯಿಲ್ಲ. ಸ್ಟೇಷನ್‌ ಕಟ್ಟಡಕ್ಕೆ ತಾಗಿಕೊಂಡು ತಾತ್ಕಾಲಿಕವಾಗಿ ಶೀಟು ಹಾಸಿದ ಕೊಠಡಿ ನಿರ್ಮಿಸಿದ್ದು, ಅದರಲ್ಲಿಯೇ ವಿಶ್ರಾಂತಿ ಪಡೆ ಯಬೇಕಾದ ಸ್ಥಿತಿ ಇದೆ.

ವಸತಿಗೆ ಪರದಾಟ
ಬೇರೆ ಠಾಣೆಗಳಲ್ಲಿ ಪೊಲೀಸ್‌ ಸಿಬಂದಿಗೆ ವಸತಿ ಗೃಹ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಅದನ್ನೂ ಕಲ್ಪಿಸಿಲ್ಲ. ಇರುವ ಕೊಠಡಿಯಲ್ಲಿ ವೆಪನ್ಸ್‌ (ಆಯುಧ)ಗಳನ್ನು ಸಂಗ್ರಹಿಸಡಲಾಗಿದೆ. ಠಾಣೆಯ ಆಸುಪಾಸಿನಲ್ಲಿ ಸೂಕ್ತ ಬಾಡಿಗೆ ಮನೆ, ಕೊಠಡಿಗಳು ದೊರೆಯುತ್ತಿಲ್ಲ. ಇದು ಹೊರಜಿಲ್ಲೆಗಳಿಂದ ಬಂದ ಸಿಬಂದಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ.

ಎಲ್ಲದಕ್ಕೂ ಬಾಡಿಗೆ ಕಟ್ಟಡ
ಸಾರ್ವಜನಿಕರ ಕುಂದು-ಕೊರತೆಗೆ ಸಂಬಂಧಿಸಿ ಸಭೆ ಆಯೋಜಿಸಲು ಸಭಾ ಭವನ ಇಲ್ಲ. ಬಾಡಿಗೆ ಕಟ್ಟಡಕ್ಕೆ ಮೊರೆ ಹೋಗಬೇಕಿದೆ. ಈ ಹಿಂದಿನ ಎಸ್‌ಪಿ ಅವಧಿಯಲ್ಲಿ ಸುಸಜ್ಜಿತ ಕಟ್ಟಡಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದು ಇನ್ನಷ್ಟೇ ಮಂಜೂರಾಗಬೇಕಿದೆ.

ಇಲಾಖೆ ಆನ್‌ಲೈನ್‌ ಪದ್ಧತಿಗೆ ಭಡ್ತಿ ಪಡೆದಿದ್ದರೂ, ಐದು ಕಂಪ್ಯೂಟರ್‌ಗಳ ಪೈಕಿ ಒಂದನ್ನು ಮಾತ್ರ ಪೂರೈಸಲಾಗಿದೆ. ದಾನಿಗಳು ಕೊಡುಗೆ ರೂಪದಲ್ಲಿ ನೀಡಿದ ಎರಡು ಕಂಪ್ಯೂಟರ್‌ ಬಳಕೆಯಾಗುತ್ತಿದೆ. ಪೊಲೀಸ್‌ ಐಟಿ ಸೆಲ್‌ ನಿಯಮದಿಂದ ದೂರು ದಾಖಲಿಕರಣದಿಂದ ಹಿಡಿದು ಎಲ್ಲ ನಿಯಮಗಳು ಆನ್‌ಲೈನ್‌ ಮೂಲಕವೇ ಕೈಗೊಳ್ಳಬೇಕು. ಇದಕ್ಕೆ ಕಂಪ್ಯೂಟರ್‌ಗಳು ಕೊರತೆಯಾಗುತ್ತಿದ್ದು, ದಾಖಲು ಪ್ರಕ್ರಿಯೆಗೆ ಸಮಸ್ಯೆಯಾಗುತ್ತಿದೆ.

Advertisement

ಮೇಲರ್ಜೆಗೇರಿತ್ತು ಠಾಣೆ
ಬೆಳ್ಳಾರೆ ಹೊರ ಠಾಣೆ ಕಳೆದ ವರ್ಷ ಆ. 15ರಂದು ಪೂರ್ಣ ಪ್ರಮಾಣದ ಠಾಣೆಯಾಗಿ ಮೇಲ್ದರ್ಜೆಗೇರಿತ್ತು. ಸುಳ್ಯ ಠಾಣಾ ಅಧೀನದಲ್ಲಿನ ಏಳು ಗ್ರಾಮಗಳು, ಸುಬ್ರಹ್ಮಣ್ಯ, ಕಡಬ ಮತ್ತು ಪುತ್ತೂರು ಗ್ರಾಮೀಣ ಠಾಣಾ ವ್ಯಾಪ್ತಿಯ 21 ಗ್ರಾಮಗಳು ಇದರ ಸರಹದ್ದಿಗೆ ಸೇರಿವೆ. ಬೆಳ್ಳಾರೆ, ಬಾಳಿಲ, ಕಳಂಜ, ಮುಪ್ಪೇರ್ಯ, ಪೆರುವಾಜೆ, ಕೊಡಿಯಾಲ, ಐವರ್ನಾಡು, ಸುಳ್ಯ ಠಾಣಾ ವ್ಯಾಪ್ತಿಯ ಅಮರಮುಟ್ನೂರು, ಅಮರ ಪಟ್ನೂರು, ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕಲ್ಮಡ್ಕ, ಮುರುಳ್ಯ, ಎಡಮಂಗಲ, ಎಣ್ಮೂರು, ಕಡಬ ಠಾಣಾ ವ್ಯಾಪ್ತಿಯ ಕಾಣಿಯೂರು, ಸವಣೂರು, ಬೆಳಂದೂರು, ಕಾಯಿಮಣ, ಕುದ್ಮಾರು, ಪುಣ್ಚಪ್ಪಾಡಿ, ಪುತ್ತೂರು ಗ್ರಾಮಾಂತರ ಠಾಣೆಯ ಕೊಳ್ತಿಗೆ, ಪಾಲ್ತಾಡು ಗ್ರಾಮಗಳು ಇದರ ವ್ಯಾಪ್ತಿಯಲ್ಲಿವೆ

ದೊಡ್ಡ ವಾಪ್ತಿ 
ಪುತ್ತೂರು, ಸುಳ್ಯ ತಾಲೂಕಿನ ವ್ಯಾಪ್ತಿಯಲ್ಲಿ ಬೆಳ್ಳಾರೆ ಠಾಣೆ ಸರಹದ್ದು ಅಧಿಕ ವ್ಯಾಪ್ತಿಯನ್ನು ಒಳಗೊಂಡಿದೆ. 12 ಮಂದಿ ಸಿಬಂದಿ 21 ಗ್ರಾಮಗಳನ್ನು ನಿರ್ವಹಿಸಬೇಕಲ್ಲದೇ, ಬೀಟ್‌ ವ್ಯವಸ್ಥೆಯನ್ನು ಜಾರಿಗೊಳಿಸಬೇಕಿದೆ. ಖಾಲಿ ಇರುವ ಹುದ್ದೆಯ ಭರ್ತಿಯ ಜತೆಗೆ ಹೆಚ್ಚುವರಿ ಸಿಬಂದಿ ನೇಮಕ ಮಾಡಿದರೆ ಕೆಲಸದ ಹೊರೆ ಕಡಿಮೆಯಾಗಲಿದೆ.

ಪರಿಶೀಲನೆ ನಡೆದಿದೆ
ಠಾಣೆಗೆ ಮೂಲ ಸೌಕರ್ಯ ಕಲ್ಪಿಸುವ ಕುರಿತಂತೆ ಪರಿಶೀಲನೆ ನಡೆದಿದೆ. ಜಿಲ್ಲಾ ಪೊಲೀಸ್‌ ಇಲಾಖಾಧಿಕಾರಿಗಳು ಸ್ಥಳಕ್ಕೆ ಬಂದು ಖಾಲಿ ನಿವೇಶನ ಪರಿಶೀಲಿಸಿದ್ದಾರೆ. 
ಚೆಲುವಯ್ಯ 
ಸಬ್‌ ಇನ್‌ಸ್ಪೆಕ್ಟರ್‌, ಬೆಳ್ಳಾರೆ ಠಾಣೆ 

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next