Advertisement

ಶ್ರೀಮಂತ ಪಾಟೀಲ ಹೈಜಾಕ್‌ ಹಿಂದೆ ಕಾಣದ ಕೈ?

02:45 AM Jul 19, 2019 | Sriram |

ಬೆಳಗಾವಿ: ‘ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಬಿಡುವುದಿಲ್ಲ. ಸಮ್ಮಿಶ್ರ ಸರಕಾರದ ಭಾಗವಾಗಿಯೇ ಇರುತ್ತೇನೆ’ ಎಂದು ಹೇಳುತ್ತಲೇ ಬಂದಿದ್ದ ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ಅವರು ಏಕಾಏಕಿ ವಿಧಾನಸಭೆ ಕಲಾಪದಿಂದ ದೂರ ಉಳಿದು ಮುಂಬೈ ಸೇರಿಕೊಂಡಿರುವುದು ನಾನಾ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.

Advertisement

ಆರೋಗ್ಯದ ಕಾರಣ ಹೇಳಿ ಮುಂಬೈಗೆ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಅವರ ಈ ನಿಗೂಢ ಮುಂಬೈ ಪ್ರಯಾಣದ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಇದರ ಹಿಂದೆ ಬಿಜೆಪಿಗಿಂತ ಕಾಂಗ್ರೆಸ್‌ನ ಕಾಣದ ಪ್ರಭಾವಿ ಕೈಗಳು ಬಹಳ ಕೆಲಸ ಮಾಡಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್‌ನ ಒಂದು ಗುಂಪು ಬಿಜೆಪಿ ಮೂಲಕ ಶ್ರೀಮಂತ ಪಾಟೀಲರನ್ನು ಹೈಜಾಕ್‌ ಮಾಡಿದೆ. ಕೃಷ್ಣಾ ನದಿ ನೀರಿನ ಬವಣೆ ಸಮ್ಮಿಶ್ರ ಸರಕಾರಕ್ಕೆ ಮುಳುವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮುಂಬೈನಲ್ಲಿ ಕುಳಿತಿರುವ ರಮೇಶ ಜಾರಕಿಹೊಳಿ ಕಾಂಗ್ರೆಸ್‌ನ ಹಿರಿಯ ನಾಯಕರ ಸಲಹೆಯಂತೆಯೇ ಈ ವ್ಯವಸ್ಥಿತ ಆಪರೇಶನ್‌ ಮಾಡಿದ್ದಾರೆ. ಶ್ರೀಮಂತ ಪಾಟೀಲ ವಿಶ್ವಾಸಮತ ಯಾಚನೆ ಕಲಾಪದಿಂದ ದೂರ ಉಳಿಯುವುದಕ್ಕೆ ಬೇರೆ ಯಾವುದೇ ಪ್ರಬಲ ಕಾರಣಗಳಿಲ್ಲ. ಆದರೆ ಇದರ ಮೂಲಕ ಡಿ.ಕೆ.ಶಿವಕುಮಾರ ಅವರಿಗೆ ಹೊಡೆತ ನೀಡುವುದು ಇದರ ಹಿಂದಿನ ಏಕೈಕ ಉದ್ದೇಶ ಎಂಬುದು ಕಾಂಗ್ರೆಸ್‌ ಮೂಲಗಳ ಹೇಳಿಕೆ.

ಡಿಕೆಶಿ ಮೇಲೆ ಸಿಟ್ಟು : ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಡಿ.ಕೆ.ಶಿವಕುಮಾರ್‌ ಮೇಲಿರುವ ಅಗಾಧ ಸಿಟ್ಟಿಗೆ ಈಗ ಕಾಗವಾಡ ಶಾಸಕ ಕೂಡ ಆಹಾರವಾಗಿದ್ದಾರೆ. ಶಿವಕುಮಾರ್‌ ಶಕ್ತಿಯನ್ನು ದುರ್ಬಲ ಮಾಡಬೇಕು ಎಂಬ ಕಾರಣದಿಂದಲೇ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಸಹೋದರರು ಈ ಹೊಸ ಅನಿರೀಕ್ಷಿತ ಆಟ ಆಡಿದ್ದಾರೆ ಎಂಬ ಅಭಿಪ್ರಾಯ ಕಾಂಗ್ರೆಸ್‌ ವಲಯದಲ್ಲೇ ಕೇಳಿಬರಲಾಂಭಿಸಿದೆ.

ಕಾಗವಾಡ ಕ್ಷೇತ್ರದ ಚುನಾವಣೆಯಲ್ಲಿ ಶ್ರೀಮಂತ ಪಾಟೀಲ ಅವರ ಗೆಲುವಿನ ಹಿಂದೆ ರಮೇಶ ಜಾರಕಿಹೊಳಿ ಸಹಾಯ ಇದೆ ಎಂಬುದು ಗೊತ್ತಿರುವ ಸಂಗತಿ. ಇದೇ ಕಾರಣದಿಂದ ಶ್ರೀಮಂತ ಪಾಟೀಲ ಯಾವತ್ತೂ ಜಾರಕಿಹೊಳಿ ಸಹೋದರರನ್ನು ಬಿಟ್ಟುಕೊಡುತ್ತಿರಲಿಲ್ಲ. ಇದೇ ವಿಶ್ವಾಸದಿಂದಲೇ ಜಾರಕಿಹೊಳಿ ಸಹೋದರರು ಈಗ ಶ್ರೀಮಂತ ಪಾಟೀಲರನ್ನು ಶಿವಕುಮಾರ ಗುಂಪಿನಿಂದ ತಮ್ಮ ಸುಪರ್ದಿಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಬೇಸಿಗೆ ಸಮಯದಲ್ಲಿ ಕೃಷ್ಣಾ ನದಿ ತೀರದ ಅಥಣಿ ಹಾಗೂ ಕಾಗವಾಡ ತಾಲೂಕುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಹಳ ಗಂಭೀರವಾಗಿತ್ತು. ಶ್ರೀಮಂತ ಪಾಟೀಲ ಹಾಗೂ ಅಥಣಿ ಶಾಸಕ ಮಹೇಶ ಕುಮಟಳ್ಳಿ ಸಾಕಷ್ಟು ಸಲ ಸರಕಾರ ಹಾಗೂ ಜಲಸಂಪನ್ಮೂಲ ಸಚಿವ ಶಿವಕುಮಾರ್‌ ಅವರಿಗೆ ಮನವಿ ಮಾಡಿ ಮಹಾರಾಷ್ಟ್ರದ ಜೊತೆ ಒಪ್ಪಂದ ಮಾಡಿಕೊಳ್ಳುವಂತೆ ಕೋರಿದ್ದರು. ಆದರೆ ಅವರ ಒತ್ತಾಯಕ್ಕೆ ತಕ್ಕಂತೆ ಸರಕಾರದಿಂದ ಗಂಭೀರ ಪ್ರಯತ್ನಗಳು ಆಗಲಿಲ್ಲ. ಇದೇ ಆಸಮಾಧಾನವನ್ನು ಕಾರಣವಾಗಿಟ್ಟುಕೊಂಡು ಈಗ ಶ್ರೀಮಂತ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಹಂತಕ್ಕೆ ಬಂದಿದ್ದಾರೆ ಎಂಬುದು ಅವರ ಆಪ್ತ ವಲಯದ ಹೇಳಿಕೆ.

ಶ್ರೀಮಂತ ಪಾಟೀಲರಿಗೆ ಅಂತಹ ಅರೋಗ್ಯದ ಸಮಸ್ಯೆ ಇರಲಿಲ್ಲ. ಒಂದು ವೇಳೆ ಅವರಿಗೆ ನಿಜವಾಗಿಯೂ ಹೃದ್ರೋಗದ ಸಮಸ್ಯೆ ಇದ್ದರೆ ಬೆಂಗಳೂರಿನಲ್ಲೇ ದೊಡ್ಡ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಬಹುದಿತ್ತು. ಆದರೆ ಸಮ್ಮಿಶ್ರ ಸರಕಾರದ ಅಳಿವು ಉಳಿವಿನ ಈ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರಿಗೆ ಮಾಹಿತಿ ನೀಡದೆ ಏಕಾಏಕಿ ಬೆಂಗಳೂರಿನಿಂದ ಮುಂಬೈಗೆ ಪ್ರಯಾಣ ಬೆಳಸಿರುವುದು ಅನುಮಾನ ಬರುವಂತೆ ಮಾಡಿದೆ ಎಂಬುದು ಕಾಗವಾಡ ಕ್ಷೇತ್ರದ ಕಾಂಗ್ರೆಸ್‌ ನಾಯಕರ ಅಭಿಪ್ರಾಯ.

ಶ್ರೀಮಂತ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದೇ ಆದರೆ ಅದು ದುರ್ದೈವದ ಸಂಗತಿ. ಸುದೀರ್ಘ‌ ವರ್ಷಗಳ ನಂತರ ಕಾಗವಾಡ ಕ್ಷೇತ್ರ ಕಾಂಗ್ರೆಸ್‌ಗೆ ಒಲಿದಿದೆ. ಜನ ಬದಲಾವಣೆ ಬಯಸಿ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದರು. ಈಗ ರಾಜೀನಾಮೆ ನೀಡಿದ್ದೇ ಆದರೆ ಕ್ಷೇತ್ರದ ಜನರಿಗೆ ಮೋಸ ಮಾಡಿದಂತೆ ಆಗಲಿದೆ.
-ಶಹಜಹಾನ ಡೊಂಗರಗಾವ್‌, ಮಾಜಿ ಶಾಸಕ
-ಕೇಶವ ಆದಿ
Advertisement

Udayavani is now on Telegram. Click here to join our channel and stay updated with the latest news.

Next