Advertisement

ಕೋವಿಡ್ ನಿಯಂತ್ರಣಕ್ಕೆ ಸರ್ವಕ್ರಮ: ಕೂರ್ಮಾ ರಾವ್‌

01:27 AM Jan 12, 2022 | Team Udayavani |

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಏನು ಮಾಡುತ್ತಿದೆ ಹಾಗೂ ತೆಗೆದುಕೊಂಡಿರುವ ಮುಂಜಾಗ್ರತ ಕ್ರಮಗಳೇನು? ಸೋಂಕಿತರ ಚಿಕಿತ್ಸೆಗೆ ಸಿದ್ಧತೆ, ಹೊರ ರಾಜ್ಯದಿಂದ ಬರುವವರ ತಪಾಸಣೆ ಇತ್ಯಾದಿಗಳ ಕುರಿತು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. “ಉದಯವಾಣಿ’ಗೆ ನೀಡಿರುವ ಸಂದರ್ಶನ ಇಲ್ಲಿದೆ. 

Advertisement

 ಹೊರ ರಾಜ್ಯಗಳಿಂದ ಬರುವವರ ತಪಾಸಣೆ ಹೇಗಿದೆ?
– ರೈಲು ನಿಲ್ದಾಣಗಳಲ್ಲಿ ತಪಾಸಣೆಗೆ ವಿಶೇಷ ತಂಡ ರಚಿಸಲಾಗಿದೆ. ಎರಡು ಡೋಸ್‌ ಲಸಿಕೆ ಹಾಕಿಸಿಕೊಂಡಿರುವ ಪ್ರಮಾಣ ಪತ್ರದ ಜತೆಗೆ ಆರ್‌ಟಿಪಿಸಿಆರ್‌ ಪರೀಕ್ಷೆಯ ವರದಿ ಇಲ್ಲದವರಿಗೆ ಸ್ಥಳದಲ್ಲೇ ಪರೀಕ್ಷೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಿದ್ದೇವೆ. ರಸ್ತೆಯ ಮೂಲಕ ಜಿಲ್ಲೆಗೆ ಬರುವವರ ತಪಾಸಣೆಯನ್ನು ಚೆಕ್‌ಪೋಸ್ಟ್‌ಗಳಲ್ಲಿ ಬಿಗಿಗೊಳಿಸಲಾಗುತ್ತದೆ. ರೈಲು ನಿಲ್ದಾಣದಲ್ಲಿ ಸಿಬಂದಿ ಕರ್ತವ್ಯ ಲೋಪದ ಬಗ್ಗೆಯೂ ಪರಿಶೀಲನೆ ಮಾಡಲಾಗುವುದು.

ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ ಬಗ್ಗೆ ಕ್ರಮವೇನು?
– ಕಟ್ಟುನಿಟ್ಟಿನ ಜಾರಿ ನಿಟ್ಟಿನಲ್ಲಿ ಗ್ರಾ.ಪಂ., ಪ.ಪಂ., ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಉಲ್ಲಂ ಸುವವರಿಗೆ ದಂಡ ವಿಧಿಸುತ್ತಿದ್ದೇವೆ. ಆಯುಕ್ತರು, ಸಹಾಯಕ ಆಯುಕ್ತರು, ತಹಶೀಲ್ದಾರ್‌ ಹೀಗೆ ಎಲ್ಲ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ದಂಡ ಪ್ರಯೋಗ ಮಾಡುತ್ತಿದ್ದಾರೆ. ಜನಸಾಮಾನ್ಯರಲ್ಲೂ ಈ ಬಗ್ಗೆ ಅರಿವು ಅಗತ್ಯವಾಗಿ ಬರಬೇಕು. ಮಾಲ್‌, ಥಿಯೇಟರ್‌, ದೊಡ್ಡ ಮಳಿಗೆಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಇತ್ಯಾದಿ ನಿಯಮ ಪಾಲನೆಯನ್ನು ಸಂಸ್ಥೆಯ ಮುಖ್ಯಸ್ಥರಿಗೆ ವಹಿಸಿದ್ದೇವೆ. ಇಲ್ಲವಾದರೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಿದ್ದೇವೆ.

 ಇಲಾಖೆಗಳ ನಡುವೆ ಸಮನ್ವಯದ ಕೊರತೆ ಹೆಚ್ಚಾಗುತ್ತಿರುವುದೇಕೆ?
– ಕೊರೊನಾ ತಡೆಯುವ ನಿಟ್ಟಿನಲ್ಲಿ ಇಲಾಖೆಗಳ ಸಮನ್ವಯ ಬಹಳ ಮುಖ್ಯ. ಎಲ್ಲೂ ಸಮನ್ವಯದ ಕೊರತೆಯಿಲ್ಲ. ನಿತ್ಯವೂ ಪ್ರತೀ ಇಲಾಖೆಯಿಂದ ಕೊರೊನಾ ನಿಯಂತ್ರಣ ಸಂಬಂಧ ನಿಯೋಜಿಸಿರುವ ಅಧಿಕಾರಿಗಳ ಜತೆಗೆ ಸಭೆ ನಡೆಸಿ, ಅಗತ್ಯ ಸೂಚನೆ ನೀಡುತ್ತಿದ್ದೇವೆ. ಕಂಟೈನ್ಮೆಂಟ್‌ ವಲಯ ರಚನೆ, ಸೀಲ್‌ಡೌನ್‌, ಸೋಂಕಿತರ ಪತ್ತೆ, ಸೋಂಕಿತರ ಸಂಪರ್ಕದಲ್ಲಿರುವವರ ಪತ್ತೆ ಹೀಗೆ ಎಲ್ಲವನ್ನೂ ಸಮನ್ವಯದಿಂದ ಮಾಡುತ್ತಿದ್ದೇವೆ.

ವಿದ್ಯಾರ್ಥಿಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಭೌತಿಕ ತರಗತಿ ಹೇಗೆ?
– ಈ ವಿಚಾರ ಜಿಲ್ಲಾಡಳಿತದ ಗಮನಕ್ಕೂ ಬಂದಿದೆ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೂ ಚರ್ಚಿಸ‌ಲಾಗಿದೆ. ಎಲ್ಲೆಲ್ಲಿ ಸೋಂಕು ಪತ್ತೆಯಾಗಿದೆಯೋ ಅಲ್ಲಿ ನಿಯಂತ್ರಣಕ್ಕೆ ಬೇಕಾದ ಕ್ರಮ ತೆಗೆದುಕೊಂಡಿದ್ದೇವೆ. ಭೌತಿಕ ತರಗತಿ ರದ್ದು ಮಾಡುವ ಯಾವುದೇ ಕ್ರಮವನ್ನು ಇಲ್ಲಿಯವರೆಗೂ ತೆಗೆದುಕೊಂಡಿಲ್ಲ. ಮುಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗುತ್ತದೆ.

Advertisement

 ಎಷ್ಟು ಆಸ್ಪತ್ರೆಗಳಲ್ಲಿ ಎಷ್ಟು ಬೆಡ್‌ ಕಾದಿರಿಸಲಾಗಿದೆ?
ಆಕ್ಸಿಜನ್‌, ವೆಂಟಿಲೇಟರ್‌ ವ್ಯವಸ್ಥೆ ಹೇಗಿದೆ?
– ಎಲ್ಲ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದು, ಎಲ್ಲ ವಿಭಾಗಗಳಲ್ಲೂ ಶೇ. 50ರಷ್ಟು ಬೆಡ್‌ಗಳನ್ನು ಕಾದಿರಿಸಲು ಸೂಚನೆ ನೀಡಲಾಗಿದೆ. ಕೊರೊನೇತರ ರೋಗಿಗಳ ಚಿಕಿತ್ಸೆಗೂ ಸಮಸ್ಯೆಯಾಗದಂತೆ ನಿರ್ದೇಶನ ನೀಡಿದ್ದೇವೆ. ಜಿಲ್ಲಾ ಕೇಂದ್ರ, ಎಲ್ಲ ತಾಲೂಕು ಕೇಂದ್ರದಲ್ಲಿ ಬೆಡ್‌ಗಳನ್ನು ಕಾದಿರಿಸಿದ್ದೇವೆ. ಎರಡನೇ ಅಲೆ ಸಂದರ್ಭ ಆಕ್ಸಿಜನ್‌ ಹಾಗೂ ವೆಂಟಿಲೇಟರ್‌ ಸಮಸ್ಯೆಯಾಗಿತ್ತು. ಮೂರನೇ ಅಲೆ ವೇಳೆ ಹಾಗಾಗಬಾರದೆಂದು ಜಿಲ್ಲೆಯಲ್ಲಿ 7 ಆಕ್ಸಿಜನ್‌ ಪ್ಲಾಂಟ್‌ಗಳನ್ನು ಸಿದ್ಧಮಾಡಿಕೊಂಡಿದ್ದೇವೆ. ಐಸಿಯು, ವೆಂಟಿಲೇಟರ್‌ ಪರಿಶೀಲನೆ ಆಗಿದ್ದು, ಎಲ್ಲವೂ ಸುಸ್ಥಿತಿಯಲ್ಲಿವೆ. ಜತೆಗೆ ಸಂಸ್ಥೆಗಳ ಸಿಎಸ್‌ಆರ್‌ ನಿಧಿಯಲ್ಲಿ ಉಡುಪಿ, ಕುಂದಾಪುರ, ಕಾರ್ಕಳದಲ್ಲಿ ಮಕ್ಕಳ ಐಸಿಯು ಸ್ಥಾಪಪಿಸಲು ಸ್ಥಳ ಗುರುತಿಸಲಾಗಿದೆ. ಕಾರ್ಕಳದಲ್ಲಿ ಯುಪಿಸಿಎಲ್‌ನಿಂದ ಮಕ್ಕಳ ಐಸಿಯು ಘಟಕ ನಿರ್ಮಿಸಲಾಗುತ್ತದೆ. ಜಿಲ್ಲೆಯ ಸಿಐಐ ಹಾಗೂ ಚೇಂಬರ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿಯವರಿಗೂ ಮನವಿ ಕಳುಹಿಸಿದ್ದೇವೆ.

Advertisement

Udayavani is now on Telegram. Click here to join our channel and stay updated with the latest news.

Next