Advertisement

ಭಾರತದ ಐಕ್ಯತೆಗೆ ಸಂವಿಧಾನ, ಪ್ರಜಾಪ್ರಭುತ್ವ ಕಾರಣ

08:23 PM Jan 25, 2020 | Lakshmi GovindaRaj |

ಹಾಸನ: ವಿವಿಧ ಜಾತಿ, ಧರ್ಮ, ಭಾಷೆಗಳ ವೈವಿಧ್ಯತೆಯ ನಡುವೆಯೂ ಮಾದರಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಿಂದಾಗಿ ಭಾರತದಲ್ಲಿ ಐಕ್ಯತೆ ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅಭಿಪ್ರಾಯಪಟ್ಟರು. ನಗರದ ಕಲಾಭವನದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸುಭದ್ರ ಪ್ರಜಾಪ್ರಭುತ್ವಕ್ಕೆ ಎಲ್ಲರ ಪಾಲ್ಗೊಳ್ಳುವಿಕೆ ಬಹಳ ಮುಖ್ಯವಾಗಿದೆ.

Advertisement

ಮತದಾರರ ದಿನಾಚರಣೆ: ಭಾರತೀಯ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. ನಾವೆಲ್ಲರೂ ಚುನಾವಣೆಯಲ್ಲಿ ಸಕ್ರಿಯವಾಗಿ ತೋಡಗಿಸಿಕೊಳ್ಳುವುದರಿಂದ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಸುಭದ್ರಗೊಳಿಸಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲೆಯಲ್ಲಿ 17 ಲಕ್ಷ ಮತದಾರರು: 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ 17 ಲಕ್ಷ ಅರ್ಹ ಮತದಾರರಿದ್ದು, ಕೇವಲ ಶೇ.67ರಷ್ಟು ಮತ ಚಲಾವಣೆಯಾಗಿದೆ. ಮುಂದಿನ ದಿನಗಳಲ್ಲಿ 18 ವರ್ಷ ತುಂಬಿರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗಿರೀಶ್‌ ಹೇಳಿದರು.

ಮತದಾನದ ಮಹತ್ವದ ಅರಿಯಿರಿ: ದೇಶಕ್ಕೆ ಸ್ವಾತಂತ್ರ್ಯಬಂದು 70 ವರ್ಷ ಕಳೆದಿದ್ದರೂ ಮತದಾನದ ಬಗ್ಗೆ ಸಾರ್ವಜನಿಕರು ಹೆಚ್ಚಿನ ಆಸಕ್ತಿ ಮತ್ತು ಅದರ ಮಹತ್ವ ಅರಿಯದಿರುವುದು ವಿಷಾದನೀಯ ಹಾಗಾಗಿ ಯುವ ಜನರು ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಹೊಣೆ ಹೊರಬೇಕೆಂದು ಹೇಳಿದರು. ರಾಷ್ಟ್ರೀಯ ಮತದಾರ ದಿನದ ಅಂಗವಾಗಿ ಜಿಲ್ಲಾಧಿಕಾರಿ ಪ್ರತಿಜ್ಞಾ ವಿಧಿಯನ್ನು ಇದೇ ಸಂದರ್ಭದಲ್ಲಿ ಬೋಧಿಸಿದರು.

ಮತಪಟ್ಟಿಗೆ ಹೆಸರು ನೋಂದಾಯಿಸಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್‌ ಮಾತನಾಡಿ, ಪ್ರತಿ ವರ್ಷ ಜ.1ಕ್ಕೆ 18 ವರ್ಷ ಪೂರೈಸಿದ ಪ್ರತಿಯೊಬ್ಬರೂ ಮತದಾರ ಪಟ್ಟಿಗೆ ಸ್ವ ಆಸಕ್ತಿಯಿಂದ ತಮ್ಮ ಹೆಸರನ್ನು ಕಡ್ಡಾಯವಾಗಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹೊಸ ಯುವ ಮತದಾರರಿಗೆ ಮತದಾರ ಗುರುತಿನ ಚೀಟಿಯನ್ನು ಜಿಲ್ಲಾಧಿಕಾರಿಗಳು ವಿತರಿಸಿದರು. ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳನ್ನು ಸನ್ಮಾನಿಸಿದರು.

Advertisement

ಇದೇ ಸಂದರ್ಭದಲ್ಲಿ ನೂರು ವರ್ಷಗಳನ್ನು ಪೂರೈಸುವ ಸಮೀಪ ಇರುವ ಇಬ್ಬರು ಹಿರಿಯ ಮತದಾರರನ್ನು ಸನ್ಮಾನಿಸಿದರು. ಶಾಲಾ ಕಾಲೇಜು ಹಂತದಲ್ಲಿ ಚುನಾವಣೆ ಕುರಿತಂತೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಒಂದು ಸಾವಿರ ರೂ ಮೌಲ್ಯದ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಸ್ವಾತಂತ್ರ ಹೋರಾಟಗಾರ ಎಚ್‌.ಎಂ. ಶಿವಣ್ಣ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ‌ ಜವರಯ್ಯ, ಸ್ವೀಪ್‌ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿನೋದ್‌ಚಂದ್ರ, ಚುನಾವನಾ ತಹಸೀಲ್ದಾರ್‌ ಪದ್ಮನಾಭ ಶಾಸ್ತ್ರೀ, ತಹಶೀಲ್ದಾರ್‌ ಶಿವಶಂಕರಪ್ಪ, ಕಲಾ ಕಾಲೇಜಿನ ಪ್ರಾಂಶುಪಾಲ ರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.

ಜನಮನ ಸೆಳೆದ ಜನಜಾಗೃತಿ ಜಾಥಾ: ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಪಂ ಸಿಇಒ ಬಿ.ಎ.ಪರಮೇಶ್‌ ಅವರು ಚಾಲನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ತಹಶೀಲ್ದಾರ್‌ ಶಿವಶಂಕರಪ್ಪ, ಆಹಾರ ಇಲಾಖೆಯ ಉಪ ನಿರ್ದೇಶಕಿ ಸವಿತಾ, ಸರ್ಕಾರಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಗಂಗೇಗೌಡ, ಗೃಹ ವಿಜ್ಜಾನ ಕಾಲೇಜು ಪ್ರಾಂಶುಪಾಲ ಕೃಷ್ಣೇಗೌಡ, ಡಿವೈಎಸ್ಪಿ ಪುಟ್ಟಸ್ವಾಮಿಗೌಡ ಸೇರಿದಂತೆ ವಿವಿಧ ಕಾಲೇಜಿನ ಎನ್‌.ಸಿ.ಸಿ. ಘಟಕದ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು. ಮತದಾರ ಜಾಗೃತಿ ಜಾಥಾವು ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಹೊರಟು ಜಿಲ್ಲಾ ಕ್ರೀಡಾಂಗಣದತ್ತ ಸಾಗಿತು.

Advertisement

Udayavani is now on Telegram. Click here to join our channel and stay updated with the latest news.

Next