Advertisement

ಕಾರ್ಗಿಲ್‌ ಯೋಧನ ಅಪೂರ್ವ ವೀರಗಾಥೆ 

10:03 AM Feb 08, 2018 | |

ಶತ್ರುಗಳ ತೀರ ಅನಿರೀಕ್ಷಿತ ದಾಳಿಗೆ ನಿರೀಕ್ಷೆಗೂ ಮೀರಿದಂತೆ ದಿಟ್ಟ ಉತ್ತರ ಕೊಡುವ ಯೋಧರ ಅನುಭವಗಳು ನಿಜಕ್ಕೂ ಕುತೂಹಲಕರ. ಸದಾನಂದ ಅವರು ಅನುಭವ ಹೇಳುತ್ತ ಹೋಗುತ್ತಿದ್ದರೆ ಪ್ರತ್ಯಕ್ಷ ಕಂಡ ಅನುಭವ. 

Advertisement

ಶತ್ರುಗಳು ಗುಂಡಿನ ಸುರಿಮಳೆಗರೆದರೂ ಜಗ್ಗಲಿಲ್ಲ, ಎಂತಹುದೇ ಸಂದರ್ಭದಲ್ಲೂ ಧೃತಿಗೆಡಲಿಲ್ಲ, ದಾಳಿ ಮಾಡಿದವರಿಗೆ ಬಂದೂಕಿನಿಂದಲೇ ಉತ್ತರ ನೀಡಿ ಹಿಮ್ಮೆಟ್ಟಿಸಿದ ಅನುಭವವುಳ್ಳ ವೀರಯೋಧ ಬೆಳ್ಳಾರೆ ಸಮೀಪದ ಪೆರುವಾಜೆಯ ಸುಬೇದಾರ್‌ ಸದಾನಂದ ಅವರು. 28 ವರ್ಷಗಳಿಂದ ದೇಶಸೇವೆ ಮಾಡುತ್ತಿರುವ ಸದಾನಂದ ಮೂಲತಃ ಸುಳ್ಯ ತಾಲೂಕಿನ ದೇವಚ್ಚಳ ಗ್ರಾಮದ ಮಾವಿನಕಟ್ಟೆಯವರು.


ಪತ್ನಿ ಮತ್ತು ಮಕ್ಕಳ ಜತೆ ಸು| ಸದಾನಂದ 

ಸೇನೆಗೆ ಸೇರಲು ಊರವರ ನೆರವು
ಸದಾನಂದರದ್ದು ಕೃಷಿ ಕುಟುಂಬ. ಕಷ್ಟದಲ್ಲೇ ಮೇಲೆ ಬಂದವರು. ತಂದೆ ಕೃಷ್ಣ ಮಣಿಯಾಣಿ. ತಾಯಿ ಜಾನಕಿ. ಸೇನೆಗೆ ಸೇರಬೇಕೆಂಬ ಆಸೆ ಬಾಲ್ಯದಲ್ಲೇ ಇತ್ತು. ಬಿ.ಎ. ಪದವಿ ಬಳಿಕ ಅದಕ್ಕಾಗಿ ಪ್ರಯತ್ನಿಸಿ ಯಶಸ್ವಿಯಾದರು. ಸೇನೆಗೆ ಸೇರುವ ಸಂದರ್ಭ ಊರವರು ಬೆನ್ನಿಗೇ ಇದ್ದು ಹಣದ ನೆರವನ್ನೂ ನೀಡಿ ಬೆಂಬಲಿಸಿ ಆದರ್ಶ ಮೆರೆದರು. 


ವಿದೇಶಿ ಸೇನಾ ಪೊಲೀಸರಿಗೆ ತರಬೇತಿಯಲ್ಲಿ.

ಸದಾನಂದ ಅವರ ಪತ್ನಿ ಶಾಂತಾಮಣಿ ಸುಳ್ಯ ಶಾರದಾ ಕಾಲೇಜಿನಲ್ಲಿ ಮತ್ತು ಬೆಳ್ಳಾರೆ ಡಾ| ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ಪುತ್ರಿ ಸುಷ್ಮಿತಾ ಆರನೇ ತರಗತಿಯಲ್ಲಿ ಓದುತ್ತಿದ್ದರೆ, ಪುತ್ರ ಹಿತೇಶ್‌ 1ನೇ ತರಗತಿಯಲ್ಲಿ ಓದುತ್ತಿದ್ದಾರೆ. ಇವರ ಸೋದರ ರಾಜೇಶ್‌ ಅವರೂ ಸೇನೆಯಲ್ಲಿದ್ದು ದಿಲ್ಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

11 ವರ್ಷ ಕಾಶ್ಮೀರದಲ್ಲಿ
ಉದಯವಾಣಿಯಲ್ಲಿ ಸೇನಾ ನೇಮಕಾತಿ ಜಾಹೀರಾತು ನೋಡಿ ಭಾಗಿಯಾಗಿದ್ದ ಸದಾನಂದರು 1990 ಡಿ.26ರಂದು ಸೇನೆಗೆ ಸೇರಿದ್ದರು. ತರಬೇತಿ ಬಳಿಕ 1992ರಲ್ಲಿ ಕಾಶ್ಮೀರದ ಬಾರಾಮುಲ್ಲಾಕ್ಕೆ ಮೊದಲ ಪೋಸ್ಟಿಂಗ್‌ ಆಗಿತ್ತು. 1999ರಲ್ಲಿ ಕಾರ್ಗಿಲ್‌ ಯುದ್ಧ ಆರಂಭವಾಗಿ ಆಪರೇಷನ್‌ ವಿಜಯ್‌ ನಲ್ಲಿ ಭಾಗಿಯಾಗಿದ್ದರು. ವರ್ಗಾವಣೆಗಳ ಮಧ್ಯೆ ಉತ್ತರ ಪ್ರದೇಶಕ್ಕೆ ಬಂದರೂ 2002ರಲ್ಲಿ ಸಂಸತ್‌ ದಾಳಿ ಸಂದರ್ಭ ಆಪರೇಷನ್‌ ಪರಾಕ್ರಮ ಇತ್ಯಾದಿಗಳಲ್ಲಿ ಭಾಗಿಯಾಗಿದ್ದರು. ಒಟ್ಟಾರೆ ವೃತ್ತಿ ಜೀವನದ 11 ವರ್ಷ ಕಾಶ್ಮೀರದಲ್ಲೇ ಸೇವೆ ಸಲ್ಲಿಸಿದ ಅನುಭವ ಅವರದ್ದು.

Advertisement

ಸದ್ಯ ಬೆಂಗಳೂರಿನ ಮಿಲಿಟರಿ ಪೊಲೀಸ್‌ ತರಬೇತಿ ಕೇಂದ್ರದ ತರಬೇತುದಾರ ರಾಗಿದ್ದಾರೆ. ಭಾರತದ ಸೇನಾ ಪೊಲೀಸ್‌, ಅಫ್ಘಾನಿಸ್ಥಾನ, ಶ್ರೀಲಂಕಾ, ಘಾನಾ, ಬಾಂಗ್ಲಾದೇಶ, ಭೂತಾನ್‌, ನೇಪಾಲ, ಮಾಲ್ಡೀವ್ಸ್‌ ದೇಶಗಳ ಸೇನಾ ಪೊಲೀಸ್‌ಗೆ ತರಬೇತಿಯ ಜವಾಬ್ದಾರಿಯೂ ಅವರದ್ದು. 

ಕಾರ್ಯಾಚರಣೆಯ ಅನುಭವಗಳು
ಸತತ 1 ಗಂಟೆ ಗುಂಡಿನ ಸುರಿಮಳೆ!
‘1993ನೇ ಇಸವಿ. ನಾನಾಗ ಸೇನೆಗೆ ಸೇರಿ 3 ವರ್ಷ ಆಗಿತ್ತಷ್ಟೇ. ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಅಲ್ಲಿ ಸೈನ್ಯದ ಸಾಮಗ್ರಿ ಸಾಗಿಸುತ್ತಿದ್ದ ಟ್ರಕ್‌ ನಿಯಂತ್ರಣ ತಪ್ಪಿ ಬಿದ್ದಿತ್ತು. ಆಗ ಸೈನ್ಯದ ಸಂಚಾರ ಅಪಘಾತದ ನಿರ್ವಹಣೆ ಹೊಣೆ ನನಗೆ ವಹಿಸಲಾಗಿತ್ತು. ಟ್ರಕ್‌ ಮೇಲೆತ್ತುವ ಪ್ರಯತ್ನದಲ್ಲಿ ನಿರತರಾಗಿರುತ್ತಲೇ ಇದ್ದಕ್ಕಿದ್ದಂತೆ ಮೇಲ್ಭಾಗದಿಂದ ಶತ್ರುಗಳ ಗುಂಡಿನ ಸುರಿಮಳೆಯಾಗಿತ್ತು. ಅಲ್ಲಿ ವರೆಗೂ ನನಗೆ ದಾಳಿ-ಪ್ರತಿದಾಳಿಯ ಅನುಭವ ಆಗಿರಲಿಲ್ಲ. ಅದು ಅನಿರೀಕ್ಷಿತವಾಗಿತ್ತು. ಸುಮಾರು ಸತತ 1 ತಾಸು ಪರಸ್ಪರ ಫೈರಿಂಗ್‌ ಮುಂದುವರಿಯಿತು. ನಾವೂ ಸನ್ನದ್ಧರಾಗಿ ಪ್ರತಿ ದಾಳಿ ನಡೆಸಿದೆವು. ನಮ್ಮಲ್ಲಿ ಅಧಿಕ ಯುದ್ಧ ಸಾಮಗ್ರಿ, ಸೇನಾ ಶಕ್ತಿ ಇದ್ದರಿಂದ ಅವರನ್ನು ಸ್ಥಳದಿಂದ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದೆವು.’

ಯುದ್ಧವನ್ನೇ ಎದುರಿಸಿದ ಅನುಭವ
 ‘ಜಮ್ಮು ಮತ್ತು ಕಾಶ್ಮೀರದ ಬಿಂಬರ್‌ಗಲ್ಲಿಯ ಟ್ರಾಫಿಕ್‌ ಚೆಕ್‌ಪೋಸ್ಟ್‌ನಲ್ಲಿ ಟೀಮ್‌ ಲೀಡ್‌ ಮಾಡುತ್ತಿದ್ದೆ. ಬೆಳಗಿನ ಜಾವ 2.45ರ ಹೊತ್ತು. ನಾವಿದ್ದ ಜಾಗದಿಂದ 15 ಕಿ.ಮೀ. ದೂರದಲ್ಲಿ ಗುಂಡಿನ ದಾಳಿ ನಡೆದಿತ್ತು. ಕಾಡಿನ ಪ್ರದೇಶವದು. ಘಟನೆಯಲ್ಲಿ ನಾಲ್ಕೈದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಆ ಏರಿಯಾ ನನ್ನ ಚೆಕ್‌ಪೋಸ್ಟ್‌ಗೆ ಸೇರಿದ್ದ ಕಾರಣ ಜವಾಬ್ದಾರಿ ನನ್ನದಾಗಿತ್ತು. ಗಾಯಾಳುಗಳನ್ನು ಕೂಡಲೇ ಶ್ರೀನಗರಕ್ಕೆ ರವಾನಿಸಬೇಕಿತ್ತು. ಕೆಲವರನ್ನು ಸೇನಾ ಕ್ಯಾಂಪ್‌ಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ತತ್‌ಕ್ಷಣ ಅಲ್ಲಿಗೆ ಆ್ಯಂಬುಲೆನ್ಸ್‌ ಕಳುಹಿಸುವ ವ್ಯವಸ್ಥೆ, ಉನ್ನತಾಧಿಕಾರಿಗಳಿಗೆ ಮಾಹಿತಿ ರವಾನೆ ಇವೆಲ್ಲದರ ಜವಾಬ್ದಾರಿ ನನ್ನದಾಗಿತ್ತು. ಇಂತಹ ಸನ್ನಿವೇಶವನ್ನು ನಿಭಾಯಿಸುವುದೆಂದರೆ ಯುದ್ಧವನ್ನೇ ಎದುರಿಸಿದಂತಾಗಿತ್ತು.’

ಕಾರ್ಗಿಲ್‌ ಹೋರಾಟದಲ್ಲಿ..
‘ರಜೆಯಲ್ಲಿ ಊರಿಗೆ ಬಂದಿದ್ದೆ. ಅದೇ ಹೊತ್ತಲ್ಲಿ ಕಾರ್ಗಿಲ್‌ ಯುದ್ಧ ಘೋಷಣೆಯಾಯಿತು. ಟೆಲಿಗ್ರಾಂನಲ್ಲಿ ರಜೆ ರದ್ದುಪಡಿಸಿದ್ದರ ಬಗ್ಗೆ ಮತ್ತು ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಮಾಹಿತಿ ಬಂತು. ಮನೆಯಿಂದ ನೇರವಾಗಿ ಕಾಶ್ಮೀರಕ್ಕೆ ಬಂದೆ. ಯುದ್ಧದ ಸಮಯವಾದ್ದರಿಂದ ಮತ್ತೆ ಮನೆಗೆ ಹೋಗುತ್ತೇನೆ ಎಂಬ ಗ್ಯಾರೆಂಟಿ ಇರಲಿಲ್ಲ. ಕುಟುಂಬದವರಿಗೂ ಆತಂಕ ಇದ್ದೇ ಇರುತ್ತದೆ. ಮನೆ ಮಂದಿಯನ್ನು ಬಿಟ್ಟು ಬರುವ ಸಂದರ್ಭ ದೇಶ ರಕ್ಷಣೆಯೇ ನನ್ನ ಪಾಲಿಗೆ ಮುಖ್ಯವಾಗಿತ್ತು. ಕಾರ್ಗಿಲ್‌ ಕದನದ ಸಂದರ್ಭ ಸುಮಾರು 6 ತಿಂಗಳು ಕರ್ತವ್ಯ ನಿರ್ವಹಿಸಿದ್ದೆ.’ 

ಸೈನಿಕನಾಗಿ ದೇಶ ಸೇವೆಗೆ ಒಂದು ಒಳ್ಳೆಯ ಅವಕಾಶ ಸಿಕ್ಕಿದೆ. ಯುವ ಸಮುದಾಯವೂ ದೇಶದ ರಕ್ಷಣೆಗೆ ಮುಂದೆ
ಬರಬೇಕು. ಅದಕ್ಕಾಗಿ ಲಭ್ಯ ಇರುವ ಅವಕಾಶ ಬಳಸಿಕೊಳ್ಳಬೇಕು. ಇದೊಂದು ಜೀವನದ ಅವಿಸ್ಮರಣೀಯ ಸಂದರ್ಭ.
-ಸು| ಸುದಾನಂದ

ಪತಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವುದು ನಮಗೆಲ್ಲಾ ಹೆಮ್ಮೆ ಮತ್ತು ಸ್ಫೂರ್ತಿ. ಕುಟುಂಬದಿಂದ ದೂರ ಇರಬೇಕಾದ ಸನ್ನಿವೇಶ ಇದ್ದರೆ, ದೇಶಕ್ಕಾಗಿ ಅಂತಹ ತ್ಯಾಗ ಮಾಡುತ್ತಿರುವ ಅವರಿಗೆ ನಾವೆಲ್ಲ ಬೆಂಬಲವಾಗಿ ನಿಲ್ಲುತ್ತೇವೆ.
– ಶಾಂತಾಮಣಿ
(ಸುದಾನಂದ ಅವರ ಪತ್ನಿ)

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next