ಕೋಲಾರ: ಜಿಲ್ಲೆಯಲ್ಲಿ 75 ಕೆರೆಗಳ ಅಭಿವೃದ್ಧಿ ಕಾಮಗಾರಿ ತ್ವರಿತಗೊಳಿಸಿ. ಕೆರೆಗೆ ನೀರು ಸುಗಮವಾಗಿ ಹರಿದು ಬರದಿದ್ದರೆ ಕೆರೆ ಹೇಗೆ ತುಂಬುತ್ತದೆ? ಮುಂದಿನ ಕೆರೆಗಳಿಗೆ ಹೇಗೆ ನೀರು ಹರಿದು ಹೋಗಲು ಸಾಧ್ಯ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದರು.
“ಆಜಾದಿ ಕಾ ಅಮೃತ ಸರೋವರ’ ಯೋಜನೆಯಡಿ ಕೆರೆಗಳ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮಾಡಲು ಜಿಲ್ಲೆಗೆ ಆಗಮಿಸಿದ್ದ ಸಚಿವರು, ಬಂಗಾರಪೇಟೆ ತಾಲೂಕಿನ ಚಿಕ್ಕಅಂಕಂಡಹಳ್ಳಿ ಕೆರೆ, ಘಟ್ಟಕಾಮಧೇನು ಹಳ್ಳಿ ಕೆರೆ, ಕೋಲಾರ ತಾಲೂಕಿನ ಶೆಟ್ಟಿಕೊತ್ತನೂರು ಕೆರೆ ವೀಕ್ಷಿಸಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಸುವಂತೆ ಸೂಚಿಸಿದರು.
ಕೋಲಾರ ಜಿಲ್ಲೆಯಾದ್ಯಂತ ಆಜಾದಿ ಕಾ ಅಮೃತ ಸರೋವರ ಯೋಜನೆಯಡಿ 75 ಕೆರೆಗಳನ್ನು ಆಯ್ಕೆ ಮಾಡಿಕೊಂಡು ಕಾಮಗಾರಿ ಪ್ರಾರಂಭಿಸಲಾಗಿದೆ. ಅನುದಾನ ಬೇಕಾದರೆ ಮತ್ತಷ್ಟು ನೀಡುವೆ, ಕಾಮಗಾರಿಗಳು ಸಮರ್ಪಕವಾಗಿ ಆಗಬೇಕು ಎಂದು ಜಿಪಂ ಸಿಇಒ ಮತ್ತು ಜಿಲ್ಲಾಧಿಕಾರಿ ಮುಂದೆ ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳ ವಿರುದ್ಧ ಕಿಡಿ
ಬಂಗಾರಪೇಟೆ: ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಖುದ್ದು ಪರಿಶೀಲನೆ ಮಾಡಲು ಆಗಮಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೆರೆಗಳನ್ನು ವೀಕ್ಷಿಸಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ತಾಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಪಂನ ಬಾವರಹಳ್ಳಿ ಗ್ರಾಮದಲ್ಲಿರುವ 16 ಎಕರೆ ವಿಸ್ತೀರ್ಣದ ಕೆರೆಯನ್ನು ಒಟ್ಟು 85 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಕೇಂದ್ರ ಅಧಿಕಾರಿಗಳ ತಂಡ ನೀಡಿದ ವರದಿ ಹಿನ್ನೆಲೆಯಲ್ಲಿ ಶುಕ್ರವಾರ ಕೆರೆಯನ್ನು ಖುದ್ದು ವೀಕ್ಷಿಸಲು ಸಚಿವೆ ಆಗಮಿಸಿದ್ದರು. ಕೆರೆ ಸುತ್ತಲೂ ಗಿಡ ನೆಡದಿರುವುದು, ಸ್ವಚ್ಛತೆ ಇಲ್ಲದಿರುವುದು ಹಾಗೂ ಕೆರೆಯ ಸುತ್ತಲೂ ಬೌಂಡರಿ ನಿರ್ಮಿಸದೇ ಕಡೆಗಣಿಸಿರುವುದನ್ನು ನೋಡಿ ಜಿಪಂ ಸಿಇಒ ಉಕೇಶ್‌ಕುಮಾರ್ ವಿರುದ್ಧ ಕಿಡಿಕಾರಿದರು. ಇದನ್ನು ನೋಡಲು ನಾನು ದೆಹಲಿಯಿಂದ ಬರಬೇಕಿತ್ತಾ ಎಂದು ಚಾಟಿ ಬೀಸಿದರು.