Advertisement

ಪ್ರಗತಿ ಹೇಳದ ಕೆಆರ್‌ಐಡಿಎಲ್‌ “ಆಟ’ಬಯಲು

01:36 PM Jan 18, 2022 | Team Udayavani |

ಸಿಂಧನೂರು: ಇಬ್ಬರು ಶಾಸಕರು ಸೇರಿದಂತೆ ಬಹುತೇಕ ಅಧಿಕಾರಿಗಳು ಪಾಲ್ಗೊಂಡ ಸಭೆಗೆ ಏನೂ ಗೊತ್ತಿಲ್ಲದ ಸಿಬ್ಬಂದಿಯನ್ನು ಕಳುಹಿಸುವ ಮೂಲಕ ಕೆಆರ್‌ಐಡಿಎಲ್‌ ತನ್ನ ಕೈಚಳಕ ತೋರಿದೆ.

Advertisement

ಇಲ್ಲಿನ ತಾಪಂನಲ್ಲಿ ಮಾಜಿ ಸಚಿವ ಹಾಗೂ ಶಾಸಕ ವೆಂಕಟರಾವ್‌ ನಾಡಗೌಡ, ನೂತನ ಎಂಎಲ್ಸಿ ಶರಣಗೌಡ ಬಯ್ನಾಪುರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಂತಹ ವಿಪರ್ಯಾಸ ಬಯಲಾಗಿದೆ.

10ರಿಂದ 15 ಲಕ್ಷ ರೂ. ಅಂದಾಜು ವೆಚ್ಚದ ಕೆಲಸ ಎಲ್ಲಿ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆಯೂ ಜೆಇ ಸಂತೋಷ ಬಳಿ ಉತ್ತರ ಇರಲಿಲ್ಲ. ಜನಪ್ರತಿನಿಧಿಗಳು ಬೈದಿದ್ದೇ ಬೈದಿದ್ದು. ಆದರೆ, ಉತ್ತರ ಮಾತ್ರ ಗೊತ್ತಿಲ್ಲ ಸಾರ್‌ ಎಂದಾಗ ಇಡೀ ಸಭೆ ಮೂಕ ಸ್ತಬ್ಧವಾಯಿತು.

ಪ್ರಗತಿ ಪರಿಶೀಲನೆ ಸಭೆಗೆ ಎಲ್ಲ ಇಲಾಖೆಯನ್ನು ಆಹ್ವಾನಿಸಬೇಕಾದ ತಾಲೂಕು ಪಂಚಾಯತ್‌ನವರಿಗೆ ಕೆಆರ್‌ಐಡಿಎಲ್‌ (ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ) ನವರು ನಯಾಪೈಸೆಯೂ ಕಿಮ್ಮತ್ತು ಕೊಡುವುದಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ. ಒಮ್ಮೆಯೂ ಎಇಇ ಇಲ್ಲವೇ ಪ್ರಮುಖ ಅಧಿಕಾರಿಗಳು ಬಂದು ಕಾಮಗಾರಿ ಸ್ಥಿತಿಗತಿ ವಿವರಿಸಿದ ನಿದರ್ಶನವಿಲ್ಲ. ಅದಕ್ಕೆ ತಾಜಾ ನಿದರ್ಶನವೆಂಬಂತೆ ಬರೋಬ್ಬರಿ 25.75 ಕೋಟಿ ರೂ. ವೆಚ್ಚದ ಕೆಲಸಗಳಿಗೆ ಸಂಬಂಧಿಸಿ ವಿವರಣೆ ನೀಡಬೇಕಿತ್ತು. ಆದರೆ, ಹೊಸದಾಗಿ ಜೆಇ, 2018-19ನೇ ಸಾಲಿಗೆ ಸಂಬಂಧಿಸಿ ತಲಾ 2 ಲಕ್ಷ ರೂ. ವೆಚ್ಚದ ವಾರ್ಡ್‌ ನಂ.7, ಮಲ್ಕಾಪುರದಲ್ಲಿನ ಶಾಲೆ ಕೊಠಡಿ ಬದಲಾವಣೆ ವಿಷಯಕ್ಕೂ ಉತ್ತರ ಕೊಡಲಿಲ್ಲ. ಶಾಸಕರ ಸ್ವಗ್ರಾಮ ಜವಳಗೇರಾದಲ್ಲಿ ಕಿಟಕಿ, ಬಾಗಿಲು ಇಲ್ಲದ ಕಾಮಗಾರಿ ಕುರಿತು ಮಾಹಿತಿ ಒದಗಿಸಲಿಲ್ಲ. ಇನ್ನುಳಿದಂತೆ ನೂರಾರು ಕೋಟಿ ರೂ.ಗಳ ಕಾಮಗಾರಿ ವಿವರ ಚರ್ಚಿಸದೇ ಸಭೆ ಮುಗಿಸಲಾಯಿತು.

ಕೆಆರ್‌ಐಡಿಎಲ್‌ನ ಆಟ ಬಯಲು

Advertisement

ವಿವಿಧ ಇಲಾಖೆಯವರು ಒಂದೇ ಒಂದು ಪ್ರತಿಯ ಮಾಹಿತಿ ಕೊಟ್ಟು ಆಟ ಆಡಿಸಿದರೆ, ಕೆಆರ್‌ಐಡಿಎಲ್‌ನವರು ನೂರಾರು ಕಾಮಗಾರಿಗಳ ವಿವರ ಕೊಟ್ಟು ಒಂದಕ್ಕೂ ಉತ್ತರಿಸದಾದರು. 2018-19ನೇ ಆರ್ಥಿಕ ವರ್ಷ ಸೇರಿದಂತೆ ಯಾವುದೇ ನೂರಾರು ಕೋಟಿ ರೂ.ಗಳ ವೆಚ್ಚದ ಕಾಮಗಾರಿ ವಿವರವನ್ನು ಗೌಪತ್ಯವಾಗಿಟ್ಟು, ಮೂರ್‍ನಾಲ್ಕು ವರ್ಷಗಳ ಬಳಿಕ ಅದರ ವಿವರವನ್ನು ಸಭೆಗೆ ಕಳುಹಿಸುವ ಹಿರಿಯ ಅಧಿಕಾರಿಗಳ ಚಾಳಿ ಮುಂದುವರಿಯಿತು. 25 ಕೋಟಿ ರೂ.ಗೂ ಹೆಚ್ಚು ಮೊತ್ತದ ಕೆಲಸ ಕೊಟ್ಟಿದ್ದರೆ, 18 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಳಿಸಿದ ಬಗ್ಗೆಯೂ ವಿವರ ನೀಡಿರಲಿಲ್ಲ. ಆದರೆ, ಒಟ್ಟುಗೂಡಿಸಿ ನೋಡಿದಾಗ ಯಾವುದರ ಸುಳಿವು ನೀಡದೇ ದಿಕ್ಕು ತಪ್ಪಿಸುವ ಪ್ರಯತ್ನಕ್ಕೆ ಕೈ ಹಾಕಿದ್ದು, ರಟ್ಟಾಯಿತು. ಏನೋ ಗೊತ್ತಿಲ್ಲದ ಸಿಬ್ಬಂದಿ ಛೀಮಾರಿಗೆ ಗುರಿಯಾದರೆ, ಹಿರಿಯ ಅಧಿಕಾರಿಗಳು ಪೋನಿನಲ್ಲೇ ವಿವರ ಕೇಳುತ್ತಿರುವ ಸಂಗತಿಯೂ ಹೊರಬಿತ್ತು.

ಮೂರು ಕಾಮಗಾರಿ ಬದಲಾವಣೆಯಾಗಿದ್ದರೆ, ಎಲ್ಲಿಗೆ ಹೋಗಿವೆ. ನಾನೇ ಮಾಹಿತಿ ಕೊಡಬೇಕಾ? ಕೆಆರ್‌ಐಡಿಎಲ್‌ನಿಂದ ಬಂದಿರುವ ನಿನಗೆ ಏನು ಗೊತ್ತಿಲ್ಲ ಅಂದ್ರೆ, ಯಾಕ್‌ ಬರ್ತೀಯಾ? ನಮ್ಮ ಪ್ರಾಣ ತಿನ್ನಲಿಕ್ಕೆ ಬರ್ತೀರಿ ಅಷ್ಟೇ. -ವೆಂಕಟರಾವ್‌ ನಾಡಗೌಡ, ಶಾಸಕ, ಸಿಂಧನೂರು

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next