Advertisement
ಈ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಹಿನ್ನೆಲೆಯಲ್ಲಿ ಈ ಮಸೂದೆ ಮಂಡಿಸಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಭಟ್ಕಳ, ಹಳಿಯಾಳ, ಹೊನ್ನಾವರ, ಸೂಪ, ಕಾರವಾರ, ಜೋಯಿಡಾ, ಕುಮಟಾ, ಮುಂಡಗೋಡ, ಸಿದ್ದಾಪುರ, ಶಿರಸಿ, ಯಲ್ಲಾಪುರ, ದಾಂಡೇಲಿ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಸುಳ್ಯ, ಮೂಡುಬಿದರೆ, ಕಡಬ, ಮೂಲ್ಕಿ, ಉಳ್ಳಾಲ, ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳ, ಕುಂದಾಪುರ, ಬ್ರಹ್ಮಾವರ, ಬೈಂದೂರು, ಕಾಪು, ಹೆಬ್ರಿ ತಾಲೂಕುಗಳನ್ನು ಈ ಮಂಡಳಿಯ ವ್ಯಾಪ್ತಿಗೆ ಸೇರಿಸಲಾಗಿದೆ.
ಕರಾವಳಿ ಅಭಿವೃದ್ಧಿ ಮಂಡಳಿಯ ಕೇಂದ್ರ ಕಚೇರಿಯನ್ನು ಮಂಗಳೂರಿನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಸಂಸದರು, ಶಾಸಕರು, ಜಿಲ್ಲೆ ಹಾಗೂ ತಾಲೂಕಿನಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು, ಮೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಪರಿಶಿಷ್ಟ ಜಾತಿ ಹಾಗೂ ಪಂಗಡದ ತಲಾ ಇಬ್ಬರನ್ನು ಒಳಗೊಂಡಂತೆ ಹತ್ತು ಮಂದಿ ನಾಮನಿರ್ದೇಶಿತ ಪ್ರತಿನಿಧಿಗಳು, ಮೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಮಂಡಳಿಯ ಸದಸ್ಯರಾಗಿರುತ್ತಾರೆ. ಸದಸ್ಯರ ಪೈಕಿ ಒಬ್ಬರನ್ನು ರಾಜ್ಯ ಸರಕಾರ ಅಧ್ಯಕ್ಷರನ್ನಾಗಿ ನೇಮಕ ಮಾಡಲಿದ್ದು, ವಿಭಾಗೀಯ ಆಯುಕ್ತರ ದರ್ಜೆಯ ಅಧಿಕಾರಿಯನ್ನು ಮಂಡಳಿಯ ಕಾರ್ಯದರ್ಶಿಯಾಗಿ ನಿಯೋಜನೆ ಮಾಡಲಾಗುತ್ತದೆ. ಸದಸ್ಯರು ಮತ್ತು ಅಧ್ಯಕ್ಷರು ಮೂರು ವರ್ಷಗಳ ಸೇವಾವಧಿ ಹೊಂದಿರುತ್ತಾರೆ.