Advertisement
ಕೋಟೇಶ್ವರ ಬೈಪಾಸ್‌ನಲ್ಲಿ ವಾಹನ ಗಳು ಪೇಟೆಗೆ ಸಾಗಲು ಅವೈಜ್ಞಾನಿಕ ರೀತಿಯಲ್ಲಿ “ಯು’ ತಿರುವನ್ನು ನೀಡಿರುವುದು ಉಡುಪಿ ಯಿಂದ ಕುಂದಾಪುರ ಕಡೆಗೆ ಅಮಿತ ವೇಗದಿಂದ ಸಾಗುವ ವಾಹನಗಳಿಗೆ ತೊಡಕನ್ನು ಉಂಟುಮಾಡುತ್ತಿದ್ದು ಚಾಲಕನ ಏಕಾಗ್ರತೆ ತಪ್ಪಿದಲ್ಲಿ ಭಾರೀ ಅಪಘಾತಕ್ಕೆ ಎಡೆ ಮಾಡುವ ಪರಿಸ್ಥಿತಿ ಇದೆ. ನವಯುವ ಕಂಪೆನಿಯವರು ಮೇಲಧಿಕಾರಿಗಳ ಆದೇಶದಂತೆ ಆ ಭಾಗದ “ಯು’ ತಿರುವನ್ನು ಮುಚ್ಚಿದ್ದರೂ ಸ್ಥಳೀಯರ ಬೇಡಿಕೆಯಂತೆ ಅದನ್ನು ತೆರೆದಿಟ್ಟಿರುವುದು ಅನೇಕಾನೇಕ ಗಂಡಾಂತರಗಳಿಗೆ ಕಾರಣವಾಗುತ್ತಿದೆ.
ಕುಂದಾಪುರದಿಂದ ಕೋಟೇಶ್ವರದ ತನಕ ಇರುವ ಸರ್ವೀಸ್ ರಸ್ತೆಯ ನಿರ್ಮಾಣ ಕಾಮಗಾರಿ ಅರ್ಧಂಬರ್ಧ ವಾಗಿದ್ದು ಅದು ಪೂರ್ಣಗೊಳ್ಳದಿರುವುದು ಸ್ಥಳೀಯ ಗ್ರಾಮಗಳಿಗೆ ತೆರಳುವವ ರಿಗೆ ತೊಂದರೆಯನ್ನುಂಟುಮಾಡಿದ್ದು ಮುಖ್ಯ ರಸ್ತೆಯ “ಯು’ ತಿರುವನ್ನು ಅವಲಂಭಿಸಬೇಕಾಗಿದೆ. ನವಯುವ ಕಂಪೆನಿಯ ಆಮೆನಡಿಗೆಯ ಕಾಮ ಗಾರಿಯು ಈ ಭಾಗದ ಜನರಲ್ಲಿ ಅಸಮಾಧಾನವನ್ನು ಉಂಟುಮಾಡಿದ್ದು 6 ವರ್ಷ ಕಳೆದರೂ ಕುಂದಾಪುರ – ಸುರತ್ಕಲ್ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದಿರುವುದು ನಿರಾಶೆಗೆ ಕಾರಣವಾಗಿದೆ. ಉಡುಪಿಯಿಂದ ಕೋಟೇಶ್ವರ ಪೇಟೆಗೆ ಸಾಗುವ ಹಾದಿಯು ಸುಗಮವಾಗಿದ್ದರೂ ಕೋಟೇಶ್ವರ ಪೇಟೆ ಯಿಂದ ಉಡುಪಿ ಕಡೆಗೆ ಘನ ವಾಹನ ಸಾಗುವುದು ಕಷ್ಟಸಾಧ್ಯವಾಗಿದ್ದು ಅಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿ ನಡೆದರೂ ಕೂಡ ಯಾವ ಭಾಗದಿಂದ “ಯು’ ತಿರುವಿನಿಂದ ಸಾಗಿ ವಾಹನಗಳು ಉಡುಪಿ ಕಡೆಗೆ ತೆರಳಬೇಕೆನ್ನುವುದು ಪ್ರಶ್ನಾರ್ಥಕವಾಗಿಯೇ ಉಳಿಯುವುದು. ಈ ಹಿಂದೆ ಬೀಜಾಡಿ ಗ್ರಾಮಸ್ಥರ ಅಹವಾಲಿಗೆ ಸ್ಪಂದಿಸಿದ ಗುತ್ತಿಗೆದಾರರು ಬೀಜಾಡಿ ಕೆನರಾ ಬ್ಯಾಂಕ್ ಸನಿಹದಲ್ಲಿ ಸರ್ವಿಸ್ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಅಲ್ಲಿ ಸರ್ವಿಸ್ ರಸ್ತೆ ನಿರ್ಮಿಸಿದರೆ ಕೋಟೇಶ್ವರದಿಂದ ಉಡುಪಿಗೆ ತೆರಳುವ ಬಸ್ ಹಾಗೂ ಘನ ವಾಹನಗಳಲ್ಲದೇ ಉಡುಪಿಯಿಂದ ಕೋಟೇಶ್ವರ ಕಡೆಗೆ ಬರುವ ಖಾಸಗಿ ಬಸ್ ಹಾಗೂ ಇತರ ವಾಹನಗಳ ಸಂಚಾರದ ಪರಿಧಿಯ ನಡುವೆ ಅಂತರವಿಲ್ಲದೇ ವಾಹನಗಳು ಅಪಘಾತಕ್ಕೆ ಸಿಲುಕುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹಾಗಾಗಿ ಕೋಟೇಶ್ವರ ಪೇಟೆಯಿಂದ ಉಡುಪಿ ಕಡೆಗೆ ಸಾಗುವ ವಾಹನಗಳು ಪೇಟೆಯಲ್ಲಿರುವ ಎಸ್.ಬಿ.ಐ. ಬ್ಯಾಂಕ್ ಸನಿಹದ ತಿರುವಿನಿಂದ ಬೈಪಾಸ್ ಕಡೆ ಸಾಗಿ ಮುಂದಿನ ಸರ್ವೀಸ್ ರಸ್ತೆಯ ಮೂಲಕ ಉಡುಪಿಗೆ ತೆರಳುವುದು ಸೂಕ್ತ. ಅದರಂತೆ ಹಿಂದಿನಂತೆ ಉಡುಪಿಯಿಂದ ಕೋಟೇಶ್ವರ ಪೇಟೆಗೆ ಸಾಗುವ ವಾಹನಗಳ ಏಕಮುಖೀ ವಾಹನ ಸಂಚಾರ ನಿಯಮವನ್ನು ಅನುಸರಿಸುವುದು ಸುರಕ್ಷತೆಯ ಉದ್ದೇಶದಿಂದ ಪಾಲಿಸಿದಲ್ಲಿ ಸುಗಮ ವಾಹನ ಸಂಚಾರಕ್ಕೆ ಎಡೆ ಮಾಡಿದಂತಾಗುವುದು ಎಂಬುದು ಪೊಲೀಸ್ ಅಧಿಕಾರಿಗಳ ಅಭಿಮತ.