Advertisement

ಬುಲೆಟ್‌ ಕದ್ದಿದ್ದ ಇಬ್ಬರು ಎಂಜಿನಿಯರ್‌ಗಳು: ಬಂಧನ

12:04 PM Aug 06, 2023 | Team Udayavani |

ಬೆಂಗಳೂರು: ಬುಲೆಟ್‌ಗಳನ್ನು ಕಳವು ಮಾಡು ತ್ತಿದ್ದ ಇಬ್ಬರು ಬಿಟೆಕ್‌ ಎಂಜಿನಿಯರ್‌ಗಳನ್ನು ಹನು ಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಆಂಧ್ರಪ್ರದೇಶದ ನೆಲ್ಲೂರು ಮೂಲದ ಹೇಮಾದ್ರಿ (23) ಮತ್ತು ಪವನ್‌(23) ಬಂಧಿತರು. ಆರೋಪಿಗಳಿಂದ 3 ಲಕ್ಷ ರೂ. ಮೌಲ್ಯದ 2 ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇತ್ತೀಚೆಗೆ ಹನುಮಂತನಗರ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಮನೆ ಎದುರು ನಿಲುಗಡೆ ಮಾಡಿದ್ದ 2 ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ಗಳನ್ನು ಆರೋಪಿಗಳು ಕದ್ದಿದ್ದರು.

ಆಂಧ್ರಪ್ರದೇಶದಲ್ಲಿ ಬಿಟೆಕ್‌ ಪದವಿ ಪಡೆದಿದ್ದ ಆರೋಪಿಗಳು ಕೆಲಸಕ್ಕಾಗಿ ಹುಡುಕಾಡುತ್ತಿದ್ದರು. ಈ ಪೈಕಿ ಆರೋಪಿ ಹೇಮಾದ್ರಿ ಇತ್ತೀಚೆಗೆ ನಗರಕ್ಕೆ ಬಂದು ಉದ್ಯೋಗಕ್ಕಾಗಿ ಹುಡುಕಾಟ ನಡೆಸಿ, ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಕೋರ್ಸ್‌ ಬಗ್ಗೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಕೂಡ ಪಡೆಯುತ್ತಿದ್ದ. ಈ ಬಗ್ಗೆ ತನ್ನ ಸಹಪಾಠಿ ಪವನ್‌ಗೂ ವಿಚಾರ ತಿಳಿಸಿ ನಗರಕ್ಕೆ ಕರೆಸಿಕೊಂಡಿದ್ದಾನೆ. ಬಳಿ ಇಬ್ಬರು ಉದ್ಯೋಗಕ್ಕಾಗಿ ತಿಂಗಳುಗಟ್ಟಲೇ ಅಲೆದಿದ್ದಾರೆ. ಎಲ್ಲಿಯೂ ನೌಕರಿ ಸಿಗದ ಹಿನ್ನೆಲೆಯಲ್ಲಿ ಊರಿಗೆ ವಾಪಸ್‌ ಹೋಗಲು ನಿರ್ಧರಿಸಿದ್ದರು.

ಬುಲೆಟ್‌ ಕಳ್ಳತನ ಮಾಡಿ ಪರಾರಿ: ಊರಿಗೆ ಹೋಗುವ ಮುನ್ನ ನಗರದಲ್ಲಿ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ ಕದಿಯಲು ಸಂಚು ರೂಪಿಸಿದ್ದರು. ಅದರಂತೆ ಹನುಮಂತನಗರ ಹಾಗೂ ಕೆಂಪೇಗೌಡ ನಗರದಲ್ಲಿ ಮನೆ ಎದುರು ನಿಲ್ಲಿಸಿದ್ದ 2 ಬುಲೆಟ್‌ಗಳನ್ನು ಕದ್ದು ಆಂಧ್ರಕ್ಕೆ ಪರಾರಿಯಾಗಿದ್ದರು. ಘಟನಾ ಸ್ಥಳದ ಸಿಸಿ ಕ್ಯಾಮೆರಾ, ಮೊಬೈಲ್‌ಕರೆಗಳ ಆಧಾರದ ಮೇಲೆ ಆಂಧ್ರಪ್ರದೇಶದ ನೆಲ್ಲೂರು ಬಳಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next