Advertisement

ಸುಂಕ ತೆತ್ತರೂ ಪೂರ್ಣಗೊಳ್ಳದ ಹೆದ್ದಾರಿ ಚತುಃಷ್ಪಥ

11:32 AM Dec 13, 2017 | |

ಪಡುಬಿದ್ರಿ: ನವಯುಗ ನಿರ್ಮಾಣ ಕಂಪೆನಿ ಹೊಣೆ ಹೊತ್ತಿರುವ, 2013ರಲ್ಲೇ ಪೂರ್ಣಗೊಳ್ಳಬೇಕಾಗಿದ್ದ ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಭಾಗದ ಚತುಃಷ್ಪಥ ಪರಿವರ್ತನ ಕಾಮಗಾರಿಯು ಇನ್ನಷ್ಟೇ ನಡೆಯಬೇಕಿದೆ.

Advertisement

ತಲಪಾಡಿ, ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌ ಗೇಟ್‌ಗಳಿಂದ ದಿನವಹಿ 25 ಲಕ್ಷ ರೂ.ಗಳಿಗೂ ಅಧಿಕ ಸುಂಕ ಸಂಗ್ರಹಗೊಳ್ಳುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೇ ನವಯುಗ ಕಂಪೆನಿಯ ಆರ್ಥಿಕ ಹಿನ್ನಡೆಯ ಸಬೂಬನ್ನು ಉಡುಪಿ ಜಿಲ್ಲಾಡಳಿತಕ್ಕೆ ನೀಡುತ್ತಿದ್ದಾರೆ. ಎನ್‌ಎಚ್‌ಎಐ ಯೋಜನಾ ನಿರ್ದೇಶಕ ವಿಜಯ್‌ ಸಾಮ್ಸನ್‌ ಕಳೆದ ಜುಲೈ ಮತ್ತು ಬಳಿಕ ಡಿಸೆಂಬರ್‌ ವೇಳೆ ಈ ಭಾಗದ ಕಾಮಗಾರಿ ಪೂರ್ಣಗೊಳ್ಳುವುದಾಗಿ ಮಾಹಿತಿ ನೀಡಿದ್ದರು. ಇದೀಗ ಅವರು ಮಾರ್ಚ್‌ 2018ರ ಗಡುವು ನೀಡಿರುವುದಾಗಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ತಿಳಿಸಿದ್ದಾರೆ.

ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಕೇಂದ್ರ ಸರಕಾರವು ಈ ಹೆದ್ದಾರಿ ಚತುಃಷ್ಪಥ ಪರಿವರ್ತನೆ ಕಾಮಗಾರಿಗಾಗಿ ಸಂತ್ರಸ್ತರಿಗೆ ಪರಿಹಾರ ಧನವನ್ನು ಪಾವತಿಸಿ 6 ವರ್ಷಗಳ ಹಿಂದೆಯೇ ಖರೀದಿಸಿದೆ. ಆದರೆ ಸಂತ್ರಸ್ತರೆನ್ನಿಸಿಕೊಂಡವರು ಸರಕಾರದಿಂದ ಪ್ರತಿಫಲವನ್ನೂ ಪಡೆದುಕೊಂಡಿದ್ದಾರೆ, ಜತೆಗೆ ಈಗಲೂ ತಮ್ಮ ಸುಪರ್ದಿಯಲ್ಲಿರುವ ಸರಕಾರಿ ಸ್ವಾಧೀನಕ್ಕೊಳಪಟ್ಟಿರುವ ಕಟ್ಟಡಗಳ ಬಾಡಿಗೆ ಅಂಗಡಿಗಳಿಂದ ಲಾಭವನ್ನೂ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಇಲಾಖೆ ಮತ್ತು ಜಿಲ್ಲಾಡಳಿತ ಮೌನವಹಿಸಿವೆ ಎಂಬುದಾಗಿ ನಿವೃತ್ತ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಪರಿಹಾರಧನ ವಿತರಣೆ  ಬಿಳಿಯಾನೆ
ತೆಕ್ಕಟ್ಟೆಯ 10, ಬ್ರಹ್ಮಾವರದ 3, ಸಾಸ್ತಾನದ 3, ಪುತ್ತೂರಿನ ಸಣ್ಣ ಹಾಗೂ ದೊಡ್ಡ ಕಟ್ಟಡ ಸಹಿತ 3, ಕಾಪುವಿನ 2, ಚೇಂಪಿಯ 1, ಕೋಟದಲ್ಲಿನ ಟ್ರಸ್ಟ್‌ ಒಂದರ ಸಹಿತ ಸಂತ್ರಸ್ತರಿಗೆ ಕೋಟ್ಯಂತರ ರೂ. ಪರಿಹಾರ ಧನ ಪಾವತಿಯಾಗಿದೆ. ಆ ಬಳಿಕ ಕುಂದಾಪುರ ಸಹಾಯಕ ಕಮಿಶನರ್‌ ಅವರಿಗೆ ಹಸ್ತಾಂತರಗೊಂಡು ಸುಮಾರು 6 ವರ್ಷಗಳೇ ಕಳೆದಿದ್ದರೂ ಎನ್‌ಎಚ್‌ಎಐ, ನವಯುಗ ಕಂಪೆನಿಗಳು ಈ ಕಟ್ಟಡಗಳನ್ನು ಒಡೆಯದೆ, ಉಳಿಸಿಕೊಂಡಿವೆ. ಈ ಭಾಗದಲ್ಲಿ ಯೋಜನೆಯಂತೆ ಕಾಮಗಾರಿಗಳು ನಡೆಯದಿರುವುದು ಇಂದಿಗೂ ವಾಹನದಟ್ಟಣೆಗೆ ಕಾರಣವಾಗಿವೆ. ಮುಖ್ಯವಾಗಿ, ತೆರವಾಗದ ಈ ಕಟ್ಟಡದ ಮಾಲಕರು ಅಥವಾ ಸಂಸ್ಥೆಗಳ ಹುದ್ದೆಗಳಲ್ಲಿರುವವರ ರಾಜಕೀಯ ಪ್ರಭಾವ ಈ ವ್ಯವಹಾರದ ಮೇಲೆ ಪ್ರಭಾವ ಬೀರಿದೆ. ಕೇಂದ್ರದ ಪರಿಹಾರ ಧನವೆಂಬುದು ಬಿಳಿಯಾನೆಯಾಗಿರುವುದಾಗಿ ಈ ಅಧಿಕಾರಿ ಆರೋಪಿಸುತ್ತಾರೆ. 

ಈ ಕುರಿತಾಗಿ ವಿವರಣೆ ನೀಡಿದ ಉಡುಪಿ ಜಿಲ್ಲಾಧಿಕಾರಿ, ತೆಕ್ಕಟ್ಟೆ, ಬ್ರಹ್ಮಾವರಗಳ ಕಟ್ಟಡಗಳ ಮರು ಮೌಲ್ಯಮಾಪನಕ್ಕೆ ಬೇಡಿಕೆಯಿತ್ತು. ಸದ್ಯ ಬೆಳಗಾವಿಯಿಂದ ಮೌಲ್ಯಮಾಪಕರು ಆಗಮಿಸಿ ಅದನ್ನೂ ಮಾಡಿದ್ದಾರೆ. ಉಳಿದಂತೆ ತನಗೆ ಮಾಹಿತಿ ಇಲ್ಲ ಎಂದಿದ್ದಾರೆ. 

Advertisement

ನಡೆದಾಡಲಾಗದ ಸ್ಥಿತಿ
ಹೆದ್ದಾರಿ ಚತುಃಷ್ಪಥ ಕಾಮಗಾರಿ ವಿಳಂಬ ದಿಂದಾಗಿ ಪಡುಬಿದ್ರಿಯಲ್ಲಂತೂ ಸದ್ಯ ನಡೆಯಲೂ ಆಗದ ಸ್ಥಿತಿ ನಿರ್ಮಾಣಗೊಂಡಿದೆ. ಈಗಾಗಲೇ ಇಲ್ಲಿ ಸ್ವಾಧೀನತೆಗೊಳಪಟ್ಟಿರುವ ಬಹುತೇಕ ಕಟ್ಟಡಗಳನ್ನು ಕೆಡವಲಾಗಿದೆ. ಕೆಡವಿದ ಸ್ಥಳದಲ್ಲಿ ವಾಹನಗಳಂತಿರಲಿ, ಮನಷ್ಯರೂ ನಡೆದಾಡುವಂತಿಲ್ಲ. ಕಾಲಿಗೆ ಕಬ್ಬಿಣದ ತುಂಡುಗಳು, ಸರಳುಗಳು ತಾಗುವಂತಿದೆ. ನವಯುಗ ನಿರ್ಮಾಣ ಕಂಪೆನಿಯು ಈ ಬಗ್ಗೆ ಗಮನ ಹರಿಸಬೇಕಿದೆ. ಸ್ಥಳವನ್ನು ಸಮತಟ್ಟು ಮಾಡಿಕೊಟ್ಟಲ್ಲಿ ಸ್ಥಳೀಯ ವಾಹನಗಳಾದರೂ ಸಂಚರಿಸಲು ಅನುಕೂಲವೆನಿಸಲಿದೆ. ಅತ್ತ ಹೊಸ ಹೆದ್ದಾರಿಯೂ ಇಲ್ಲದೆ, ಸರ್ವೀಸ್‌ ರಸ್ತೆಗಳೂ ಇಲ್ಲದೆ ಪಡುಬಿದ್ರಿಯ ಜನತೆಗೆ ನಿತ್ಯ ವಾಹನದಟ್ಟಣೆ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. 

ಡಿ. 7ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಕುರಿತಾಗಿ ಪ್ರಸ್ತಾಪಿಸಲಾಗಿದ್ದು, ಇದನ್ನು ಗುತ್ತಿಗೆದಾರ ನವಯುಗ ನಿರ್ಮಾಣ ಕಂಪೆನಿಯು ತ್ವರಿತವಾಗಿ ಸಮತಟ್ಟು ಮಾಡಿಕೊಡುವ ಭರವಸೆಯಿತ್ತಿರುವುದಾಗಿ ಜಿಲ್ಲಾಧಿಕಾರಿ ಪ್ರಿಯಾಂಕಾ ಫ್ರಾನ್ಸಿಸ್‌ ಮೇರಿ ತಿಳಿಸಿದ್ದಾರೆ. ಬೆರಳೆಣಿಕೆಯ ಮಂದಿ ಕಾರ್ಮಿಕರು ಎರ್ಮಾಳು ಸೇತುವೆ ನಿರ್ಮಾಣ ಕಾರ್ಯದಲ್ಲಿ ನಿರತರಾಗಿರುವುದು ಬಿಟ್ಟರೆ ಮಳೆಗಾಲ ಕಳೆದ ಬಳಿಕವೂ ಹೆದ್ದಾರಿ ಕಾಮಗಾರಿ ಪಡುಬಿದ್ರಿಯ ಭಾಗದಲ್ಲಿ ವೇಗ ಪಡೆದುಕೊಂಡಿಲ್ಲ.

ನವಯುಗ ಕಂಪೆನಿಗೆ ಕೇಂದ್ರದ 11 ಕೋಟಿ ರೂ. ಬಿಡುಗಡೆ ಈಗಾಗಲೇ ರಾ.ಹೆ.ಅ. ಪ್ರಾಧಿಕಾರದಿಂದ 11 ಕೋಟಿ ರೂ. ನವಯುಗ
ನಿರ್ಮಾಣ ಕಂಪೆನಿಗೆ ಬಿಡುಗಡೆಗೊಂಡಿದ್ದು, ಮುಂದಿನ ಮಾರ್ಚ್‌ ಅಂತ್ಯದೊಳಗಾಗಿ ಪಡುಬಿದ್ರಿ ಭಾಗದ ಚತುಃಷ್ಪಥ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದೆಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ವಿಜ¿å ಸ್ಯಾಮ್ಸನ್‌ ತಿಳಿಸಿರುವುದಾಗಿ ಉಡುಪಿ ಜಿಲ್ಲಾಧಿಕಾರಿ “ಉದಯವಾಣಿ’ಗೆ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next