Advertisement

ಎಷ್ಟೇ ಅಪಪ್ರಚಾರ ಮಾಡಿದರೂ ಸತ್ಯಕ್ಕೇ ಜಯ

04:00 PM May 29, 2022 | Niyatha Bhat |

ಶಿವಮೊಗ್ಗ: ವಿರೋಧ ಪಕ್ಷಗಳು ಮತ್ತು ದೇಶದ್ರೋಹಿ ಶಕ್ತಿಗಳು ಮೋದಿ ಸರ್ಕಾರದ ವಿರುದ್ಧ ಎಷ್ಟೇ ಅಪಪ್ರಚಾರ ಮಾಡಿದರೂ ಸಹ ಕೊನೆಗೂ ಸತ್ಯಕ್ಕೆ ಜಯ ಕಟ್ಟಿಟ್ಟ ಬುತ್ತಿ ಎಂದು ಬಿಜೆಪಿ ವಿಭಾಗ ಪ್ರಭಾರಿ ಗಿರೀಶ್‌ ಪಟೇಲ್‌ ಹೇಳಿದರು.

Advertisement

ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಯಾವಾಗಲೂ ಒಳ್ಳೆಯ ಶಕ್ತಿ ವಿರುದ್ಧ ಕೆಟ್ಟ ಶಕ್ತಿಗೆ ಸೋಲು. ಅಧರ್ಮದ ವಿರುದ್ಧ ಧರ್ಮಕ್ಕೆ ಜಯ ಎಂಬುದು ಸಾಬೀತಾಗಿದೆ. ಪ್ರಧಾನಿ ಮೋದಿ ದೇಶಕ್ಕಷ್ಟೇ ಅಲ್ಲ, ವಿಶ್ವಕ್ಕೇ ನಾಯಕರಾಗಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳ ನಾಯಕರು ಕೂಡ ಮೋದಿ ಅವರನ್ನು ಗೌರವಿಸುತ್ತಿದ್ದಾರೆ. ವಿಶ್ವ ನಾಯಕ ಎಂದು ಒಪ್ಪಿಕೊಳ್ಳುತ್ತಿದ್ದಾರೆ. ವಿಶ್ವವನ್ನು ಒಗ್ಗೂಡಿಸುವ ಶಕ್ತಿ ನರೇಂದ್ರ ಮೋದಿ ಅವರಿಗೆ ಮಾತ್ರ ಇದೆ. ದೇಶದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪ್ರಪಂಚಕ್ಕೆ ತೋರಿಸಿಕೊಟ್ಟ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ ಎಂದರು.

ಜನಸಾಮಾನ್ಯರಿಗಾಗಿ ವಿವಿಧ 376 ಯೋಜನೆಗಳನ್ನು ಮೋದಿ ಸರ್ಕಾರ ನೀಡಿದೆ. ಯಾವುದೇ ಹಗರಣಗಳಿಲ್ಲದೇ ವಿಶ್ವಮಟ್ಟದ ಸಾಧನೆಗಳನ್ನು ಮಾಡಿದ್ದಾರೆ. ಮಾತೆಯರು ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡದೇ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.

ವಿರೋಧ ಪಕ್ಷಗಳ ಸರ್ಕಾರವಿರುವಾಗ ದೇಶದ ಇತಿಹಾಸ ತಿರುಚುವ ಮತ್ತು ದುರ್ಬಲತೆ ಸಾರುವ ಪಠ್ಯಗಳನ್ನು ಅಳವಡಿಸಲಾಗುತ್ತಿತ್ತು. ಬಿಜೆಪಿ ಸರ್ಕಾರ ಸ್ವಾಭಿಮಾನ ಭಾರತದ ನೈಜ ಇತಿಹಾಸದ ಪಠ್ಯ ಅಳವಡಿಸಿಕೊಂಡಿದೆ. ಆದರೆ ಹಿಂದೂ ವಿರೋಧಿ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಾ ಗೊಂದಲ ಉಂಟು ಮಾಡುವ ಕೆಲಸವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ವಿದೇಶಗಳಿಗೆ ಹೋದಾಗ ನಮ್ಮ ದೇಶದ ವಿರುದ್ಧ ಮಾತನಾಡಬಾರದೆಂಬ ಕನಿಷ್ಠ ಪರಿಜ್ಞಾನವೂ ಇಲ್ಲದ ರಾಹುಲ್‌ ಗಾಂಧಿ ಅವರ ನಾಯಕ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವಿದ್ಯಾ ಲಕ್ಷ್ಮೀಪತಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಮಹಿಳೆಯರನ್ನು ಗುರುತಿಸಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಥಾನಮಾನಗಳನ್ನು ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಸ್ವಂತ ಉದ್ಯೋಗಕ್ಕೆ ಮಹಿಳೆಯರನ್ನು ಪ್ರೋತ್ಸಾಹಿಸಲಾಗುತ್ತಿದೆ. ಉಜ್ವಲ ಯೋಜನೆಯಡಿ 9 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ ವಿತರಿಸಲಾಗಿದೆ. ಮುದ್ರಾ ಯೋಜನೆ, ಮನೆ ನಿರ್ಮಾಣಕ್ಕೆ ಸಹಕಾರ, ಪೋಷಣ್‌ ಅಭಿಯಾನ, ಮಾತೃ ವಂದನಾ ಹಾಗೂ ರಾಜ್ಯ ಸರ್ಕಾರದಿಂದ ಭಾಗ್ಯಲಕ್ಷ್ಮೀಬಾಂಡ್‌, ಮಹಿಳಾ ಕಿಟ್‌, ಸೈಕಲ್‌ ವಿತರಣೆ ಮುಂತಾದ ಯೋಜನೆಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ ಎಂದರು.

Advertisement

ಮೋದಿ ಅವರ 8 ವರ್ಷದ ಆಡಳಿತ ಯಶಸ್ವಿಯಾಗಿ ಪೂರ್ಣಗೊಂಡಿದ್ದು 1 ರಿಂದ 15 ನೇ ತಾರೀಕಿನವರೆಗೆ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪಾಕಿಸ್ತಾನದಲ್ಲಿ ಪೆಟ್ರೋಲ್‌ ಮತ್ತು ಅಡುಗೆ ಅನಿಲ ದರ ಗಗನಕ್ಕೇರಿದ್ದು, ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿದ್ದು, ಸರ್ಕಾರ ದಿವಾಳಿಯಾಗಿದೆ. ಶ್ರೀಲಂಕಾದ ಕತೆ ಕೂಡ ಭಿನ್ನವಾಗಿಲ್ಲ. ಆದರೂ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಇರುವ ಎರಡನೇ ರಾಷ್ಟ್ರ ಭಾರತ ಮೋದಿ ನಾಯಕತ್ವದಲ್ಲಿ ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಯಾವುದೇ ರೀತಿಯ ತೊಂದರೆ ನೀಡದೇ ಜನಸಾಮಾನ್ಯರಿಗೆ ಎಲ್ಲಾ ನೆರವನ್ನು ನೀಡುತ್ತಾ ಯಶಸ್ವಿ ಸರ್ಕಾರ ಎನಿಸಿಕೊಂಡಿದೆ ಎಂದರು.

ಮುಂದಿನ ಚುನಾವಣೆಗೆ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸುವ ಕಾರ್ಯವನ್ನು ಮಹಿಳಾ ಮೋರ್ಚಾ ಮಾಡಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಶಿಲ್ಪಾ ಸುವರ್ಣಾ, ಉಪಾಧ್ಯಕ್ಷೆ ಪದ್ಮಿನಿ ರಾವ್‌, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವರಾಜ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.