Advertisement

ಮೌಡ್ಯತೆ ಮೆಟ್ಟಿ ನಿಲ್ಲುವುದೇ ನಿಜವಾದ ಧರ್ಮಾಚರಣೆ

06:05 AM Feb 10, 2019 | |

ಹರಿಹರ: ಮೌಡ್ಯತೆ ಮೆಟ್ಟಿ ನಿಂತು ವೈಚಾರಿಕ, ವೈಜ್ಞಾನಿಕ ತಳಹದಿಯಲ್ಲಿ ಬದುಕು ನಡೆಸುವುದೇ ನಿಜವಾದ ಧರ್ಮಾಚರಣೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶರಣರು ಹೇಳಿದರು.

Advertisement

ತಾಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಶನಿವಾರ ಎರಡನೇ ದಿನದ ವಾಲ್ಮೀಕಿ ಜಾತ್ರೆಯಲ್ಲಿ ಧರ್ಮಸಭೆ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಆದರೆ ಕೆಲವರು ಮೌಡ್ಯ, ಕಂದಾಚಾರಗಳನ್ನೇ ಧರ್ಮವೆಂದು ಬಿಂಬಿಸುತ್ತಾರೆ. ಮೂಢನಂಬಿಕೆಗಳು ಧರ್ಮ ವಿರೋಧಿ ಎಂದರು.

ಈ ಪೀಠದ ಬಲವರ್ಧನೆಗಾಗಿ ತಾವು ಮಾಜಿ ಸಚಿವ ದಿ| ತಿಪ್ಪೇಸ್ವಾಮಿ, ಲಿಂ| ಪುಣ್ಯಾನಂದಪುರಿ ಶ್ರೀ ಹಾಗೂ ಇತರರೊಂದಿಗೆ ಸುದೀರ್ಘ‌ ಚರ್ಚೆ ನಡೆಸಿದ್ದಾಗಿ ತಿಳಿಸಿದ ಶರಣರು, ಮಠ ಹಾಗೂ ಸಮಾಜ ಕಟ್ಟುವ ಅರ್ಧ ಕೆಲಸ ಪುಣ್ಯಾನಂದಪುರಿ ಶ್ರೀಗಳಿಂದಾಗಿತ್ತು. ಉಳಿದರ್ಧ ಕೆಲಸ ಪ್ರಸನ್ನಾನಂದ ಶ್ರೀಗಳು ಮಾಡುತ್ತಿದ್ದಾರೆ. 21 ವರ್ಷಗಳಲ್ಲಿ ಶ್ರೀಮಠವು ಸಕ್ರಿಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಸದುರ್ಗ ಕುಂಚಿಟಿಗ ಗುರುಪೀಠದ ಶಾಂತವೀರ ಶ್ರೀಗಳು ಮಾತನಾಡಿ, ದುಶ್ಚಟಗಳಿಗೆ ದಾಸರಾಗಿರುವುದು ಹಾಗೂ ಜಾಗೃತಿ ಕೊರತೆಯೇ ಶೋಷಿತರ ಹಿಂದುಳಿಯುವಿಕೆಗೆ ಕಾರಣ ಹೊರತು ಬೇರಾರಲ್ಲ. ಮುಖಂಡರು ಉದ್ಧಾರವಾದರೆ ಸಾಲದು, ಸಮಾಜದ ಜನಸಾಮಾನ್ಯರು ಉದ್ಧಾರವಾಗುವತ್ತ ಚಿತ್ತ ಹರಿಸಬೇಕೆಂದರು. ಬೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಮಾತನಾಡಿ, ಪ್ರಾಣಿಬಲಿ ನೀಡುವ ಜಾತ್ರೆಗಳು ಶೋಷಿತ ವರ್ಗದವರನ್ನು ಸಾಲಗಾರರನ್ನಾಗಿ ಮಾಡುತ್ತವೆ. ಅಂತಹ ಜಾತ್ರೆಗಳ ಸಾಲ ತೀರಿಸಲು ವರ್ಷಗಟ್ಟಲೆ ದುಡಿಮೆ ಮಾಡಬೇಕು. ವಾಲ್ಮೀಕಿ ಜಾತ್ರೆ ಅಧ್ಯಾತ್ಮ, ಅಕ್ಷರ, ಸಾಮಾಜಿಕ, ಆರ್ಥಿಕ ಕ್ರಾಂತಿಗೆ ದಾರಿ ಮಾಡಿಕೊಡುತ್ತದೆ ಎಂದರು.

ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಮಾತನಾಡಿ, ಬ್ರಿಟೀಷರಿಗೆ ಮೈನಡುಕ ಉಂಟು ಮಾಡಿದ್ದ ಸಿಂಧೂರ ಲಕ್ಷ್ಮಣನಂತೆ ಈ ಸಮಾಜದವರು ಹೋರಾಟಗಾರರಾಗಬೇಕು. ಆ ಮೂಲಕ ವಾಲ್ಮೀಕಿ ಸಮಾಜದವರು ಮುಖ್ಯವಾಹಿನಿಗೆ ಬರಬೇಕು ಎಂದರು.

Advertisement

ಜೇವರ್ಗಿ ಸಿದ್ಧ ಬಸವ ಕಬೀರ ಶ್ರೀಗಳು ಮಾತನಾಡಿ, ಜಗತ್ತಿನಲ್ಲಿ ಯಾರಿಂದಲೂ ಏನನ್ನೂ ಬೇಡದ ಬೇಡ ಸಮಾಜದವರು ಶ್ರೀಗಳ ಮಾರ್ಗದರ್ಶನದಲ್ಲಿ ಸಂಘಟಿತರಾಗುತ್ತಿರುವುದು ಸಂತಸದ ವಿಷಯ. ಈ ಹಿಂದೆ ಪಾಳೇಗಾರರು ಹಲವು ಮಠ, ಮಾನ್ಯಗಳ ಅಭಿವೃದ್ಧಿಗೆ ಬೆನ್ನುಲುಬಾಗಿ ನಿಂತಿದ್ದರು ಎಂದು ಸ್ಮರಿಸಿದರು.

ಕಾಗಿನೆಲೆ ಕನಕಪೀಠದ ನಿರಂಜನಾನಂದಪುರಿ ಶ್ರೀ, ಬೆಂಗಳೂರಿನ ಚಂದ್ರಶೇಖರ ಶ್ರೀ, ಮಳವಳ್ಳಿ ಬಸವಾನಂದ ಶ್ರೀಗಳು ಹಾಗೂ ನಾಡಿನ ವಿವಿಧ ಮಠಾಧಿಧೀಶರು ಆಶೀರ್ವಚನ ನೀಡಿದರು. ಮಠಾಧೀಶರನ್ನು ಪ್ರಸನ್ನಾನಂದ ಶ್ರೀಗಳು ಹಾಗೂ ಧರ್ಮದರ್ಶಿಗಳು ಸತ್ಕರಿಸಿದರು. ಜಾತ್ರಾ ಸಮಿತಿ ಅಧ್ಯಕ್ಷ ಸತೀಶ್‌ ಜಾರಕಿಹೊಳಿ, ಶಾಸಕರಾದ ಶ್ರೀರಾಮುಲು, ಡಾ| ಶಾಮನೂರು ಶಿವಶಂಕರಪ್ಪ, ಎಸ್‌.ರಾಮಪ್ಪ, ಎಸ್‌.ವಿ. ರಾಮಚಂದ್ರಪ್ಪ, ರೇಣುಕಾಚಾರ್ಯ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next