“ಟಗರು’ ಚಿತ್ರದ ಡಾಲಿ ಪಾತ್ರದ ಮೂಲಕ ಖಳನಟನಾಗಿ ಬಿಝಿಯಾಗುತ್ತಿರುವ ಧನಂಜಯ್ ಕೈ ತುಂಬಾ ಸಿನಿಮಾಗಳಿವೆ. ಸದ್ಯ ಅವರು ನಟಿಸಿರುವ “ಯಜಮಾನ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಇಲ್ಲಿ ಮಿಠಾಯಿ ಸೂರಿ ಎಂಬ ಪಾತ್ರ ಮಾಡಿದ್ದಾರೆ. ಒಬ್ಬ ಹೀರೋ ಆಗಿದ್ದ ನಟ ಸತತವಾಗಿ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡರೆ ಇಮೇಜ್ ಬದಲಾಗಲ್ವಾ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಪ್ರಶ್ನೆ ಧನಂಜಯ್ ಅವರಿಗೂ ಎದುರಾಗಿದೆ.
ಅದಕ್ಕೆ ಧನಂಜಯ್ ಉತ್ತರಿಸಿದ್ದಾರೆ. “ನಿಜವಾದ ಕಲಾವಿದ ಇಮೇಜ್‌ಗೆ ಹೆದರಲ್ಲ. ತನ್ನದೇ ಇಮೇಜ್‌ನ ಒಡೆದು, ಕಟ್ಟುತ್ತಿರುತ್ತಾನೆ. ಇಷ್ಟು ವರ್ಷದ ಸಿನಿಮಾ ಜರ್ನಿಯಲ್ಲಿ ತುಂಬಾ ಪಾತ್ರಗಳನ್ನು ಪ್ರಯತ್ನ ಮಾಡಿದ್ದೀನಿ. ಅಲ್ಲಮ ಪ್ರಭುವಾಗಿ, ಪ್ರೇಮಿಯಾಗಿ, ದೆವ್ವವಾಗಿ … ಹೀಗೆ ಎಲ್ಲಾ ತರಹದ ಪಾತ್ರಗಳಿಗೂ ಜೀವ ತುಂಬಿದ್ದೇನೆ. ಆದರೆ, ಯಾವುದೂ ಅಷ್ಟಾಗಿ ತಟ್ಟಿಲ್ಲ. ಯಾವುದೂ ಜನರಿಗೆ ತಟ್ಟುತ್ತೋ ಅದನ್ನು ಮಾಡುವ ಎಂದು ಹೊರಟಿದ್ದೇನೆ.
“ಡಾಲಿ’ ಪಾತ್ರ ಮಾಡಿದೆ. ಜನ ಇಷ್ಟಪಟ್ಟರು. ಧನಂಜಯ್ ಎಂದು ಕರೆಯುವ ಬದಲು ಡಾಲಿ ಎಂದೇ ಕರೆಯಲಾರಂಭಿಸಿದ್ದಾರೆ’ ಎಂದು ತಮ್ಮ ಆಯ್ಕೆಯ ಬಗ್ಗೆ ಹೇಳಿಕೊಳ್ಳುತ್ತಾರೆ. “ಟಗರು’ ಚಿತ್ರದ ಡಾಲಿ ಪಾತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅದರಲ್ಲೂ ಮಾಸ್ ಪ್ರಿಯರು ತುಂಬಾನೇ ಇಷ್ಟಪಟ್ಟರು. ಇದರ ಬೆನ್ನಲ್ಲೇ ಸುದ್ದಿಯೊಂದು ಹರಿದಾಡಿತ್ತು. ಅದೇನೆಂದರೆ ಡಾಲಿ ಪಾತ್ರವನ್ನು ಸ್ಫೂರ್ತಿಯಾಗಿ ತಗೊಂಡು ಒಬ್ಬಾತ ಕೊಲೆ ಮಾಡಿದ್ದ ಎಂದು.
ಇದು ಧನಂಜಯ್‌ಗೂ ಬೇಸರ ತಂದಿದೆ. ” ಇದಕ್ಕೆ ನಾನು ಜವಾಬ್ದಾರಿ ತೆಗೆದುಕೊಳ್ಳಲಾಗುವುದಿಲ್ಲ. ನಾನು ನಟನಾಗಬೇಕೆಂದಾಗ ಒಂದಷ್ಟು ಮಂದಿ ನಟರನ್ನು ಪ್ರೇರಣೆಯಾಗಿ ತೆಗೆದುಕೊಳ್ಳುತ್ತೇನೆ. ಅದು ಕೇವಲ ಪ್ರೇರಣೆಯಷ್ಟೇ. ನನ್ನೊಳಗೆ ನಟನಾಗಬೇಕೆಂಬ ಛಲ ಇದ್ದಾಗ ಯಾವ ಪ್ರೇರಣೆ ಇಲ್ಲದಿದ್ದರೂ ನಟನಾಗಿಯೇ ಆಗುತ್ತೇನೆ. ಇದು ಅಷ್ಟೇ ಕೊಲೆ ಮಾಡಿರುವ ವ್ಯಕ್ತಿಯೊಳಗೆ ರೌಡಿಸಂ ಅಂಶ ಅಡಗಿರುತ್ತದೆ.
ಅದಕ್ಕೆ ಯಾವುದೋ ಒಂದು ನೆಪವಾಗಿರುತ್ತದೆಯಷ್ಟೇ. ಅದಕ್ಕೆಲ್ಲಾ ನಾನು ಜವಾಬ್ದಾರಿ ತೆಗೆದುಕೊಳ್ಳಲಾಗುವುದಿಲ್ಲ. ನನ್ನನ್ನು ನೀವು ಯಾವ ಪಾತ್ರಕ್ಕೆ ಇಟ್ಟರೂ ಅದೇ ಇಂಫ್ಯಾಕ್ಟ್ ಇರುತ್ತೆ. ಮಾಯೆಯನ್ನು ಗೆದ್ದ ಅಲ್ಲಮನ ಪಾತ್ರವನ್ನೂ ಮಾಡಿದ್ದೇನೆ, ಡಾಲಿಯಾಗಿ ನಟಿಸಿದ್ದೇನೆ. ಜನ ಯಾವುದನ್ನು ತಗೋತ್ತಾರೆ ಅನ್ನೋದು ನನಗೆ ಗೊತ್ತಿಲ್ಲ. ಅದು ಅವರ ಮನಸ್ಥಿತಿಗೆ ಬಿಟ್ಟಿದ್ದು’ ಎನ್ನುವುದು ಧನಂಜಯ್ ಮಾತು.