ಬೆಂಗಳೂರು: ಒಂದು ಕೊಳವೆಬಾವಿ ಕೊರೆಯಲು ತಗಲುವ ಸರಾಸರಿ ವೆಚ್ಚ ಎರಡು ಲಕ್ಷ ರೂ. ಇದ್ದರೆ ಅದಕ್ಕಾಗಿ ನಬಾರ್ಡ್‌ನಿಂದ ದೊರೆಯುವ ಸಾಲ ಕೇವಲ 36 ಸಾವಿರ ರೂ. ಈ ಧೋರಣೆ ರೈತರ ಆರ್ಥಿಕ ಸಂಕಷ್ಟಕ್ಕೆ ಪ್ರಮುಖ ಕಾರಣವಾಗುತ್ತಿದೆ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ ನಿರ್ದೇಶಕ ಪ್ರೊ.ಎಂ.ಜಿ.ಚಂದ್ರಕಾಂತ್
ಹೇಳಿದ್ದಾರೆ.
ನಗರದ ಭಾರತೀಯ ಸಾಂಖ್ಯೀಕ ಸಂಸ್ಥೆಯಲ್ಲಿ ಶುಕ್ರವಾರ ಪ್ರೊ.ಪಿ.ಸಿ.ಮಹಾಲಾನೋಬಿಸ್ ಅವರ ಜನ್ಮದಿನ ಹಾಗೂ ರಾಷ್ಟ್ರೀಯ ಸಾಂಖ್ಯೀಕ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿಫಲಗೊಂಡ, ಸಂಭವನೀಯ ಮತ್ತು ಯಶಸ್ವಿ ಕೊಳವೆಬಾವಿಗಳು, ಕೇಸಿಂಗ್, ಯಂತ್ರ ಇದೆಲ್ಲದರ ಹೂಡಿಕೆ ಲೆಕ್ಕಹಾಕಿದರೆ ಒಂದು ಕೊಳವೆಬಾವಿ ಕೊರೆಯಲು ಕನಿಷ್ಠ 2.37 ಲಕ್ಷ ರೂ. ಖರ್ಚಾಗುತ್ತದೆ. ಆದರೆ, ಕೊಳವೆಬಾವಿ ಕೊರೆಯುವ ಉದ್ದೇಶಕ್ಕಾಗಿ ನಬಾರ್ಡ್ ನಿಗದಿಪಡಿಸಿರುವ ಗರಿಷ್ಠ ಸಾಲದ ಮೊತ್ತ 36 ಸಾವಿರ ರೂ. ಹೀಗಿರುವಾಗ ರೈತರು ಉಳಿದ ಎರಡು ಲಕ್ಷ ರೂ. ಎಲ್ಲಿಂದ ತರಬೇಕು? ಈ ಧೋರಣೆಯು ರೈತರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ಕೋಲಾರ ಸೇರಿದಂತೆ ಬಹುತೇಕ ಭಾಗಗಳನ್ನು ಬರಡು ಪ್ರದೇಶಗಳೆಂದು ಘೋಷಿಸಲಾಗಿದೆ. ಹಾಗಾಗಿ, ಬ್ಯಾಂಕ್‌ಗಳಲ್ಲಿ ರೈತರಿಗೆ ಸಾಲ ಸಿಗುವುದೇ ಇಲ್ಲ. ಇನ್ನು ಸಾಲ ಮಾಡಿ ಕೊಳವೆಬಾವಿ ಕೊರೆದಾಗ, ನೀರು ಸಿಗದೆ ಇರುವ ಪರಿಸ್ಥಿತಿಯೂ ಇದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೊಳವೆಬಾವಿಯಲ್ಲಿ ನೀರು ಸಿಗುವ ಸಂಭವನೀಯತೆ ಪ್ರಮಾಣ ಕೇವಲ 0.3ರಷ್ಟಿದೆ.
ಅಂದರೆ, ಮೂರು ಬೋರ್‌ವೆಲ್ ಕೊರೆದಾಗ, ಅದರಲ್ಲಿ ಒಂದು ಯಶಸ್ಸು ಆಗುತ್ತಿದೆ. ಆದ್ದರಿಂದ ಕೊಳವೆಬಾವಿ ಕೊರೆಯಲು ಖಾಸಗಿ ಸಾಲ ಅನಿವಾರ್ಯ ಎಂಬ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಬಾರ್ಡ್ ಸಾಲದ ಮೊತ್ತವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಗುಣಮಟ್ಟ ಮುಖ್ಯ: ವಿತ್ತೀಯ ಕಾರ್ಯನೀತಿ ಸಂಸ್ಥೆ ನಿರ್ದೇಶಕ ಸುಜಿತ್ ಕುಮಾರ್ ಚೌಧರಿ ಮಾತನಾಡಿ, ಸರ್ಕಾರದ ಯಾವೊಂದು ಯೋಜನೆ ಅಥವಾ ನೀತಿ ಜಾರಿಯಾಗಲು ಮತ್ತು ಅದರ ಪರಿಣಾಮಗಳನ್ನು ನಿರ್ಧರಿಸುವಲ್ಲಿ ಸಾಂಖ್ಯೀಕ ವಿಭಾಗ ಬಹುದೊಡ್ಡ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಅಂಕಿ-ಅಂಶಗಳು ಗುಣಮಟ್ಟ ಬಹುಮುಖ್ಯ ಎಂದರು.
ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ರೋಹಿಣಿ ಎಂ.ಗೋಡೊಲೆ, ಭಾರತೀಯ ಸಾಂಖ್ಯೀಕ ಸಂಸ್ಥೆ ಮುಖ್ಯಸ್ಥ ಪ್ರೊ.ಟಿ.ಎಸ್.ಎಸ್.ಆರ್.ಕೆ. ರಾವ್, ಡಾ.ಎಂ. ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಪೋಸ್ಟ್‌ಮಾಸ್ಟರ್ ಜನರಲ್ ಡಾ.ಚಾರ್ಲ್ಸ್ ಲೋಬೊ ಅವರು, ಪ್ರೊ.ಪಿ.ಸಿ.ಮಹಾಲಾನೋಬಿಸ್ ಅವರ 125ನೇ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಿದರು.