Advertisement

ಗುಣಮಟ್ಟದ ಕರ್ತವ್ಯ ರೂಢಿಸಿಕೊಳ್ಳಿ: ಸಿಇಒ

04:37 PM Jun 30, 2018 | Team Udayavani |

ಕಲಬುರಗಿ: ಕಚೇರಿಗಳಲ್ಲಿ ಗುಣಮಟ್ಟದ ಕರ್ತವ್ಯ ನಿರ್ವಹಿಸುವುದು ಅಧಿಕಾರಿಗಳನ್ನು ಅವಲಂಬಿಸಿರುತ್ತದೆ.
ಅಧಿಕಾರಿ ಮತ್ತು ಸಿಬ್ಬಂದಿಗಳೆಲ್ಲ ಗುಣಮಟ್ಟದ ಕರ್ತವ್ಯ ನಿರ್ವಹಿಸುವ ರೂಢಿ ಮಾಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ ಸಲಹೆ ನೀಡಿದರು.

Advertisement

ಜಿಲ್ಲಾ ಪಂಚಾಯಿತಿ ಹಳೆ ಸಭಾಂಗಣದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾ ಇಲಾಖೆಯಿಂದ ಆಯೋಜಿಸಿದ್ದ ಸಾಂಖ್ಯೀಕ ತಜ್ಞ ಪ್ರೊ| ಪಿ.ಸಿ. ಮಹಾಲನೋಬಿಸ್‌ ಜನ್ಮ ದಿನಾಚರಣೆ ಹಾಗೂ ಸಾಂಖ್ಯೀಕ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಕಚೇರಿ ಚೆನ್ನಾಗಿ ಕೆಲಸ ನಿರ್ವಹಿಸುತ್ತಿದೆ ಎಂದರೆ ಆ ಕಚೇರಿಯಲ್ಲಿ ಗುಣಮಟ್ಟದ ಸೇವೆ ಲಭ್ಯವಾಗುತ್ತಿದೆ ಎಂದರ್ಥ. ಇದರಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಭಾಗಿಯಾಗಿರುತ್ತಾರೆ. ಎಲ್ಲ ಇಲಾಖೆಗಳ ಪ್ರಗತಿ ಅಂಕಿ ಸಂಖ್ಯೆಗಳನ್ನು ನಿಖರವಾಗಿ ಸಂಗ್ರಹಿಸಿದ್ದಲ್ಲಿ ಗುಣಮಟ್ಟದಿಂದ ಕೂಡಿರುವ ಜಿಲ್ಲೆಯ ವರದಿ ಸಿದ್ಧಪಡಿಸಲು ಸಾಧ್ಯವಾಗುತ್ತದೆ ಎಂದರು. ಗುರುಕುಲ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸಂತೋಷ ಹಿರೇಮಠ ಅವರು ಆಡಳಿತಾತ್ಮಕ ಅಂಕಿ ಅಂಶಗಳ ಗುಣಮಟ್ಟ ಖಾತ್ರಿ ಕುರಿತು ಉಪನ್ಯಾಸ ನೀಡಿ, ಸರ್ಕಾರ ಅಥವಾ ಖಾಸಗಿಯವರು ಯಾವುದೇ ಯೋಜನೆ ಪ್ರಾರಂಭಿಸಬೇಕಾದಲ್ಲಿ ಯೋಜನೆಗೆ ಸಂಬಂಧಿಸಿದ ಮೂಲಭೂತ ಅಂಕಿ ಅಂಶಗಳ ಅವಶ್ಯಕತೆ ಇರುತ್ತದೆ.

ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನೆ ಕೈಗೊಳ್ಳುವವರು ಸಂಶೋಧನಾ ವರದಿಯನ್ನು ನಿಗದಿತ ಅವಧಿಯೊಳಗೆ ಬಿಡುಗಡೆ ಮಾಡಬೇಕು ಅಲ್ಲದೇ ವರದಿಯ ಗುಣಮಟ್ಟ ಖಾತರಿ ಪಡಿಸಬೇಕು ಎಂದರು.

ಇತ್ತೀಚೆಗೆ ಸಂಗ್ರಹಿಸಲಾಗುತ್ತಿರುವ ಹಾಗೂ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳು ನಿಖರ ಹಾಗೂ ಗುಣಮಟ್ಟದಿಂದ ಕೂಡಿಲ್ಲವಾದ್ದರಿಂದ ಅಂಕಿ ಅಂಶಗಳ ಮೇಲೆ ಅಪನಂಬಿಕೆ ವ್ಯಕ್ತವಾಗುತ್ತಿದೆ. 

Advertisement

ಅಂಕಿ ಅಂಶಗಳನ್ನು ಸಂಗ್ರಹಿಸುವಾಗ ಪ್ರಸ್ತುತತೆ, ಪ್ರವೇಶಿಸುವಿಕೆ, ಸಮಯೋಚಿತ, ನಿಖರತೆ ಹಾಗೂ ಸುಸಂಬಂಧತೆ ಅಂಶಗಳನ್ನು ಒಳಗೊಂಡಿರಬೇಕು. ಯಾವುದೇ ಉದ್ಯೋಗ ಮುಂದುವರಿಯಬೇಕಾದರೆ ಅವರ ಉತ್ಪನ್ನಗಳಲ್ಲಿ ಗುಣಮಟ್ಟ ಹೇಗೆ ಪ್ರಾಮುಖ್ಯತೆ ವಹಿಸುತ್ತದೆಯೋ ಅದೇ ರೀತಿ ಕಚೇರಿಗಳಲ್ಲಿ ಅಂಕಿ ಸಂಖ್ಯೆಗಳ ದಾಖಲೆ ಗುಣಮಟ್ಟದಿಂದ ಕೂಡಿರುವುದು ಪ್ರಾಮುಖ್ಯತೆ ಪಡೆಯುತ್ತದೆ ಎಂದರು.

ಉದ್ಯೋಗದಲ್ಲಿ ಗುಣಮಟ್ಟ ಕಾಯ್ದುಕೊಂಡವರಿಗೆ ಸಿಕ್ಸ್‌ ಸಿಗ್ಮಾ ಎನ್ನುವ ಗುಣಮಟ್ಟದ ಪ್ರಮಾಣಪತ್ರ ನೀಡಲಾಗುವುದು. ಭಾರತದಲ್ಲಿ ಈ ಪ್ರಮಾಣಪತ್ರವು ಮುಂಬೈಯಲ್ಲಿ ಎಲ್ಲ ಕಚೇರಿ ಮತ್ತು ಅವಶ್ಯಕತೆಯಿದ್ದಲ್ಲಿ ಮನೆಯಿಂದ ಆಹಾರದ ಡಬ್ಬಗಳನ್ನು ಸಂಗ್ರಹಿಸಿ ತಲುಪಿಸುವ ಡಬ್ಟಾವಾಲಾ ಸರ್ವಿಸ್‌ಗೆ ದೊರೆತಿದೆ. ಗುಣಮಟ್ಟದ ಪ್ರಮಾಣಪತ್ರ ಪಡೆಯುವುದು ಕೇವಲ ಗುಣಮಟ್ಟದಿಂದ ಮಾತ್ರ ಸಾಧ್ಯ, ಪದವಿಯಿಂದಲ್ಲ ಎಂದು ವಿವರಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣಾಯಗಲಾಪುರೆ ಅಧ್ಯಕ್ಷತೆ ವಹಿಸಿದ್ದರು. ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಜಂಟಿ ನಿರ್ದೇಶಕ ಬಸವರಾಜ ಎಸ್‌., ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ಧಿಕಾರಿ ಪ್ರವೀಣ ಪ್ರಿಯಾ ಡೇವಿಡ್‌, ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ, ತೋಟಗಾರಿಕೆ ಉಪನಿರ್ದೇಶಕ ಮಹ್ಮದ್‌ ಅಲಿ ಪಾಲ್ಗೊಂಡಿದ್ದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾ ಇಲಾಖೆ ಸಹಾಯಕ ನಿರ್ದೇಶಕ ಸಿಮಿಯೋನ ಎಸ್‌. ತುಮಕೂರಕರ ಸಾಂಖ್ಯೀಕ ತಜ್ಞ ಪ್ರೊ| ಪಿ.ಸಿ. ಮಹಾಲನೋಬಿಸ್‌ ಅವರನ್ನು ಪರಿಚಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next