ಬೀಳಗಿ: ನಿರ್ವಹಣೆಯಿಲ್ಲದೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳು ಹಲವು ತಿಂಗಳಿಂದ ಸ್ಥಗಿತಗೊಂಡಿವೆ. ಈ ಕುರಿತು ಪಪಂ ದಿವ್ಯ ನಿರ್ಲಕ್ಷ್ಯ ಧೋರಣೆ ತಾಳಿರುವ ಪರಿಣಾಮ, ಬಿರು ಬೇಸಿಗೆ ಹಾಗೂ ಕೊರೊನಾ ಭೀತಿಯ ನಡುವೆ ಸಾರ್ವಜನಿಕರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ಏಳರಲ್ಲಿ ಮೂರು ಸುಸ್ಥಿತಿಯಲ್ಲಿ: ಸದೃಢ ಆರೋಗ್ಯಕ್ಕೆ ಶುದ್ಧ ನೀರು ಪ್ರಮುಖ ಕಾರಣ ಎನ್ನುವ ಸದಾಶಯದಿಂದ ಲಕ್ಷಾಂತರ ವೆಚ್ಚ ಮಾಡಿ ಮಾಜಿ ಶಾಸಕ ಜೆ.ಟಿ.ಪಾಟೀಲರ ಅವಧಿಯಲ್ಲಿ ಪಟ್ಟಣದಲ್ಲಿ ನಿರ್ಮಾಣಗೊಂಡ ಏಳು ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಆರೇಳು ವರ್ಷ ಗತಿಸಿದೆ. ಆದರೆ, ಯಾವುದೇ ಭಾಗದ ಘಟಕಗಳೂ ನಿರಂತರ ಸೇವೆ ನೀಡುತ್ತಿಲ್ಲ. ಇಂತಹ ಬೇಜವಾಬ್ದಾರಿ ಸ್ಥಿತಿಗೆ ಜನ ರೋಸಿ ಹೋಗಿದ್ದಾರೆ. ಸದ್ಯ, ಪಟ್ಟಣದ ಏಳು ಘಟಕಗಳ ಪೈಕಿ ನಗರದ ಗಾಂಧಿ ವೃತ್ತ, ಡಾ|ಅಂಬೇಡ್ಕರ್ ನಗರ ಹಾಗೂ ಶಿವಾಜಿ ವೃತ್ತದ ಹತ್ತಿರ ಮೂರು ಘಟಕಗಳು ಮಾತ್ರ ಸುಸ್ಥಿತಿಯಲ್ಲಿವೆ. ಪರಿಣಾಮ, 20 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಓಣಿಯಿಂದ, ಓಣಿಗೆ ಅಲೆಯುವಂತಾಗಿದೆ.
ರಿಪೇರಿ ಕಾಣದ ಘಟಕಗಳು: ಪಟ್ಟಣದ ಜನತಾ ಪ್ಲಾಟ್, ಕಿಲ್ಲಾಗಲ್ಲಿ, ರೇಣುಕಾ ನಗರ (ಜೈನ್ ಮಂದಿರ ಹತ್ತಿರ) ಹಾಗೂ ಪಪಂ ಮೂಗಿನ ನೇರಕ್ಕೆ ಇರುವ ಡಾ|ಅಂಬೇಡ್ಕರ್ ವೃತ್ತದ ಘಟಕಗಳು ಸ್ಥಗಿತಗೊಂಡಿವೆ. ಇದರಲ್ಲಿ ಕೆಲ ಘಟಕಗಳು 60 ರಿಂದ 80 ಸಾವಿರದವರೆಗೆ ರಿಪೇರಿ ಖರ್ಚಿಗಾಗಿ ಕಾಯ್ದು ಕುಳಿತಿವೆ. ಹಲವು ತಿಂಗಳಿಂದ ನಿರ್ವಹಣೆಯಿಲ್ಲದೆ ಘಟಕಗಳು ತುಕ್ಕು ಹಿಡಿಯುತ್ತಿವೆ. ಸಾರ್ವಜನಿಕರ ಮೂಲಭೂತ ಸೌಕರ್ಯಗಳಲ್ಲಿ ಮೊದಲ ಆದ್ಯತೆಗೆ ಅರ್ಹವಾಗಿರುವ ಕುಡಿಯುವ ನೀರಿನ ಕುರಿತು ಪಪಂ ನಿರ್ಲಕ್ಷ್ಯ ಧೋರಣೆ ತಾಳಿರುವುದು ನಗರ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪಪಂ ಅಧಿಕಾರಿಗಳಿಗೆ ಹಾಗೂ ಶಾಸಕರಾದಿಯಾಗಿ ಎಲ್ಲ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿರುವುದು ಬೇಸಿಗೆಯ ಪ್ರಖರತೆಗೆ ಆವಿಯಾದ ನೀರಿನಂತಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸ್ಥಳೀಯ ನಾಗರಿಕರು, ಕೂಡಲೆ ಘಟಕಗಳ ಆರಂಭಕ್ಕೆ ಪಪಂ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕಗಳ ಉತ್ತಮ ನಿರ್ವಹಣೆ ಮಾಡದ ಪಪಂ ಇಲಾಖೆಯವರು ಕುಂಟುನೆಪ ಹೇಳುತ್ತಾರೆ. ಸಾರ್ವಜನಿಕರು ತೊಂದರೆ ಪಡುವಂತಾಗಿದೆ. ಈ ಕುರಿತು ಎಂಎಲ್‌ಎ, ಎಂಎಲ್‌ಸಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿರುವುದೆಲ್ಲ ವ್ಯರ್ಥವಾಗಿದೆ. ಘಟಕಗಳಿಗೆ ಕಾಯಂ ಕೀಲಿಯನ್ನಾದರು ಜಡಿಯಲಿ. –
ಮುದ್ದುರಾವ್ ಸೊನ್ನ, ನಗರ ನಿವಾಸಿ
ಎರಡು ರೂಪಾಯಿಗೆ 20 ಲೀಟರ್ ನೀರು ಕೊಡುತ್ತೇವೆ. ನಿರ್ವಹಣಾ ವೆಚ್ಚ ಹಾಗೂ ವಿದ್ಯುತ್ ಬಿಲ್ ಕೂಡ ಭರಣಾ ಮಾಡಲು ಆಗುತ್ತಿಲ್ಲ. ನಿರ್ವಹಣೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಆದರೂ ಘಟಕಗಳನ್ನು ಕೂಡಲೆ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. –
ದೇವೀಂದ್ರ ಧನಪಾಲ, ಮುಖ್ಯಾಧಿಕಾರಿಗಳು ಪಪಂ, ಬೀಳಗಿ
-ರವೀಂದ್ರ ಕಣವಿ