Advertisement
ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳು ರಚಿಸಿದ ಜಾಂಬವತೀ ಕಲ್ಯಾಣದಲ್ಲಿ ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಬಲರಾಮನಾಗಿ ಒಡ್ಡೋಲಗದ ಸಂದರ್ಭ,ತನ್ನ ಹುಟ್ಟಿಗೆ ಕಾರಣವಾದ ವಿಚಿತ್ರ ಸನ್ನಿವೇಶ, ಮೊದಲ 7 ತಿಂಗಳುಗಳ ಕಾಲ ತಾಯಿ ದೇವಕಿಯ ಗರ್ಭದಲ್ಲಿದ್ದು, ಕಂಸನ ಕ್ರೂರ ಕೃತ್ಯಕ್ಕೆ ಹೆದರಿ ವಾಸುದೇವನು ಅನಂತರ ಈ ಪಿಂಡವನ್ನು ರೋಹಿಣಿ ದೇವಿಯ ಗರ್ಭಕ್ಕೆ ಆಕರ್ಷಿಸಿ, ಅಲ್ಲಿ ಭದ್ರವಾಗಿಟ್ಟು ,ಹೀಗೆ ನಂತರ ತಾನು ಜನ್ಮ ತಳೆದ ಜನ್ಮ ವೃತ್ತಾಂತದ ಕತೆಯನ್ನು ಪೀಠಿಕೆಯಲ್ಲಿ ಚಂದವಾಗಿ ವಿಷದ ಪಡಿಸುತ್ತಾ ತಾನು ಸಂಕರ್ಷಣನೆನಿಸಿ ಕೊಂಡ ಬಗೆಯನ್ನು,ತನ್ನ ಸಾಮರ್ಥ್ಯವನ್ನು,ಕೃಷ್ಣ-ಬಲರಾಮರ ಅನ್ಯೋನ್ಯ ಸಂಬಂಧವನ್ನು ಹೇಳಿ ರಂಜಿಸಿದರು.
Related Articles
Advertisement
ಭಾಗವತರಾಗಿ ಪ್ರಸಾದ ಬಲಿಪ, ಮೋಹನ ಶೆಟ್ಟಿಗಾರ ಚೆಂಡೆಯಲ್ಲಿ, ಕೃಷ್ಣಪ್ರಕಾಶ್ ಉಳಿತ್ತಾಯ ಮೃದಂಗವಾದಕರಾಗಿ ,ಚಕ್ರತಾಳದಲ್ಲಿ ವಸಂತ ವಾಮದಪದವು ಸಾಥ್ ನೀಡಿದರು.
ಎರಡನೇ ಪ್ರಸಂಗ ಬಲಿಪ ನಾರಾಯಣ ಭಾಗವತರು ರಚಿಸಿದ ಗರುಡ ಗರ್ವಭಂಗ ಕಥಾ ಪ್ರಸಂಗದಲ್ಲಿ ಹನುಮಂತನ ಪಾತ್ರದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಶ್ರೀರಾಮ ನಿರ್ಯಾಣದ ನಂತರ ಶ್ರೀರಾಮನ ಸಾಂಗತ್ಯವಿಲ್ಲದ ಒಂಟಿತನದ,ವೈರಾಗ್ಯದ ಬದುಕನ್ನು ದುಃಖೀಸುವ ಆ ಸನ್ನಿವೇಶ ಮನಮಿಡಿಯುವಂತಿತ್ತು .
ನಾರಾದನಾಗಿ ವಾಸುದೇವ ರಂಗಾ ಭಟ್ ಎಂದಿನ ತಮ ದಾಟಿಯಲ್ಲಿ ಬಲರಾಮನ ಹೆಸರನ್ನು ಪ್ರಸ್ತಾಪಿಸಿ ಆತನ ಸಾಮ್ರಾಜ್ಯ,ಸಾಮರ್ಥ್ಯವನ್ನು ವರ್ಣಿಸಿ ಹನುಮಂತ ಬಲರಾಮರ ಮಧ್ಯೆ ಕಲಹಪ್ರಿಯ ಸನ್ನಿವೇಶವನ್ನು ಸೃಷ್ಟಿಸಿ ತಮ್ಮ ಒಗಟಾದ ಪಾಂಡಿತ್ಯಭರಿತ ಅರ್ಥದ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡರು.
ದ್ವಾರಕಾಧೀಶ-ಬಲರಾಮನಾಗಿ ವಾಸುದೇವ ಸಾಮಗರವರು ಈ ಸಂದರ್ಭ ಒಂದಿಷ್ಟು ಪ್ರಚಲಿತ ರಾಜಕೀಯ ನಡೆಗಳ ಬಗ್ಗೆ,ರಾಜಕೀಯ ಕುರಿತಾಗಿ ವ್ಯಂಗ್ಯ ಭರಿತ ತಿವಿತದ ಹಾಸ್ಯದ ಮಾತುಗಳಿಂದ ಗೆರಿಲ್ಲಾ ಯುದ್ಧ,ಅನುದಾನ ಬಿಡುಗಡೆ ಮುಂತಾಗಿ ಅರ್ಥ ಹೇಳಿ ಪ್ರೇಕ್ಷಕರನ್ನು ನಿದ್ರೆಗೆ ಜಾರದ ಹಾಗೆ ನೋಡಿಕೊಂಡರು.ಗರುಡ ಗರ್ವಭಂಗದ ಶ್ರೀಕೃಷ್ಣನಾಗಿ ಉಜಿರೆ ಅಶೋಕ ಭಟ್ಟರು ವಿದ್ವತ್ತಿನ ಪ್ರದರ್ಶನದ ಮೂಲಕ ಪಾತ್ರದ ಪರಿಪೂರ್ಣತೆಯ ಔಚಿತ್ಯವನ್ನು ಸಮರ್ಥಿಸಿಕೊಂಡರು. ಗಣೇಶ ಕನ್ನಡಿಕಟ್ಟೆಯವರು ಏರು ಧ್ವನಿಯಲ್ಲಿ, ಪ್ರಸಂಗಕ್ಕೆ ಪೂರಕವಾಗಿ ಶ್ರಿ ಕೃಷ್ಣನೊಂದಿಗೆ ಅಹಂಕಾರದ ಮಾತುಗಳಲ್ಲಿ ವಾದಕ್ಕೆ ಇಳಿದುದು ಸ್ವಲ್ಪ ಮಟ್ಟಿಗೆ ವಿಪರೀತವೆನಿಸಿತಾದರೂ ಮನೋರಂಜನೆ ಒದಗಿಸಿತು.
ರವಿಚಂದ್ರ ಕನ್ನಡಿಕಟ್ಟೆಯವರು ಈ ಪ್ರಸಂಗದಲ್ಲಿ ಭಾಗವತರಾಗಿ, ದೇವಾನಂದ ಭಟ್ ರವರು ಚೆಂಡೆಯಲ್ಲಿ ಪದ್ಯಾಣ ಶಂಕರ ನಾರಾಯಣ ಭಟ್ ಮದ್ದಳೆಯಲ್ಲಿ ,ವಸಂತ ವಾಮದಪದವು ಅವರು ಚಕ್ರತಾಳದಲ್ಲಿ ಸಹಕರಿಸಿದರು.
ಎಂ.ರಾಘವೇಂದ್ರ ಭಂಡಾರ್‌ಕರ್