Advertisement

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

01:02 AM May 19, 2024 | Team Udayavani |

ಬೆಂಗಳೂರು: ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಹಾಗೂ ನಿರೀಕ್ಷಿತ ಅಂಕ ಪಡೆಯದ ವಿದ್ಯಾರ್ಥಿಗಳಿಗೆ ಮುಂದಿನ ವಾರ್ಷಿಕ ಪರೀಕ್ಷೆ-2ಕ್ಕೆ ಮುಂಚಿತವಾಗಿ ಮೇ 29ರಿಂದ ಪರಿಹಾರ ಬೋಧನೆ ತರಗತಿಗಳನ್ನು ನಡೆಸುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ತೀರ್ಮಾನ ಮುಂದಿನ ಸಾಲಿನ ಶೈಕ್ಷಣಿಕ ಚಟುವಟಿಕೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ನಿಚ್ಚಳವಾಗಿದೆ.

Advertisement

ಸರಕಾರದ ಈ ತೀರ್ಮಾನದ ಬಗ್ಗೆ ಶಿಕ್ಷಣ ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದರಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಸೆಸೆಲ್ಸಿ ಓದಲಿರುವ ಮಕ್ಕಳು ತೊಂದರೆಗೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆ ಮೇ 15ರಿಂದ ಜೂ. 5ರ ವರೆಗೆ ಪರಿಹಾರ ಬೋಧನೆ ನಡೆಸುವುದಾಗಿ ಶಿಕ್ಷಣ ಇಲಾಖೆ ತೀರ್ಮಾನ ಕೈಗೊಂಡಿತ್ತು. ಆದರೆ ಶಿಕ್ಷಕರು ತಮ್ಮ ರಜೆ ಮೊಟಕುಗೊಳಿಸಲು ಸಿದ್ಧರಿರಲಿಲ್ಲ. 15 ದಿನಗಳ ಗಳಿಕೆ ರಜೆಯ ಆಮಿಷವನ್ನು ಶಿಕ್ಷಣ ಇಲಾಖೆ ಒಡ್ಡಿದರೂ ಶಿಕ್ಷಕರು ಸೊಪ್ಪು ಹಾಕಲಿಲ್ಲ.

ಈ ಮಧ್ಯೆ ವಿಧಾನ ಪರಿಷತ್‌ನ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ಶಿಕ್ಷಕರ ಕೋಪಕ್ಕೆ ತುತ್ತಾಗುವುದು ಬೇಡ ಎಂಬ ಹಿನ್ನೆಲೆಯಲ್ಲಿ ಸರಕಾರ ಪರಿಹಾರ ಬೋಧನೆ ತರಗತಿಗಳನ್ನು ಮೇ 29ಕ್ಕೆ ಮುಂದೂಡಿದೆ. ಹಾಗೆಯೇ ಎಸೆಸೆಲ್ಸಿ ಪರೀಕ್ಷೆ -2ನ್ನು ಜೂ. 14ಕ್ಕೆ ಮುಂದೂಡಿದೆ.

ಗೊಂದಲದ ಗೂಡು
ಇದರಿಂದಾಗಿ ಬದುಕಿನ ಅತ್ಯಂತ ಮಹತ್ವದ ಎಸೆಸೆಲ್ಸಿ ಪರೀಕ್ಷೆಯನ್ನು ಮುಂದಿನ ವರ್ಷ ಬರೆಯುವ ವಿದ್ಯಾರ್ಥಿಗಳ ಮೊದಲ ಶೈಕ್ಷಣಿಕ ಅವಧಿ ಗೊಂದಲದ ಗೂಡಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್‌ ಈಗಾಗಲೇ ಪ್ರಕಟಗೊಂಡಿದ್ದು, ಒಟ್ಟು 244 ಕರ್ತವ್ಯದ ದಿನಗಳಿವೆ. ಈ ಪೈಕಿ 180 ದಿನಗಳನ್ನು ಬೋಧನೆ ಮತ್ತು ಕಲಿಕಾ ಚಟುವಟಿಕೆಗೆಂದು ಮೀಸಲು ಇರಿಸಲಾಗಿದೆ. ಮೇ, ಜೂನ್‌ ಮತ್ತು ಜುಲೈ ತಿಂಗಳಿನಲ್ಲಿ ಒಟ್ಟು 53 ಶಾಲಾ ದಿನಗಳಿದ್ದು, ಪಾಠ ಪ್ರವಚನ ಬಿರುಸಾಗಿ ನಡೆಯುವ ಅವಧಿಯಾಗಿದೆ. ಆದರೆ ಸರಕಾರದ ಹೊಸ ನೀತಿಯಡಿ ಈ ಅವಧಿಯಲ್ಲಿ ಬೋಧಿಸಬೇಕಾದ ಶಿಕ್ಷಕರ ಬಹುಪಾಲು ಸಮಯ “ಬ್ಯಾಕ್‌ಲಾಗ್‌’ ಚಟುವಟಿಕೆಗೆ ಸೀಮಿತಗೊಳ್ಳಲಿದೆ.

Advertisement

ಸದ್ಯದ ಅಂಕಿ ಅಂಶಗಳ ಪ್ರಕಾರ ಈಗಾಗಲೇ ಎರಡು ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಅಂದರೆ ಮೊದಲ ಪರೀಕ್ಷೆ ಬರೆದ ಶೇ. 25ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಎರಡನೇ ಪರೀಕ್ಷೆಗೆ ನೋಂದಾಯಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆ ಮೇ 29ರಿಂದ ಜೂ. 13ರ ವರೆಗೆ, ಆ ಬಳಿಕ ಜೂ. 14ರಿಂದ ಜೂ. 22ರ ವರೆಗೆ ಪರೀಕ್ಷಾ ಮೇಲ್ವಿಚಾರಣೆ, ಅನಂತರ ಮೌಲ್ಯಮಾಪನ ನಡೆಯಲಿದ್ದು, ಆ ಬಳಿಕ ಮತ್ತೆ ಪರೀಕ್ಷೆ-3ಕ್ಕೆ ಸಂಬಂಧಿಸಿದ ಚಟುವಟಿಕೆ ಆರಂಭಗೊಳ್ಳಲಿದೆ.

ಶಿಕ್ಷಣ ಇಲಾಖೆಯಲ್ಲಿ ಮೊದಲೇ ಶಿಕ್ಷಕರ ತೀವ್ರ ಕೊರತೆಯಿದ್ದು, ಪ್ರಸಕ್ತ ಶೈಕ್ಷಣಿಕ ಚಟುವಟಿಕೆಯನ್ನು ಸರಿದೂಗಿಸುವುದು ಹೊರೆಯಾಗಲಿದೆ. ಇದರ ಪರಿಣಾಮವು ಮುಂದಿನ ಎಸೆಸೆಲ್ಸಿ ಪರೀಕ್ಷೆಯ ಮೇಲೆ ಆಗುವುದು ನಿಶ್ಚಿತ. ಸಾಮಾನ್ಯವಾಗಿ ಕಠಿನ ವಿಷಯಗಳಲ್ಲಿ ಮಕ್ಕಳು ಕಡಿಮೆ ಆಂಕ ಪಡೆದಿರುತ್ತಾರೆ. ಈ ವರ್ಷವೂ ಅಂತಹ ವಿಷಯಗಳಿಗೆ ಒತ್ತು ನೀಡುವ ಅಗತ್ಯವಿರುತ್ತದೆ. ಈಗ ಆ ವಿಷಯಗಳ ಶಿಕ್ಷಕರೇ ಪರಿಹಾರ ಬೋಧನೆ, ಮೌಲ್ಯಮಾಪನ ಎಂದು ವ್ಯಸ್ತರಾಗುವ ಸ್ಥಿತಿಯಿದ್ದು, ಅದರ ಅಡ್ಡ ಪರಿಣಾಮ ಈ ವರ್ಷ ಓದುವ ವಿದ್ಯಾರ್ಥಿಗಳ ಮೇಲೆ ಆಗಲಿದೆ. ವಿದ್ಯಾರ್ಥಿಗಳ ಕಲಿಕಾ ನ್ಯೂನತೆಯ ಜತೆಗೆ ಮುಂದಿನ ವರ್ಷ ಕೃಪಾಂಕವನ್ನು ನೀಡುವುದಿಲ್ಲ ಎಂಬ ಸರಕಾರದ ನಿಲುವಿನಿಂದ ಪ್ರಸಕ್ತ ವರ್ಷದ ವಿದ್ಯಾರ್ಥಿಗಳು ಅಡಕತ್ತರಿಯಲ್ಲಿ ಸಿಳುಕಿಕೊಳ್ಳಲಿದ್ದಾರೆ ಎಂದು ಶಿಕ್ಷಕರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಇಲಾಖೆ ಗೊಂದಲದ ಗೂಡಾಗಿದೆ. ಕ್ರಮಬದ್ಧತೆ, ಬದ್ಧತೆಯಿಂದ ಮಾಡಬೇಕಾದ ಕೆಲಸವನ್ನು ನಿರ್ಲಕ್ಷ್ಯದಿಂದ ಮಾಡುತ್ತಿದ್ದಾರೆ. 3 ಪರೀಕ್ಷೆಗಳ ತೀರ್ಮಾನವೇ ಆಧಾರರಹಿತವಾದದ್ದು. ಸುಮಾರು 1,200 ತಾಸು ಪಾಠ ಕೇಳಿದ ವಿದ್ಯಾರ್ಥಿ 25 ಅಂಕ ಪಡೆದು ಪಾಸಾಗಲು ಸಾಧ್ಯವಿಲ್ಲ ಎಂದಾದರೆ ನಮ್ಮ ಶಿಕ್ಷಣದ ಗುಣಮಟ್ಟ ಯಾವ ಹಂತಕ್ಕೆ ಕುಸಿದಿದೆ ಎಂಬುದರ ಬಗ್ಗೆ ಗಂಭೀರವಾಗಿ ಆತ್ಮಾವ ಲೋಕನ ಮಾಡುವುದು ಬಿಟ್ಟು ಈ ರೀತಿಯ ಕಸರತ್ತು ಮಾಡುವುದು ಸರಿಯಲ್ಲ.
-ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞರು

- ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next