Advertisement

ನಡುತಿಟ್ಟಿನ ಪರಂಪರೆಯ ಕರ್ಣಾರ್ಜುನ

06:00 AM Nov 16, 2018 | Team Udayavani |

ಬಡಗು ನಡುತಿಟ್ಟಿನ ಶೈಲಿಯ ವೇಷಭೂಷಣಗಳು ಕಣ್ಮರೆಯಾಗಿ, ಆ ತಿಟ್ಟಿನ ಪರಂಪರೆಯ ಯಕ್ಷಗಾನ ಪ್ರದರ್ಶನವು ಕಡಿಮೆ ಆಗುತ್ತಿರುವ ಈ ಕಾಲಘಟ್ಟದಲ್ಲಿ ಶ್ರೀ ಹೆರ್ಗ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪಣಿಯೂರ್‌ ಯಕ್ಷಬಳಗದಿಂದ ಯಕ್ಷಗಾನ ಕರ್ಣಾರ್ಜುನ ಕಾಳಗ ಪ್ರಸಂಗ ಪ್ರದರ್ಶನಗೊಂಡಿತು.

Advertisement

ಮುಮ್ಮೇಳದಲ್ಲಿ 73 ವರ್ಷ ಹರೆಯದ ಐರೋಡಿ ಗೋವಿಂದಪ್ಪನವರು ತನ್ನ ಹಾರಾಡಿ ತಿಟ್ಟಿನ ಕುಣಿತ, ಶ್ರುತಿಬದ್ಧ ಮಾತಿನಿಂದ ನಡುತಿಟ್ಟಿನ ಹಾರಾಡಿ ಶೈಲಿಯ ಕರ್ಣನಾಗಿ ಎಂದಿನಂತೆ ಇಂದಿಗೂ ತಮ್ಮ ಶ್ರೇಷ್ಠತಮ ನಿರ್ವಹಣೆಯನ್ನು ಶ್ರುತ ಪಡಿಸಿದರು. 
ಶಲ್ಯನಾಗಿ ತುಂಬ್ರಿ ಭಾಸ್ಕರ ಬಿಲ್ಲವನವರು ತಮ್ಮ ಚತುರಂಗದ ನಿರ್ವಹಣೆಯಲ್ಲಿ ಐರೋಡಿಯವರ ಕರ್ಣನಿಗೆ ಸಮರ್ಥ ಸಾರಥಿಯಾದ ಶಲ್ಯ ಎನಿಸಿಕೊಂಡರು.ಅರ್ಜುನನಾಗಿ ಕೃಷ್ಣಮೂರ್ತಿ ಉರಾಳರ ಸಂಪ್ರದಾಯಿಕ ವೇಷ, ಪರಂಪರೆಯನ್ನು ನೆನಪಿಸಿತು.
ಕೃಷ್ಣನಾಗಿ ಯುವ ಕಲಾವಿದ ಆನಂದ ಭಟ್‌ ಕೆಕ್ಕಾರು ಅವರು ತನ್ನ ಪುರಾಣ ಜ್ಞಾನವನ್ನು ಒಳಗೊಂಡ ಪ್ರಬುದ್ಧ ಭಾಷಾ ಶೈಲಿಯ ಸಂಭಾಷಣೆ ಹಾಗೂ ಹಿತಮಿತ ಕುಣಿತದಿಂದ ಹಿರಿಯ ಕಲಾವಿದರ ಜೊತೆ ಸರಿ ಸಾಟಿ ಅನಿಸಿಕೊಂಡು ಒಟ್ಟಂದದ ಯಕ್ಷಗಾನದ ಮೌಲ್ಯವನ್ನು ಹೆಚ್ಚಿಸಿದರು. ವೃದ್ಧ ಬ್ರಾಹ್ಮಣನಾಗಿ ಇಡುವಾಣಿ ರಾಮಚಂದ್ರ ಅವರ ಅಭಿನಯ ಹಿತ ಮಿತವಾಗಿ ಅಚ್ಚುಕಟ್ಟಾಗಿತ್ತು.

 ಹಿಮ್ಮೇಳದಲ್ಲಿ ಭಾಗವತರಾಗಿ ತಂಡದ ಮುಖ್ಯಸ್ಥ ಸುರೇಂದ್ರ ಪಣಿಯೂರರು ತನ್ನ ಸಾಂಪ್ರದಾಯಿಕ ಶೈಲಿಯಲ್ಲಿ ಸುಮಧುರ ಕಂಠದಲ್ಲಿ ಹಾಡಿದ ಹಾಡುಗಳು ಆಟ ಮುಗಿದ ಬಳಿಕವೂ ಪ್ರೇಕ್ಷಕರಲ್ಲಿ ಗುನುಗುನಿಸುವಂತೆ ಮಾಡಿತು. ಕರ್ಣ ಹಾಗೂ ಶಲ್ಯನ ಸಂಭಾಷಣೆ, ಕರ್ಣ ವೃದ್ಧ ಬ್ರಾಹ್ಮಣರ ಸಂಭಾಷಣೆಯಲ್ಲಿ ಭಾವಪೂರ್ಣವಾಗಿ ಹಾಡಿದರು. ಮಾತೆ ಬಲ್ಲಳು ಬಾರಳೀತೆರ ಮೊದಲಾದ ಹಾಡುಗಳನ್ನು ಭಾವನಾತ್ಮಕವಾಗಿ ಹೇಳುವ ಮೂಲಕ ಪ್ರೇಕ್ಷಕರನ್ನು ಕಲಾಲೋಕಕ್ಕೆ ಕೊಂಡೊಯ್ದರು. ಮದ್ದಳೆಯಲ್ಲಿ ಕೂಡ್ಲಿ ದೇವದಾಸ ರಾವ್‌ ಹಾಗೂ ಚೆಂಡೆಯಲ್ಲಿ ರಾಮಕೃಷ್ಣ ಮಂದಾರ್ತಿ ಅವರನ್ನು ಸಮರ್ಥ ಸಾಥಿಯಾಗಿಸಿಕೊಂಡು ಕರ್ಣಾರ್ಜುನ ಪ್ರಸಂಗವನ್ನು ನಡುತಿಟ್ಟಿನ ಸಂಪ್ರದಾಯ ಶೈಲಿಯ ಬದ್ಧತೆಯಲ್ಲಿ ಸಂಪನ್ನಗೊಳಿಸಿ ಕಳೆಗಟ್ಟಿಸಿತು. 

ಐರೋಡಿಯವರ ಕರ್ಣ ಹಾಗೂ ಪಣಿಯೂರವರ ಭಾಗವತಿಕೆ ಪರಸ್ಪರ ತಾದಾತ್ಮತೆ ಹೊಂದಿ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು 70ರ ದಶಕದ ಪ್ರದರ್ಶನವನ್ನು ನೆನಪಿಸುವಂತೆ ಮಾಡಿದ್ದು ಸುಸ್ಪಷ್ಟವಾಗಿ ಕಾಣುತ್ತಿತ‌ು¤. ಮುಂದಿನ ದಿನಗಳಲ್ಲಿ ಈ ತಂಡ ಇನ್ನಷ್ಟು ಪ್ರದರ್ಶನಗಳನ್ನು ನೀಡಲು ಸಜ್ಜಾಗಿದೆ. 

 ಲಕ್ಷ್ಮೀ ಮಚ್ಚಿನ 

Advertisement
Advertisement

Udayavani is now on Telegram. Click here to join our channel and stay updated with the latest news.

Next