Advertisement
ಮಂಗಳವಾರ ನಿಧನ ಹೊಂದಿದ ಮಾಜಿ ಸಚಿವ ಬಿ.ಎ. ಮೊಹಿದೀನ್ ಅವರ ಅಂತಿಮ ದರ್ಶನಕ್ಕಾಗಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್, ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರು ಬೆಂಗಳೂರಿನಿಂದ ಶಿರಾಡಿ ಘಾಟಿ ಮಾರ್ಗವಾಗಿ ಸಂಚರಿಸುತ್ತಿದ್ದರು. ರಸ್ತೆ ತಡೆಯಿಂದಾಗಿ ಸ್ವಲ್ಪ ಕಾಲ ಅಲ್ಲೇ ಉಳಿದ ಅವರು ಬಳಿಕ ಇಚ್ಲಂಪಾಡಿಯಲ್ಲಿ ಕಚ್ಚಾರಸ್ತೆಯ ಮೂಲಕ ಸಂಚರಿಸಿ ಪ್ರಯಾಣ ಮುಂದುವರಿಸಿದರು.
ಕಾಂಕ್ರೀಟ್ ಕಾಮಗಾರಿ ಕಾರಣಕ್ಕೆ ಶಿರಾಡಿ ಘಾಟಿ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಸ್ಥಳೀಯರಿಗೆ ಕೂಡ ಈ ರಸ್ತೆಯನ್ನು ಬಳಸಲು ಅವಕಾಶ ನೀಡಲಾಗದು ಎಂದು ಕಟ್ಟಪ್ಪಣೆ ಮಾಡಲಾಗಿತ್ತು. ಆದರೆ ಮಂಗಳವಾರ ಸಚಿವರಾದಿಯಾಗಿ ರಾಜಕಾರಣಿಗಳು ಈ ರಸ್ತೆಯಲ್ಲಿ ಸಂಚರಿಸುವುದರೊಂದಿಗೆ ನಿಷೇಧ ಕೇವಲ ಸಾಮಾನ್ಯ ಜನರಿಗೆ ಮಾತ್ರ ಎನ್ನುವುದು ಜಗಜ್ಜಾಹೀರಾಯಿತು.
Related Articles
Advertisement
ಶಿರಾಡಿ ಘಾಟಿ ರಸ್ತೆ ತೆರೆದಿಲ್ಲ : ಡಿ.ಸಿ.ಮಂಗಳೂರು: ಶಿರಾಡಿ ಘಾಟಿ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ ಎಂಬ ಸಂದೇಶ ರವಾನೆಯಾಗುತ್ತಿದ್ದು, ಇದು ಸುಳ್ಳು, ವದಂತಿ ಮಾತ್ರ. ರಸ್ತೆ ಕಾಮಗಾರಿ ಸಂಪೂರ್ಣವಾಗದ ಹಿನ್ನೆಲೆಯಲ್ಲಿ ಶಿರಾಡಿ ಘಾಟಿ ರಸ್ತೆ ಸಂಚಾರಕ್ಕೆ ಮುಕ್ತವಾಗಿಲ್ಲ ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಸ್ಪಷ್ಟಪಡಿಸಿದ್ದಾರೆ. ಮಾಜಿ ಸಚಿವ ಬಿ.ಎ. ಮೊಹಿದೀನ್ ಅವರ ಪಾರ್ಥಿವ ಶರೀರ ಹಾಗೂ ಅವರೊಂದಿಗೆ ಮೂವರು ಸಚಿವರು ಇದ್ದ ಹಿನ್ನೆಲೆಯಲ್ಲಿ ಅವರ ವಾಹನ ಶಿರಾಡಿ ಘಾಟಿ ರಸ್ತೆಯಲ್ಲಿ ಆಗಮಿಸಿದೆ. ಅದನ್ನು ಹೊರತು ಪಡಿಸಿ ಇನ್ಯಾವುದೇ ವಾಹನಗಳನ್ನು ಆ ರಸ್ತೆಯಲ್ಲಿ ಬಿಡುತ್ತಿಲ್ಲ. ಜು. 15ರ ವೇಳೆಗೆ ಕಾಮಗಾರಿ ಪೂರ್ಣಗೊಂಡು ರಸ್ತೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.