Advertisement

ಕನ್ಹಯ್ಯ ಕುಮಾರ್‌ ವಿರುದ್ಧ ದೇಶದ್ರೋಹ ಚಾರ್ಜ್‌ಶೀಟ್‌

12:30 AM Jan 15, 2019 | |

ಹೊಸದಿಲ್ಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿಗಳಾದ ಕನ್ಹಯ್ಯ ಕುಮಾರ್‌ ಹಾಗೂ ಇತರರ ವಿರುದ್ಧ ದಿಲ್ಲಿ ಪೊಲೀಸರು ದೇಶದ್ರೋಹದ ಆರೋಪ ಹೊರಿಸಿ ಸೋಮವಾರ ಆರೋಪಪಟ್ಟಿ ಸಲ್ಲಿಸಿದ್ದಾರೆ. 

Advertisement

ಸಂಸತ್‌ ದಾಳಿ ಸಂಚುಕೋರ ಅಫ‌jಲ್‌ ಗುರುವನ್ನು ನೇಣಿಗೇರಿಸಿದ್ದನ್ನು ವಿರೋಧಿಸಿ 2016ರಲ್ಲಿ ಜೆಎನ್‌ಯು ಕ್ಯಾಂಪಸ್‌ನಲ್ಲಿ ಭಾರತ ವಿರೋಧಿ ಘೋಷಣೆ ಕೂಗಿದ್ದ ಕನ್ಹಯ್ಯ ಕುಮಾರ್‌, ಉಮರ್‌ ಖಾಲಿದ್‌, ಅನಿರ್ಬನ್‌ ಭಟ್ಟಾಚಾರ್ಯ ಸೇರಿದಂತೆ ಹಲವರ ಹೆಸರುಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಲಾಗಿದೆ. 

ಇದಕ್ಕೆ ಪೂರಕ ಸಾಕ್ಷ್ಯವಾಗಿ ಸಿಸಿಟಿವಿ ದೃಶ್ಯಾವಳಿ, ಮೊಬೈಲ್‌ನಲ್ಲಿ ಸೆರೆ ಹಿಡಿದ ವೀಡಿಯೋ ಮತ್ತು ಇತರ ದಾಖಲೆಗಳನ್ನು ನೀಡಲಾಗಿದೆ. ಕನ್ಹಯ್ಯ ಭಾರತ ವಿರೋಧಿ ಘೋಷಣೆ ಕೂಗುವ ಮೂಲಕ ಗುಂಪುಗಲಭೆಗೆ ಪ್ರಚೋದಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಪಟಿಯಾಲಾ ಕೋರ್ಟ್‌ಗೆ 1,200 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಪ್ರತಿಭಟನೆ ನಡೆಸುವಾಗ ಆರೋಪಿಗಳು ಮುಖ ಮುಚ್ಚಿಕೊಂಡಿದ್ದರು. ಆದರೆ ವಾಪಸ್‌ ಬರುವಾಗ ಮುಖ ಮುಚ್ಚಿಕೊಂಡಿರಲಿಲ್ಲ. ಹೀಗಾಗಿ ಅವರನ್ನು ಗುರುತು ಹಿಡಿಯಲು ಸಾಧ್ಯವಾಗಿದೆ. ತನಿಖೆ ಸಂಕೀರ್ಣವಾಗಿದ್ದು, ಹಲವು ರಾಜ್ಯಗಳಿಗೆ ತೆರಳಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ದೇಶ ವಿರೋಧಿ ಘೋಷಣೆ ಕೂಗುತ್ತಿರುವ ವೀಡಿಯೋವನ್ನು ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಈ ಘಟನೆ 2016ರಲ್ಲಿ ಭಾರೀ ವಿವಾದ ಎಬ್ಬಿಸಿತ್ತು. ವಿವಿ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಿದ್ದೂ ಅಲ್ಲದೆ, ಭಾರತದ ವಿರುದ್ಧ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಗಿತ್ತು. ಇದು ರಾಜಕೀಯ ವಾಗ್ವಾದಕ್ಕೂ ಕಾರಣವಾಗಿತ್ತು. ಪ್ರತಿಭಟನಾ ಕಾರರ ಪರವಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಾತನಾ ಡಿದ್ದರಲ್ಲದೆ, ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದರು.

Advertisement

1200 ಪುಟಗಳ ಆರೋಪಪಟ್ಟಿ: ಈ ಚಾರ್ಜ್‌ಶೀಟ್‌ 1200 ಪುಟಗಳನ್ನು ಹೊಂದಿದ್ದು, ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಶ್ಮೀರಿ ವಿದ್ಯಾರ್ಥಿಗಳಾದ ಅಖೀಬ್‌ ಹುಸೇನ್‌, ಮುಜೀಬ್‌ ಹುಸೇನ್‌, ಮುನೀಬ್‌ ಹುಸೇನ್‌, ಉಮರ್‌ ಗುಲ್‌, ರಯೀಸಾ ರಸೊಲ್‌, ಬಶೀರ್‌ ಭಟ್‌ ಮತ್ತು ಬಶರತ್‌ರನ್ನು ಕೂಡ ಹೆಸರಿಸಲಾಗಿದೆ. ಆದರೆ ಸಿಪಿಐ ನಾಯಕ ಡಿ.ರಾಜಾ ಪುತ್ರಿ ಅಪರಾಜಿತಾ ಹಾಗೂ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷೆಯಾಗಿದ್ದ ಶೆಹ್ಲಾ ರಶೀದ್‌ ಸೇರಿ 36 ವಿದ್ಯಾರ್ಥಿಗಳ ವಿರುದ್ಧ ಸಾಕ್ಷ್ಯಾಧಾರ ಕೊರತೆ ಇರುವುದಾಗಿ ಉಲ್ಲೇಖೀಸಲಾಗಿದೆ. 

ಪೊಲೀಸರು ಮತ್ತು ಮೋದಿಜೀಗೆ ನಾನು ಧನ್ಯವಾದ ತಿಳಿಸುತ್ತೇನೆ. 3 ವರ್ಷಗಳ ಬಳಿಕ ಹಾಗೂ ಚುನಾವಣೆ ಸಮೀಪಿಸುತ್ತಿರುವಾಗ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಇದು ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗುತ್ತದೆ. ಶೀಘ್ರದಲ್ಲೇ ವಿಚಾರಣೆ ನಡೆಯಲಿ ಎಂದು ಬಯಸಿದ್ದೇವೆ. ಇದರಿಂದ ನಿಜಾಂಶ ಹೊರಬರಲಿದೆ. ಪೊಲೀಸರು ಸಾಕ್ಷ್ಯ ಎಂದು ದಾಖಲಿಸಿರುವ ವೀಡಿಯೋವನ್ನು ನಾವು ನೋಡಬೇಕಿದೆ.
– ಕನ್ಹಯ್ಯ ಕುಮಾರ್‌, ಆರೋಪಿ

ಸರಕಾರವು ಚುನಾವಣೆ ವರ್ಷದಲ್ಲಿ ರಾಜಕೀಯ ಆಟವನ್ನಾಡುತ್ತಿದೆ ಮತ್ತು ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ. ನಾವು ಈ ಪ್ರಕರಣದ ವಿರುದ್ಧ ಹೋರಾಡುತ್ತೇವೆ ಮತ್ತು ನಾವು ನಿರಪರಾಧಿಗಳು ಎಂದು ಸಾಬೀತು ಮಾಡುತ್ತೇವೆ.
– ಉಮರ್‌ ಖಾಲಿದ್‌, ಆರೋಪಿ

Advertisement

Udayavani is now on Telegram. Click here to join our channel and stay updated with the latest news.

Next