ಹಳೆಯಂಗಡಿ: ಪಡುಪಣಂಬೂರು ಗ್ರಾಮ ಪಂಚಾಯ ತ್‌ನ ಬೆಳ್ಳಾಯರು ಗ್ರಾಮದ ಕೆರೆಕಾಡಿನ ಕೊರಗರ ಕಾಲನಿಯಲ್ಲಿ ಜು. 15ರಂದು ಬಾಲಕ ನಿಶಾಂತ್ ಬಿದ್ದು ಸಾವನ್ನಪ್ಪಿದ ಕೆರೆಯನ್ನು ಮುಚ್ಚುವಂತೆ ಆಗ್ರಹ ಕೇಳಿಬಂದಿದೆ. ಇದು ಕೆರೆಯಂತಿದ್ದರೂ, ಈ ಮೊದಲು ಕಸದ ಗುಂಡಿಯಾಗಿತ್ತು. ಮಳೆಗಾಲದಲ್ಲಿ ನೀರು ತುಂಬಿಕೊಂಡ ಪರಿಣಾಮ ಕೆರೆಯಾಗಿ ಪರಿವರ್ತನೆಯಾಯಿತು. ಇದನ್ನು ಅರಿಯದ ನಿಶಾಂತ್ ಬಿದ್ದು ಜೀವ ಕಳೆದುಕೊಂಡ. ಈ ದುರಂತದಿಂದ ಬಹಳ ನೊಂದಿರುವ ಸ್ಥಳೀಯರು, ಕೆರೆಯನ್ನು ಸಂಪೂರ್ಣವಾಗಿ ಮುಚ್ಚಬೇಕು ಎಂದು ಗ್ರಾ.ಪಂ.ಗೆ ಮನವಿ ಮಾಡಿದ್ದಾರೆ. ಇದರಿಂದ ಇನ್ನಷ್ಟು ಇಂಥ ಅನಾಹುತ ತಡೆಯಬಹುದೆಂಬ ಕಾಳಜಿ ಮತ್ತು ಮುಂಜಾಗ್ರತೆ ಸ್ಥಳೀಯರದ್ದು.
ಕೆರೆ ಯಾರದ್ದು ?
ಈ ಕೆರೆಯ ಪ್ರದೇಶವು ದಿ| ಮರ್ದ ಎಂಬವರಿಗೆ ಸೇರಿದೆ. ಸುಮಾರು 32 ಸೆಂಟ್ಸ್ ಜಮೀನು ಇದ್ದು, ಅದನ್ನು ಅವರ ಇಬ್ಬರು ಹೆಣ್ಣು ಮಕ್ಕಳಿಗೆ ಪರಭಾರೆ ಮಾಡಲಾಗಿದೆ. ಈ ಜಮೀನಿನಲ್ಲಿದ್ದ ಸಣ್ಣ ಗುಂಡಿಗೆ ಅಕ್ಕಪಕ್ಕದ ಕಸ ಕಡ್ಡಿಗಳನ್ನು ತಂದು ಹಾಕಲಾಗುತ್ತಿತ್ತು. ಗೊಬ್ಬರ ಗಿಡದ ಗೆಲ್ಲುಗಳು, ಪಕ್ಕದ ಜಮೀನೊಂದನ್ನು ಸಮತಟ್ಟುಮಾಡುವಾಗ ಸಿಕ್ಕ ಮರಗಳ ಬೇರು- ಕಾಂಡಗೆಳಲ್ಲವನ್ನೂ ಈ ಹೊಂಡಕ್ಕೆ ತುಂಬಿಸಲಾಗಿತ್ತು.
ಮಳೆಗಾಲದಲ್ಲಿ ಅದಕ್ಕೆ ನೀರು ತುಂಬಿಕೊಂಡದ್ದು ಮತ್ತು ರಸ್ತೆಯ ಅಂಚಿನಲ್ಲಿ ಯಾವುದೇ ಅಡೆತಡೆಗಳಿಲ್ಲದೇ ಇರುವುದರಿಂದ ನಿಶಾಂತ್ ಸಹ ತಿಳಿಯದೇ ಕಾಲಿಟ್ಟು ಬಿದ್ದಿದ್ದ. ಅವನು ಮೇಲಕ್ಕೆ ಬಾರದಂತೆ ತಡೆದದ್ದು ಈ ಗೆಲ್ಲುಗಳು ಮತ್ತು ಕಸದ ರಾಶಿ. ಹಾಗಾಗಿ ನಿಶಾಂತನ ಶವವನ್ನು ಮೇಲೆತ್ತಲು ಮುಳುಗು ತಜ್ಞರು ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿದ್ದರು.
ಈ ಪ್ರದೇಶದಲ್ಲಿ ಸುಮಾರು 26 ಕೊರಗ ಸಮುದಾಯದ ಕುಟುಂಬಗಳು ವಾಸಿಸುತ್ತಿವೆ. ಎಪ್ರಿಲ್‌ನಲ್ಲಿ ರಾಜ್ಯ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಗ್ರಾಮ ವಾಸ್ತವ್ಯ ನಡೆಸಿದ ಪ್ರದೇಶ ಇದಾಗಿದ್ದು, ಅವರ ಭೇಟಿಯ ಅನಂತರ ಒಂದಷ್ಟು ಬದಲಾವಣೆ ಆಗಿತ್ತು. ಸಭಾಂಗಣವೊಂದು ನಿರ್ಮಾಣ ವಾಗುತ್ತಿದೆ. ಬಹುದೊಡ್ಡ ಸಮಸ್ಯೆಯಾಗಿದ್ದ ಜಮೀನು ಪರಭಾರೆಯೂ ಕಂದಾಯ ಇಲಾಖೆಯ ಮೂಲಕ ನಡೆಸಲಾಗಿದೆ. ಕಾಂಕ್ರೀಟ್ ರಸ್ತೆಯೂ ಆಗಿದೆ. ಪ್ರತಿ ಮನೆಗೂ ಶೌಚಾಲಯದ ವ್ಯವಸ್ಥೆಯನ್ನು ಗ್ರಾ.ಪಂ. ಕಲ್ಪಿಸಿದೆ.
ಸ್ಥಳೀಯ ಬೇಡಿಕೆಗೆ ಸ್ಪಂದನೆ
ಬಾಲಕನೊಬ್ಬನ ದಾರುಣ ಸಾವು ಸ್ಥಳೀಯರನ್ನು ಕಂಗೆಡೆಸಿದೆ. ಗುಂಡಿಯನ್ನು ಮುಚ್ಚಲು ಸ್ಥಳೀಯರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಮುಂದಿನ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಗುಂಡಿಯನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು.
– ಮೋಹನ್ ದಾಸ್, ಅಧ್ಯಕ್ಷರು, ಪಡುಪಣಂಬೂರು ಗ್ರಾ.ಪಂ.
ಸೂಕ್ತ ಪರಿಹಾರ ಸಾಧ್ಯತೆ
ನಿಶಾಂತ್‌ನ ಶವ ಪರೀಕ್ಷೆಯ ವರದಿಯು ಇಲಾಖೆಯ ಕೈ ಸೇರಿದ ಮೇಲೆ ಅವನ ಪೋಷಕರಿಗೆ ಸರಕಾರದಿಂದ ಸೂಕ್ತ ಪರಿಹಾರ ಸಿಗುವ ಸಾಧ್ಯತೆ ಇದೆ. ಹಳ್ಳದಂತೆ ಇರುವ ಪ್ರದೇಶವು ಖಾಸಗಿಯವರಿಗೆ ಸೇರಿದ್ದರಿಂದ ಅವರ ಅಭಿಪ್ರಾಯ ಸಂಗ್ರಹಿಸಿ ಪಂಚಾಯತ್‌ಗೆ ತಿಳಿಸಲಾಗುವುದು. ಗುಂಡಿ ಮುಚ್ಚಿದಲ್ಲಿ ಸ್ಥಳೀಯರಿಗೂ ನೆಮ್ಮದಿ ಸಿಗಬಹುದು.
– ಮೋಹನ್, ಗ್ರಾಮ ಕರಣಿಕ, ಪಡುಪಣಂಬೂರು ಗ್ರಾ.ಪಂ.