ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುವರ್ಣ ವಿಧಾನಸೌಧ ಬಳಿಯ ಬಸ್ತವಾಡ ಗ್ರಾಮದಲ್ಲಿ ಸಾರಿಗೆ ನೌಕರರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ವೇಳೆ ರವಿವಾರ ಪೊಲೀಸರು ಏಕಾಏಕಿ ಬಂದು ಉಪವಾಸ ನಿರತ 14 ಜನರನ್ನು ಬಲವಂತವಾಗಿ ಅಲ್ಲಿಂದ ಕರೆದೊಯ್ದಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ವತಿಯಿಂದ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹ ರವಿವಾರ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಮುಷ್ಕರ ಮೊಟಕುಗೊಳಿಸುವಂತೆ ಪೊಲೀಸರು ಹೇಳಿದ್ದಾರೆ. ಆದರೆ ಬೇಡಿಕೆ ಈಡೇರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಆಗ ಪೊಲೀಸರು ಎಲ್ಲರನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.
ಪ್ರತಿಭಟನಾ ಸ್ಥಳದಿಂದ ಎದ್ದೇಳಲು ನಿರಾಕರಿಸಿದ ಎಲ್ಲ ಸಾರಿಗೆ ನೌಕರರನ್ನು ಪೊಲೀಸರು ಬಸ್ನಲ್ಲಿ ಹುಬ್ಬಳ್ಳಿಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾರಿಗೆ ನೌಕರರು ನಿರಾಕರಿಸಿದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಮಾತಿನ ಚಕಮಕಿಯೂ ನಡೆಯಿತು.
ಬಸ್ ನಲ್ಲಿಯೂ ಮಹಾತ್ಮ ಗಾಂಧೀಜಿಯವರ ಫೋಟೋ ಹಿಡಿದು ಸಾರಿಗೆ ನೌಕರರು ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಸೋಮವಾರ ಡಿಸೆಂಬರ್ 26ರಂದು ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ನೌಕರರು ಪ್ರತಿಭಟನಾ ಸ್ಥಳಕ್ಕೆ ಆಗಮಿಸುವಂತೆ ಕರೆ ನೀಡಿದ್ದಾರೆ. ಹುಬ್ಬಳ್ಳಿ ಕಿಮ್ಸ್ ನಿಂದ ಅದೇ ಬಸ್ ನಲ್ಲಿ ಕರೆದುಕೊಂಡು ಬರಲಾಗುತ್ತಿದೆ. ಎಲ್ಲಿಗೆ ಎಂಬುದನ್ನು ಮಾತ್ರ ಸಾರಿಗೆ ನೌಕರರಿಗೆ ಪೊಲೀಸರು ತಿಳಿಸಿಲ್ಲ.