ಮಂಡ್ಯ: ಬಸ್‌ಪಾಸ್ ಹೊಂದಿರುವ ಶಾಲಾ- ಕಾಲೇಜು ವಿದ್ಯಾರ್ಥಿಗಳು ಸಾರಿಗೆ ಬಸ್ ನಿರ್ವಾಹಕರು ಹಾಗೂ ಚಾಲಕರಿಂದ ಒಂದಲ್ಲಾ ಒಂದು ರೀತಿಯಲ್ಲಿ ಕಿರುಕುಳ ಹಾಗೂ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಹಲವೆಡೆ ಕಲೆಕ್ಷನ್ ನೆಪದಲ್ಲಿ ಬಸ್ ಹತ್ತಲು ಮುಂದಾಗುವ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುತ್ತಿದ್ದರೆ, ಕೆಲವೆಡೆ ಬಸ್ ಹತ್ತಿದ ನಂತರ ನಿರ್ವಾಹಕರ ದರ್ಪ- ದಬ್ಬಾಳಿಕೆಯಿಂದ ಮಕ್ಕಳು ನೋವು ಅನುಭವಿಸುತ್ತಿದ್ದಾರೆ.
ಶೈಕ್ಷಣಿಕ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳುವ ಮಹತ್ವಾಕಾಂಕ್ಷಿಯೊಂದಿಗೆ ದೂರದ ಊರುಗಳಿಂದ ವಿದ್ಯಾಭ್ಯಾಸಕ್ಕಾಗಿ ನಿತ್ಯವೂ ಸಾವಿರಾರು ಮಕ್ಕಳು ನಗರ-ಪಟ್ಟಣದ ಶಾಲಾ-ಕಾಲೇಜುಗಳಿಗೆ ಬರುತ್ತಿದ್ದಾರೆ. ವಿದ್ಯೆ ಕಲಿಯಲು ಬರುವ ಮಕ್ಕಳ ಬಗ್ಗೆ ಗೌರವವಿಲ್ಲದೆ ಸಾರಿಗೆ ಬಸ್ ನ ಕೆಲ ಸಿಬ್ಬಂದಿ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ. ಆ ಮಕ್ಕಳೂ ಸಂಸ್ಥೆಗೆ ಹಣ ಕಟ್ಟಿ ಸಂಚರಿಸುತ್ತಿದ್ದಾರೆ ಎನ್ನುವುದನ್ನು ಮರೆತು ಪುಕ್ಕಟೆಯಾಗಿ ಓಡಾಡುತ್ತಿದ್ದಾರೆ ಎಂಬಂತೆ ಸಾರಿಗೆ ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಈ ವಿಷಯ ಮೇಲಧಿಕಾರಿಗಳಿಗೆ ತಿಳಿದಿದ್ದರೂ ಜಾಣ ಕಿವುಡುತನ ಪ್ರದರ್ಶಿಸುತ್ತಿದ್ದಾರೆ.
ಚಾಲಕ–ನಿರ್ವಾಹಕರ ದರ್ಪ: ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳು ಬಸ್ ಹತ್ತದಂತೆ ತಡೆಯಲು ಕೆಲವು ಬಾರಿ ಬಸ್ ಚಾಲಕರು ಬಸ್‌ನ್ನು ನಿಗದಿತ ನಿಲ್ದಾಣದಿಂದ ಮುಂದಕ್ಕೆ ಹೋಗಿ ನಿಲ್ಲಿಸುವುದು, ಇಲ್ಲವೇ ನಿಲ್ದಾಣ ಒಂದಷ್ಟು ದೂರ ಇರುವಲ್ಲಿಯೇ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುವ ಟೆಕ್ನಿಕ್ ಪ್ರದರ್ಶಿಸುತ್ತಿದ್ದಾರೆ. ವಿದ್ಯಾರ್ಥಿ ಗಳೆಂದರೆ ಶತ್ರುಗಳಂತೆ ಕಾಣುವ ಮನೋಭಾವ ಹಲವರಲ್ಲಿದೆ. ಬಸ್ ಹತ್ತುವ ವಿದ್ಯಾರ್ಥಿಗಳನ್ನು ಕುರಿಗಳಂತೆ ಗದರಿಸುತ್ತಾ, ಅವರ ಮೇಲೆ ಕೈ ಮಾಡುತ್ತಾ ದರ್ಪ ಪ್ರದರ್ಶಿಸುತ್ತಿದ್ದಾರೆ.
ಸಾರಿಗೆ ಸಿಬ್ಬಂದಿಯ ಈ ವರ್ತನೆಯಿಂದ ಮಕ್ಕಳು ನಿಗದಿತ ಸಮಯಕ್ಕೆ ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಪಠ್ಯ ವಿಷಯಗಳನ್ನು ಕಲಿಯುವುದಕ್ಕೂ ತೊಂದರೆಯಾಗುತ್ತಿದೆ. ಆದರೂ, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಯಾರೂ ಚಿಂತಿಸದಿರುವುದು ದುರಂತದ ಸಂಗತಿ. ಹೊರರಾಜ್ಯಗಳಿಗೆ ತೆರಳುವ ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳ ಕೆಲ ನಿರ್ವಾಹಕರು ವಿದ್ಯಾರ್ಥಿಗಳಿಗೆ ಬಸ್‌ಪಾಸ್ ಪ್ರವೇಶವಿಲ್ಲ ಎಂಬ ಕುಂಟು ನೆಪ ಹೇಳುತ್ತಿದ್ದಾರೆ. ಈ ರೀತಿಯ ನಿಯಮವಿಲ್ಲದಿದ್ದರೂ ಸಂಸ್ಥೆಯ ಸಿಬ್ಬಂದಿಯೇ ಅದನ್ನು ಹುಟ್ಟು ಹಾಕಿಕೊಂಡು ವಿದ್ಯಾರ್ಥಿಗಳು ಬಸ್ ಹತ್ತದಂತೆ ತಡೆಯುತ್ತಿದ್ದಾರೆ. ಅದನ್ನು ಪ್ರಶ್ನಿಸುವ ಧೈರ್ಯವಿಲ್ಲದೆ ಬಸ್‌ಗಳಿಂದ ಮಕ್ಕಳು ದೂರವೇ ಉಳಿಯುತ್ತಿದ್ದಾರೆ.
ಕಲೆಕ್ಷನ್ ತೋರಿಸುವ ಉದ್ದೇಶ: ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್‌ಗಳನ್ನು ಹತ್ತುವುದಕ್ಕೆ ಅಡಚಣೆಯಾಗುತ್ತಿರುವು ದಕ್ಕೆ ಸಾರಿಗೆ ಸಂಸ್ಥೆ ಮೇಲಧಿಕಾರಿಗಳ ಪಾತ್ರವೂ ಇದೆ ಎನ್ನುವುದು ನಂಬಲಾರ್ಹ ಮೂಲಗಳಿಂದ ತಿಳಿದುಬಂದಿದೆ. ಏಕೆಂದರೆ, ಈ ಮಾರ್ಗದ ಬಸ್‌ನಲ್ಲಿ ಇಂತಿಷ್ಟು ಕಲೆಕ್ಷನ್ ತೋರಿಸಬೇಕೆಂಬ ಅಲಿಖೀತ ನಿಯಮವನ್ನು ಸಾರಿಗೆ ನಿರ್ವಾಹಕರ ಮೇಲೆ ಬಲವಂತವಾಗಿ ಅಧಿಕಾರಿಗಳು ಹೇರಿರುತ್ತಾರೆ. ಇದರ ನೇರ ಪರಿಣಾಮ ವಿದ್ಯಾರ್ಥಿ ಬಸ್‌ಪಾಸ್ ಹೊಂದಿರುವ ಮಕ್ಕಳ ಮೇಲೆ ಬೀರುತ್ತಿದೆ. ಶಾಲಾ-ಕಾಲೇಜು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಹತ್ತಿದರೆ ನಿಗದಿಯಷ್ಟು ಕಲೆಕ್ಷನ್ ಆಗುವುದಿಲ್ಲ. ಬಸ್ ತುಂಬಿರುವುದನ್ನು ನೋಡಿ ಪ್ರಯಾಣಿಕರು ಆ ಬಸ್‌ಗೆ ಹತ್ತುವುದಿಲ್ಲ. ಇದೇ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಬಸ್ ಹತ್ತುವುದಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ. ಆದಾಯವನ್ನೇ ಗುರಿಯಾಗಿಸಿಕೊಂಡಿರುವ ಸಾರಿಗೆ ಸಂಸ್ಥೆ ವಿದ್ಯಾರ್ಥಿಗಳ ಬಗ್ಗೆ ನಿಷ್ಠುರವಾಗಿ ನಡೆದು ಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಪ್ರಶ್ನೆಯಾಗಿದೆ.
ಇಂತಹ ವಿಷಯಗಳು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳವರೆಗೆ ತಲುಪು ವುದೇ ಇಲ್ಲ. ಸಾರಿಗೆ ಸಂಸ್ಥೆ ಸಿಬ್ಬಂದಿ ವರ್ತನೆ ಬಗ್ಗೆ ಡಿಪೋ ಮ್ಯಾನೇಜರ್‌ಗೆ ಕೊಡುವ ದೂರುಗಳೆಲ್ಲವೂ ಕಸದಬುಟ್ಟಿ ಸೇರುತ್ತಿವೆ. ವಿದ್ಯಾರ್ಥಿಗಳ ವಿರುದ್ಧ ದುಷ್ಟತನದಿಂದ ವರ್ತಿಸುವ ಸಾರಿಗೆ ಸಿಬ್ಬಂದಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಇವರಿಬ್ಬರ ನಡುವಿನ ಸಂಗ್ರಾಮ ಮೌನವಾಗಿಯೇ ಮುಂದುವರಿದಿದೆ.
-ಮಂಡ್ಯ ಮಂಜುನಾಥ್