Advertisement

ವರ್ಗಾವಣೆ ಹಿಂದೆ “ಜಾಣ ನಡೆ’

11:11 PM Aug 06, 2019 | Lakshmi GovindaRaj |

ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 12 ದಿನಗಳಾಗಿದ್ದು, ಐಪಿಎಸ್‌, ಐಎಎಸ್‌, ಕೆಎಎಸ್‌ ಸೇರಿ 50ಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆಯಾಗಿದೆ. ಸಂಪುಟ ರಚನೆಗೂ ಮುನ್ನವೇ ಆಯಕಟ್ಟಿನ ಹುದ್ದೆಗಳಿಗೆ ಅಧಿಕಾರಿಗಳ ನಿಯೋಜನೆ ಹಿಂದೆ ಯಡಿಯೂರಪ್ಪ ಹಾಗೂ ಪಕ್ಷದ ಹೈಕಮಾಂಡ್‌ನ‌ ಜಾಣ ನಡೆ ಇದ್ದಂತಿದೆ!

Advertisement

ಸಂಪುಟ ರಚನೆಗೂ ಮುನ್ನವೇ ಪ್ರಮುಖ ಹುದ್ದೆಗಳಿಗೆ ಆಯ್ದ ಅಧಿಕಾರಿಗಳನ್ನು ನಿಯೋಜಿಸಿದರೆ ಸಂಪುಟ ರಚನೆ ಬಳಿಕವೂ ಆ ಅಧಿಕಾರಿಗಳು ಮುಖ್ಯಮಂತ್ರಿಗಳ ನೇರ ಮೇಲ್ವಿಚಾರಣೆಯಲ್ಲೇ ಕಾರ್ಯ ನಿರ್ವಹಿಸಲಿದ್ದು, ಆಡಳಿತದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗಲಿದೆ. ಇನ್ನೊಂದೆಡೆ ಉತ್ತಮ ಆಡಳಿತಕ್ಕೆ ಪೂರಕವಾಗಿ ಆಯಕಟ್ಟಿನ ಹುದ್ದೆಗಳಿಗೆ ಉತ್ತಮ ಅಧಿಕಾರಿಗಳನ್ನು ನಿಯೋಜಿಸುವಂತೆ ಹೈಕಮಾಂಡ್‌ ಸೂಚನೆ ಹಿನ್ನೆಲೆಯಲ್ಲಿ ಸಂಪುಟ ರಚನೆಗೂ ಮೊದಲೇ ಅಧಿಕಾರಿಗಳ ವರ್ಗಾವಣೆ ನಡೆದಂತಿದೆ ಎನ್ನುತ್ತವೆ ಮೂಲಗಳು.

ಮೈತ್ರಿ ಸರ್ಕಾರ ಪತನಾನಂತರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್‌.ಯಡಿಯೂರಪ್ಪ ಅವರು 12 ದಿನ ಆಡಳಿತಾವಧಿ ನಡೆಸಿದ್ದು, ಬರೋಬ್ಬರಿ 50ಕ್ಕೂ ಹೆಚ್ಚು ಮಂದಿಯ ವರ್ಗಾವಣೆ ಆದೇಶ ಹೊರಬಿದ್ದಿದೆ. ಸರ್ಕಾರ ಬದಲಾದಾಗ ಸುಗಮ ಆಡಳಿತಕ್ಕಾಗಿ ಆಯಕಟ್ಟಿನ ಹುದ್ದೆಯಲ್ಲಿನ ಅಧಿಕಾರಿಗಳ ಬದಲಾವಣೆ ಸಹಜ. ಆದರೆ ಅಲ್ಪಾವಧಿಯಲ್ಲೇ ದೊಡ್ಡ ಸಂಖ್ಯೆಯಲ್ಲಿ ಅಧಿಕಾರಿಗಳು ಅದರಲ್ಲೂ ಐಪಿಎಸ್‌ ಅಧಿಕಾರಿಗಳ ವರ್ಗಾವಣೆಯಾಗಿರುವುದು ಕುತೂಹಲ ಮೂಡಿಸಿದೆ.

ಐಪಿಎಸ್‌ ವರ್ಗಾವಣೆಗೆ ಒತ್ತು: ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ಹೆಚ್ಚಾಗಿದೆ. 28ಕ್ಕೂ ಹೆಚ್ಚು ಐಪಿಎಸ್‌ ಅಧಿಕಾರಿಗಳ ವರ್ಗಾವಣೆಯಾಗಿದೆ. ಮುಖ್ಯವಾಗಿ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ), (ರಾಜ್ಯ ಗುಪ್ತಚರ ವಿಭಾಗ), ಬೆಂಗಳೂರು, ಮಂಗಳೂರು ನಗರ ಪೊಲೀಸ್‌ ಆಯುಕ್ತರು, ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ವ್ಯಾಪ್ತಿಯ ಆಯಕಟ್ಟಿನ ಹುದ್ದೆ, ಎಸಿಬಿ ಇತರೆ ಆಯಕಟ್ಟಿನ ಹುದ್ದೆಯಲ್ಲಿದ್ದ ಅಧಿಕಾರಿಗಳ ವರ್ಗಾವಣೆಯಾಗಿದೆ.

ಅಧಿಕಾರಿಗಳು ಯಾವುದೇ ರಾಜಕೀಯ ಪಕ್ಷ, ಸಿದ್ಧಾಂತದ ಪರವಾಗಿ ಕಾರ್ಯ ನಿರ್ವಹಿಸದೆ ನಿಯಮಾನುಸಾರ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಹಾಗಿದ್ದರೂ ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗ ನಿಯೋಜನೆಗೊಂಡ ಅಧಿಕಾರಿಗಳ ಪೈಕಿ ಬಹಳಷ್ಟು ಮಂದಿ ಆ ಸರ್ಕಾರದ ನಿಲುವು, ಕಾರ್ಯ ವೈಖರಿ ಬಗ್ಗೆ ತುಸು ಮೃದು ಧೋರಣೆ ತೋರಲಿದ್ದಾರೆಂಬ ಮಾತಿದೆ. ಹೀಗಾಗಿ ಹೊಸ ಪಕ್ಷ ಅಧಿಕಾರಕ್ಕೆ ಬಂದಾಗ ಹಾಲಿ ಅಧಿಕಾರಿಗಳನ್ನು ಬದಲಾಯಿಸಿ ತಮಗೆ ಬೇಕಾದವರನ್ನು ನಿಯೋಜಿಸಿಕೊಳ್ಳುವುದು ಸಹಜ. ಅದರಂತೆ ಈಗಲೂ ನಡೆದಿದೆ ಎಂದು ರಾಜ್ಯ ಬಿಜೆಪಿಯ ಉನ್ನತ ಮೂಲಗಳು ಹೇಳಿವೆ.

Advertisement

ಮೃದು ಧೋರಣೆಯವರತ್ತ ಒಲವು: ಪಕ್ಷದ ಸಿದ್ಧಾಂತ, ಕಾರ್ಯ ವೈಖರಿ ಬಗ್ಗೆ ಮೃದು ಧೋರಣೆ ಉಳ್ಳವರು ಇಲ್ಲವೇ ತಟಸ್ಥ ಧೋರಣೆಯೊಂದಿಗೆ ಕಾರ್ಯ ನಿರ್ವಹಿಸುವ ಅಧಿಕಾರಿಗಳನ್ನು ನಿಯೋಜಿಸಿಕೊಳ್ಳುವುದು ನಡೆದು ಬಂದಿದೆ. ಕೆಲ ಅಧಿಕಾರಿಗಳು ಹಿಂದಿನ ಸರ್ಕಾರಗಳ ಅವಧಿಯಲ್ಲಿ ಆರ್‌ಎಸ್‌ಎಸ್‌, ಸಂಘ ಪರಿವಾರ, ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ, ಪೂರ್ವಾಗ್ರಹ ಪೀಡಿತವಾಗಿ ಕಾರ್ಯ ನಿರ್ವಹಿಸುವ ಉದಾಹರಣೆಗಳಿದ್ದರೆ ಅಂತಹವರ ವರ್ಗಾವಣೆಯಾದರೆ ಅಚ್ಚರಿಯಾಗದು. ಸುಗಮ ಆಡಳಿತ ಉದ್ದೇಶಕ್ಕಾಗಿ ಕೆಲ ಬದಲಾವಣೆ ಅನಿವಾರ್ಯ ಎಂದು ತಿಳಿಸಿವೆ.

ಜತೆಗೆ 10ಕ್ಕೂ ಹೆಚ್ಚು ಐಎಎಸ್‌ ಅಧಿಕಾರಿಗಳ ವರ್ಗಾವಣೆಯಾಗಿದೆ. ಬಿಡಿಎ ಆಯುಕ್ತರು, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ, ಮಂಡ್ಯ, ಶಿವಮೊಗ್ಗ ಜಿಲ್ಲಾಧಿಕಾರಿ ಸೇರಿ ಆಯ್ದ ಹುದ್ದೆಗಳ ಅಧಿಕಾರಿಗಳ ವರ್ಗಾವಣೆಯಾಗಿದೆ. ಆ ಮೂಲಕ ಆಡಳಿತಾತ್ಮಕ ಬದಲಾವಣೆ ಕಾರ್ಯಕ್ಕೆ ಚಾಲನೆ ದೊರಕಿದೆ. ಇದಕ್ಕೆ ಪೂರಕವಾಗಿ ಕೆಎಎಸ್‌ ಅಧಿಕಾರಿಗಳ ವರ್ಗಾವಣೆಯೂ ನಡೆದಿದೆ. ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆಯ ಆಯ್ದ ಹುದ್ದೆ ಅಧಿಕಾರಿಗಳ ಬದಲಾವಣೆಯೂ ಮುಂದುವರಿದಿದೆ.

ಪರೋಕ್ಷ ನಿಯಂತ್ರಣ ಲೆಕ್ಕಾಚಾರ: ಸಂಪುಟ ರಚನೆಗೂ ಮೊದಲೇ ಆಯಕಟ್ಟಿನ ಹುದ್ದೆಗಳಿಗೆ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ನಿಯೋಜಿಸಿದರೆ ಸಂಪುಟ ರಚನೆ ಬಳಿಕ ಸಚಿವರಾದವರು ತಕ್ಷಣ ಆ ಅಧಿಕಾರಿಗಳನ್ನು ಬದಲಾಯಿಸುವುದು ಕಷ್ಟಸಾಧ್ಯ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಆಗಿರುವ ವರ್ಗಾವಣೆಯನ್ನು ತಕ್ಷಣ ಬದಲಾಯಿಸುವಂತೆ ಒತ್ತಡ ಹೇರುವುದು ಕಷ್ಟ. ಇದರಿಂದ ಆ ಅಧಿಕಾರಿಗಳು ಅದೇ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಇದರಿಂದ ಆ ಇಲಾಖೆಯ ಮೇಲೆ ಪರೋಕ್ಷ ನಿಯಂತ್ರಣವಿರಲಿದೆ. ಇದೇ ಕಾರಣಕ್ಕೆ ವರ್ಗಾವಣೆ ಪ್ರಕ್ರಿಯೆ ನಡೆದಂತಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಹೈಕಮಾಂಡ್‌ ಸೂಚನೆ: ರಾಜ್ಯದಲ್ಲಿ 2008ರಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ ಭ್ರಷ್ಟಾಚಾರ, ದುರಾಡಳಿತ ಆರೋಪ ಕೇಳಿಬಂದಿತ್ತು. ಬಳಿಕ ಬಿಜೆಪಿ ಅಧಿಕಾರ ಕೂಡ ಕಳೆದುಕೊಂಡಿತ್ತು. ಆ ಹಿನ್ನೆಲೆಯಲ್ಲಿ ಈ ಬಾರಿ ಉತ್ತಮ ಆಡಳಿತ ನೀಡುವ ಮೂಲಕ ರಾಜ್ಯದ ಜನರ ವಿಶ್ವಾಸ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಹಾಗಾಗಿ ಆಯಕಟ್ಟಿನ ಹುದ್ದೆಗಳಿಗೆ ಸಮರ್ಥ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಹೈ ಕಮಾಂಡ್‌ನಿಂದಲೂ ಸೂಚನೆ ಇದ್ದಂತಿದೆ. ಆ ಕಾರಣಕ್ಕಾಗಿಯೇ ವರ್ಗಾವಣೆ ಪ್ರಕ್ರಿಯೆ ತ್ವರಿತವಾಗಿ ನಡೆಯುತ್ತಿದೆ ಎಂದು ತಿಳಿಸಿವೆ.

ಆಡಳಿತ ಯಂತ್ರ ಸುಗಮಕ್ಕೆ ಪ್ರಯತ್ನ: ದೇಶದ 18 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದ್ದು, ಆಡಳಿತ ಹೇಗಿರಬೇಕೆಂಬ ಬಗ್ಗೆ ಸ್ಪಷ್ಟವಾದ ಸಿದ್ಧ ವಿಧಾನವೊಂದನ್ನು ರಚಿಸಲಾಗಿದೆ. ಅದೇ ಮಾದರಿಯನ್ನು ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದ್ದು, ರಾಜ್ಯದಲ್ಲೂ ಇದೇ ಮಾದರಿ ಅಳವಡಿಕೆ ಪ್ರಯತ್ನ ನಡೆಯಲಿದೆ. ಮುಖ್ಯವಾಗಿ ಮುಂದಿನ ಯೋಜನೆಯನ್ನು ನಿರ್ದಿಷ್ಟವಾಗಿಟ್ಟುಕೊಳ್ಳುವುದು. ಭವಿಷ್ಯದ ನಾಯಕರನ್ನು ಗುರುತಿಸಿ ಅವರಿಗೆ ಈಗಿನಿಂದಲೇ ಸೂಕ್ತ ಜವಾಬ್ದಾರಿ ನೀಡುವುದು. ಸಮರ್ಥ, ಉತ್ಸಾಹಿ, ಕ್ರಿಯಾಶೀಲ ವ್ಯಕ್ತಿತ್ವದ ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಿ ಉತ್ತಮ ಆಡಳಿತಕ್ಕೆ ಅವಕಾಶ ಕಲ್ಪಿಸುವ ಪ್ರಯತ್ನ ನಡೆಯಲಿದೆ. ಆಯಕಟ್ಟಿನ ಹುದ್ದೆಗಳಿಗೆ ಸೂಕ್ತ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಆಡಳಿತ ಯಂತ್ರ ಸುಗಮವಾಗಿ ನಡೆಯುವ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭವಾಗಿದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದರು.

* ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next