Advertisement

ಜೂನ್ 12ರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭ

11:02 PM Jun 01, 2019 | Lakshmi GovindaRaj |

ಬೆಂಗಳೂರು: ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮುಹೂರ್ತ ನಿಗದಿ ಮಾಡಿ, ಮಾರ್ಗಸೂಚಿ, ವೇಳಾಪಟ್ಟಿ ಬಿಡುಗಡೆ ಮಾಡಿದೆ.

Advertisement

ಕಳೆದ ಬಾರಿ 72 ಸಾವಿರ ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಿ, ಚಾತಕ ಪಕ್ಷಿಯಂತೆ ಕೌನ್ಸೆಲಿಂಗ್‌ಗೆ ಕಾದು ಕುಳಿತಿದ್ದರು. ಕರ್ನಾಟಕ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ ತಿದ್ದುಪಡಿ ಹಾಗೂ ವಿಧಾನಸಭೆ ಚುನಾವಣೆ ಸೇರಿ ಹಲವು ಕಾರಣಗಳಿಂದಾಗಿ ಮೂರ್‍ನಾಲ್ಕು ವೇಳಾಪಟ್ಟಿಯ ನಂತರವೂ ವರ್ಗಾವಣೆ ಪ್ರಕ್ರಿಯೆ ನಡೆದಿರಲಿಲ್ಲ.

ಈಗ ಜೂನ್‌ 12ರಿಂದ ಆನ್‌ಲೈನ್‌ ಮೂಲಕ ಹೊಸದಾಗಿ ಅರ್ಜಿ ಸ್ವೀಕರಿಸಲಾಗುತ್ತದೆ ಎಂದು ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಇದಕ್ಕಾಗಿ ಶಿಕ್ಷಕರ ಮಾಹಿತಿ ತಂತ್ರಾಂಶ (ಟಿಡಿಎಸ್‌)ದಲ್ಲಿ ಸೇವಾ ಮತ್ತಿತರ ಅಗತ್ಯ ವಿವರಗಳನ್ನು ತುಂಬಲು ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಜೂ.12ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅರ್ಜಿಗಳೊಂದಿಗೆ ಸಂಬಂಧಪಟ್ಟ ದಾಖಲೆಗಳನ್ನು ಇಲಾಖೆಯ ಶಿಕ್ಷಕರ ವರ್ಗಾವಣೆ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ದಾಖಲೆಗಳು ಸ್ಪಷ್ಟವಾಗಿ ಕಾಣುವಂತಿರಬೇಕು. ವರ್ಗಾವಣೆ ಪ್ರಕ್ರಿಯೆ ಹಾಗೂ ದಾಖಲೆಗಳನ್ನು ಸಲ್ಲಿಸುವ ಕುರಿತ ಹೆಚ್ಚಿನ ಮಾಹಿತಿಗಾಗಿ ಇಲಾಖೆ ವೆಬ್‌ಸೈಟ್‌ chooleducation.kar.nic.in/ ನೋಡುವಂತೆ ಶಿಕ್ಷಣ ಇಲಾಖೆ ತಿಳಿಸಿದೆ.

2018ರ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸ್ಥಳ ಆಯ್ಕೆ ಮಾಡಿಕೊಂಡಿರುವ ಶಿಕ್ಷಕರಿಗೆ ಪ್ರಸ್ತುತ ವರ್ಗಾವಣೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕಳೆದ ಬಾರಿ ಅರ್ಜಿ ಸಲ್ಲಿಸಿದ್ದ ಸುಮಾರು 72 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಜಿಗಳನ್ನು ಹೊಸ ನಿಯಮದಂತೆ ಪರಿಗಣಿಸುವುದರಿಂದ ತಿದ್ದುಪಡಿ ಮಾಡಿಕೊಳ್ಳುವಂತೆ ತಿಳಿಸಿದೆ.

Advertisement

ಶಿಕ್ಷಕರ ವರ್ಗಾವಣೆಯಲ್ಲಿ “ಜ್ಯೇಷ್ಠತಾ ಘಟಕ’ದ ಆಧಾರದಲ್ಲಿ ವರ್ಗಾವಣೆ ಮಾಡಲಾಗುತ್ತದೆ. ಹೆಚ್ಚುವರಿ ಶಿಕ್ಷಕರು, ಕೋರಿಕೆ ವರ್ಗಾವಣೆ, ಕಡ್ಡಾಯ ವರ್ಗಾವಣೆಗಳನ್ನು ಶೇ.5ರಷ್ಟು ಮತ್ತು ಶೇ.3ರಷ್ಟು ಅಂತರ ಘಟಕ ಕೋರಿಕೆಗೆ ವರ್ಗಾವಣೆ ಮಾಡಲಾಗುತ್ತದೆ. ದೂರುಗಳಿಗೆ ಸಂಬಂಧಿಸಿದ ಪ್ರಕರಣಗಳ ವರ್ಗಾವಣೆಗೆ ಯಾವುದೇ ಮಿತಿ ಹಾಕಿಲ್ಲ. ಒಂದೇ ವಲಯದಲ್ಲಿ ಕನಿಷ್ಠ ಹತ್ತು ವರ್ಷಗಳ ನಿರಂತರ ಸೇವೆಯನ್ನು ಗರಿಷ್ಠ ಸೇವೆ ಹಾಗೂ ಮೂರು ವರ್ಷದ ಸೇವೆಯನ್ನು ಕನಿಷ್ಠ ಸೇವೆ ಎಂದು ಪರಿಗಣಿಸಲಾಗಿದೆ. ಪ್ರತಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಪರಿಗಣಿಸಿ ಶಾಲೆಗೆ ವೃಂದ ನಿಗದಿಪಡಿಸಿಬೇಕು.

ಹಿಂದಿ ಮತ್ತು ದೈಹಿಕ ಶಿಕ್ಷಕರನ್ನು ನೇಮಿಸುವ ಸಂದರ್ಭದಲ್ಲಿ 200ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಮಕ್ಕಳ ಶಾಲೆಗೆ ಮೊದಲ ಆದ್ಯತೆ ಮತ್ತು ನಂತರ ಗರಿಷ್ಠ ಸಂಖ್ಯೆಯನ್ನು ಪರಿಗಣಿಸಿ ಆದ್ಯತೆ ಮೇರೆಗೆ ಶಾಲೆಗಳಿಗೆ ನಿಗದಿ ಮಾಡಬೇಕು. ಖಾಲಿ ಹುದ್ದೆಗಳನ್ನು ಗುರುತಿಸುವ ಸಂದರ್ಭದಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನಿಗದಿ ಮಾಡುವಂತೆ ತಿಳಿಸಲಾಗಿದೆ.

2018ರ ವರ್ಗಾವಣೆ ಪ್ರಕ್ರಿಯೆ ಬಳಿಕ ನಂತರ ಖಾಲಿ ಉಳಿದಿರುವ ಹುದ್ದೆಗಳನ್ನು ಪರಿಗಣಿಸಬೇಕು. ಹೈದರಾಬಾದ್‌ ಸ್ಥಳೀಯ ವೃಂದಕ್ಕೆ ಮತ್ತು ಉಳಿದ ವೃಂದಕ್ಕೆ ಆಯ್ಕೆಯಾಗಿರುವ ಶಿಕ್ಷಕರು ಕನಿಷ್ಠ 10 ವರ್ಷಗಳವರೆಗೆ ಬೇರೆ ಸ್ಥಳಗಳಿಗೆ ತೆರಳಲು ಅವಕಾಶ ಇರುವುದಿಲ್ಲ. ಹೈ-ಕ ಸ್ಥಳೀಯ ಅಭ್ಯರ್ಥಿಗಳಾಗಿದ್ದಲ್ಲಿ ಅವಕಾಶವಿದೆ.

ಹೊಸ ತಿದ್ದುಪಡಿಯಂತೆ ವರ್ಗಾವಣೆ: ಫೆಬ್ರವರಿಯಲ್ಲಿ ನಡೆದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ ಕರ್ನಾಟಕ ಸಿವಿಲ್‌ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರ) ತಿದ್ದುಪಡಿ ವಿಧೇಯಕ-2019ರಂತೆಯೇ ವರ್ಗಾವಣೆ ನಡೆಯಲಿದೆ.

ಕೌನ್ಸೆಲಿಂಗ್‌ ಮೂಲಕ ಭರ್ತಿಯಾಗದೇ ಖಾಲಿ ಉಳಿದ ಸ್ಥಾನಕ್ಕೆ ಸರ್ಕಾರದಿಂದ ನೇರ ವರ್ಗಾವಣೆ ಮಾಡಲಾಗುತ್ತದೆ. ಶಿಕ್ಷಕರು ವರ್ಗಾವಣೆ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಇದ್ದ ಕನಿಷ್ಠ ಸೇವಾವಧಿಯನ್ನು ಐದು ವರ್ಷದಿಂದ ಮೂರು ವರ್ಷಕ್ಕೆ ಇಳಿಸಲಾಗಿದೆ. ಪದವಿಪೂರ್ವ ಶಿಕ್ಷಣ ಉಪನ್ಯಾಸಕರ ವರ್ಗಾವಣೆಗೆ ಸಂಬಂಧಿಸಿದಂತೆ ನಗರಪಾಲಿಕೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳು ನಗರ ಪ್ರದೇಶದ ವ್ಯಾಪ್ತಿಯೊಳಗೆ ಸೇರುವುದಿಲ್ಲ.

ಎ ವಲಯ (ನಗರ ಪ್ರದೇಶ)ದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸಿ ವಲಯ (ಗ್ರಾಮೀಣ ಪ್ರದೇಶ)ಕ್ಕೆ ಶೇ.5ರಷ್ಟು ಮಿತಿಯಲ್ಲಿ ಕಡ್ಡಾಯ ವರ್ಗಾವಣೆ ಮಾಡಲಾಗಿದೆ. ಒಬ್ಬ ಶಿಕ್ಷಕ ಅಥವಾ ಆ ಶಿಕ್ಷಕ ದಂಪತಿ ಅಥವಾ ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಲ್ಲಿ ಮತ್ತು ಅದಕ್ಕೆ ವೈದ್ಯಕೀಯ ಚಿಕಿತ್ಸೆ ಎಲ್ಲಿಯೂ ದೊರೆಯದಿದ್ದಲ್ಲಿ ದಂಪತಿ ಶಿಕ್ಷಕರ ವರ್ಗಾವಣೆಗಾಗಿ ಒಂದೇ ಸ್ಥಳದಲ್ಲಿ ನಿಯೋಜಿಸಲು ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗುತ್ತದೆ.

ದಂಪತಿ ಶಿಕ್ಷಕರಲ್ಲಿ ಯಾರಾದರೂ ಒಬ್ಬರು ಸರ್ಕಾರಿ ಅಥವಾ ಸಾರ್ವಜನಿಕ ವಲಯದ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರೆ ಆ ಪ್ರದೇಶಕ್ಕೆ ವರ್ಗಾವಣೆ ಮಾಡಲು ತಿದ್ದುಪಡಿ ಹೊಸದಾಗಿ ತರಲಾಗಿದೆ. ಅದರಂತೆಯೇ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next