Advertisement

ರೈಲು ನಿಲ್ದಾಣದಲ್ಲಿ ಪಾರ್ಕಿಂಗ್‌ ಇಲ್ಲದೇ ಪರದಾಟ

12:53 PM May 28, 2019 | Team Udayavani |

ಅರಸೀಕೆರೆ: ಹಾಸನ ಜಿಲ್ಲೆಯಲ್ಲಿಯೇ ಅರಸೀಕೆರೆ ನಗರದ ರೈಲ್ವೆ ನಿಲ್ದಾಣ ಪ್ರಮುಖ ಜಂಕ್ಷನ್‌ ಕೇಂದ್ರವಾಗಿದ್ದು, ಪ್ರತಿನಿತ್ಯ ನೂರಕ್ಕೂ ಹೆಚ್ಚಿನ ರೈಲುಗಾಡಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಸಾವಿರಾರು ಪ್ರಯಾಣಿಕರು ಇಲ್ಲಿಂದ ಬೇರೆ ಬೇರೆ ಊರುಗಳಿಗೆ ಸಂಚರಿಸುತ್ತಾರೆ. ಆದರೆ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಪ್ರಯಾಣಿಕರಿಗೆ ಸೂಕ್ತವಾದ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೇ ತೀವ್ರ ಸಮಸ್ಯೆ ಉಂಟಾಗಿದೆ.

Advertisement

ಆರ್‌ಪಿಎಫ್ ಕಿರುಕುಳ: ನಿಲ್ದಾಣದ ಮುಂದೆ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ರೈಲ್ವೆ ಸುರಕ್ಷಾ ದಳ (ಆರ್‌ಪಿಎಫ್) ದ ಕೆಲವು ಅಧಿಕಾರಿಗಳು ಕಾನೂನು ಪರಿ ಪಾಲನೆ ಹೆಸರಿನಲ್ಲಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ವಾಹನಗಳು ಒಳಭಾಗಕ್ಕೆ ಹೋಗದಂತೆ ಸಿಮೆಂಟ್ ಕಟ್ಟೆಯನ್ನು ಕಟ್ಟಿ ನೋ ಪಾರ್ಕಿಂಗ್‌ ಎಂಬ ನಾಮಫ‌ಲಕವನ್ನು ಹಾಕಿದ್ದಾರೆ.

ರೈಲ್ವೆ ಪೊಲೀಸ್‌ ಠಾಣೆಯ ಬಳಿಯಿರುವ ಸಿಮೆಂಟ್ ಕಟ್ಟೆಯ ಮುಂಭಾಗದಲ್ಲಿ ಆರ್‌ಪಿಎಫ್ ಸಿಬ್ಬಂದಿ ಬೈಕ್‌ಗಳು ನಿಂತಿರುತ್ತವೆ. ಇದನ್ನು ನೋಡಿದ ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನಗಳನ್ನು ತಾತ್ಕಾಲಿ ಕವಾಗಿ ನಿಲ್ಲಿಸಿ ಊರಿಗೆ ಕಳುಹಿಸುವ ಪ್ರಯಾಣಿಕರನ್ನು ರೈಲು ನಿಲ್ದಾಣಕ್ಕೆ ಬಿಟ್ಟು ಬರುವ ಐದು ನಿಮಿಷದೊಳಗೆ ರೈಲ್ವೆ ಸುರಕ್ಷಾ ದಳದ ಕೆಲವು ಅಧಿಕಾರಿಗಳು ಕೆಲವು ದ್ವಿಚಕ್ರ ವಾಹನಗಳಿಗೆ ಕಬ್ಬಿಣದ ಸರಪಳಿಯಿಂದ ಬೀಗ ಹಾಕಿ ತಮ್ಮ ಠಾಣೆಗೆ ಬಂದು ನೋ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದಕ್ಕೆ ದಂಡ ಕಟ್ಟುವಂತೆ ಹೇಳಿ ಹೋಗು ತ್ತಾರೆ. ಇದರಿಂದ ಮಾನಸಿಕ ತೊಂದರೆಗೆ ಒಳಗಾಗುವ ವ್ಯಕ್ತಿಗಳು ಹಾಗೂ ಪ್ರಯಾಣಿಕರು ಟಿಕೆಟ್ ಪಡೆದಿ ದ್ದರೂ. ತಮ್ಮ ಪ್ರಯಾಣವನ್ನು ಮುಂದುವರಿಸಲು ಸಾಧ್ಯವಾಗದೇ ರೈಲ್ವೆ ಸುರಕ್ಷಾ ದಳದ ಕಚೇರಿ ತೆರಳಿ ಅಲ್ಲಿ ಅಧಿಕಾರಿಗಳು ಕೇಳುವ ದಂಡದ ಮೊತ್ತವನ್ನು ನೀಡಿ ತಮ್ಮ ದ್ವಿಚಕ್ರ ವಾಹನವನ್ನು ಬಂಧ ಮುಕ್ತಗೊಳಿಸಿ ಕೊಳ್ಳುವ ವೇಳೆಗೆ ರೈಲು ನಿಲ್ದಾಣ ಬಿಟ್ಟಿರುತ್ತದೆ.ಇದರಿಂದ ನೋ ಪಾರ್ಕಿಂಗ್‌ ಕಾರಣ ದಂಡ ಕಟ್ಟಿದ ವ್ಯಕ್ತಿಯು ಹಣವೂ ವ್ಯರ್ಥ ವಾಗುತ್ತದೆ. ಅಲ್ಲದೇ ಪ್ರಯಾಣಿಕರು ಖರೀದಿಸಿದ್ದ ಟಿಕೆಟ್ ಹಣವೂ ವ್ಯರ್ಥ ವಾಗುತ್ತದೆ. ದಂಡ ಪಡೆದ ಮೊತ್ತಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳು ರಶೀದಿ ನೀಡದೇ ವಂಚಿಸುತ್ತಿದ್ದಾರೆಂದು ಸಾರ್ವಜನಿಕರು ಆಪಾದಿಸಿದ್ದಾರೆ.

ಸಂಬಂಧಪಟ್ಟ ರೈಲ್ವೆ ಇಲಾಖೆ ಉನ್ನತಮಟ್ಟದ ಅಧಿಕಾರಿಗಳು ಗಂಭೀರವಾದ ಸಮಸ್ಯೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ನಿಲ್ದಾಣದ ಬಳಿ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕಾಗಿದೆ.

ಆರ್‌ಪಿಎಫ್ ಅಧಿಕಾರಿಗಳಿಂದ ಬೆದರಿಕೆ:

ಸಾರ್ವಜನಿಕರ ಆರೋಪದ ಮೇಲೆ ಪಾರ್ಕಿಂಗ್‌ ವ್ಯವಸ್ಥೆ ಬಗ್ಗೆ ಹಾಗೂ ದಂಡ ವಸೂಲಿ ಬಗ್ಗೆ ಮಾಹಿತಿ ಪಡೆಯಲು ಠಾಣೆಗೆ ಹೋದ ಪತ್ರಕರ್ತರಿಗೂ ಇಲ್ಲಿನ ಸಮವಸ್ತ್ರ ಧರಿಸದ ಇಬ್ಬರು ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ. ತಮ್ಮ ಅಪ್ಪಣೆ ಇಲ್ಲದೇ ಠಾಣೆ ಪ್ರವೇಶ ಮಾಡಿದ್ದಲ್ಲದೇ ನೋ ಪಾರ್ಕಿಂಗ್‌ ವ್ಯವಸ್ಥೆ ಬಗ್ಗೆ ತಮ್ಮನ್ನೂ ಪ್ರಶ್ನೆ ಮಾಡಿದ್ದಕ್ಕೆ ಪತ್ರಕರ್ತನ ವಿರುದ್ಧ ಪ್ರಕರಣ ದಾಖಲು ಮಾಡಿ ಕೋರ್ಟಿಗೆ ಕರೆಕೊಂಡು ಹೋಗಿ ಅಲ್ಲಿ ದಂಡ ಹಾಕಿಸುವ ಬೆದರಿಕೆ ಹಾಕಿದ್ದಾರೆ. ಪತ್ರಕರ್ತರು ಏನು ಮಾಡಲು ಸಾಧ್ಯ, ನಾವುಗಳು ಏನು ಬೇಕಾದರೂ ಮಾಡಿ ಪ್ರಕರಣ ದಾಖಲಿಸಿ ನಿಮ್ಮನ್ನೂ ಜೈಲಿಗೆ ಕಳುಹಿಸಲು ನಮಗೆ ಅಧಿಕಾರವಿದೆ. ಸುಮ್ಮನೆ ಕುಳಿತುಕೊಳ್ಳಬೇಕೆಂದು ಬೆದರಿಕೆ ಹಾಕಿದ್ದಾರೆ. ಅರ್ಧ ಗಂಟೆ ಕಳೆದರೂ ಇಲ್ಲಿನ ಕಚೇರಿಯ ಮುಖ್ಯಾಧಿಕಾರಿಗಳು ಬಾರದ ಕಾರಣ ಈ ನಿಲ್ದಾಣದ ಪಾರ್ಕಿಂಗ್‌ ಸಮಸ್ಯೆಯನ್ನು ಬಗೆಹರಿಸುವುದು ರೈಲ್ವೆ ಇಲಾಖೆ ಅಧಿಕಾರಿ ಗಳಿಗೆ ಮತ್ತು ನಮಗೂ ಬಿಟ್ಟ ವಿಷಯ. ಇಲ್ಲದಕ್ಕೆ ತಲೆ ಹಾಕಬೇಡಿ ಎಂದಿದ್ದಾರೆ. ಈ ಇಬ್ಬರೂ ಅಧಿಕಾರಿಗಳು ಮಾತ್ರ ತಮ್ಮ ಹೆಸರು ಹೇಳಲಿಲ್ಲ. ಸಮವಸ್ತ್ರ ಧರಿಸಿಕೊಂಡು ಮಾತನಾಡಲಿಲ್ಲ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಿಬ್ಬಂದಿ ಮಾತ್ರ ಮೌನಕ್ಕೆ ಶರಣಾಗಿದ್ದರು.
● ರಾಮಚಂದ್ರ
Advertisement
Advertisement

Udayavani is now on Telegram. Click here to join our channel and stay updated with the latest news.

Next