Advertisement

ಕನ್ನಡದ ಬಗ್ಗೆಯೇ ಅರಿವು ತರಬೇಕಾದ್ದು ದುರಂತ

11:35 AM Nov 08, 2017 | |

ಬೆಂಗಳೂರು: 11ನೇ ಶತಮಾನದಲ್ಲಿ ಸಾಮಾಜಿಕ ಜಾಗೃತಿ ಕುರಿತು ವಚನಕಾರರಲ್ಲಿ ಮೂಡಿದ ಅರಿವು ಇದೀಗ ಕನ್ನಡ ಮನಸ್ಸುಗಳಲ್ಲಿ ಬರಬೇಕು. ಇಲ್ಲದಿದ್ದರೆ ಕನ್ನಡ ಉಳಿವು ಅಸಾಧ್ಯ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ಕಾರ್ಮಿಕ ಲೋಕ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕರಿಗೆ ಅಭಿನಂದಿಸಿ ಮತ್ತು ಕಾರ್ಮಿಕರಿಗೆ ಸನ್ಮಾನಿಸಿ ಮಾತನಾಡಿದರು.

ಸಾಮಾಜಿಕ ಕ್ರಾಂತಿಗೆ ವಚನಕಾರರಲ್ಲಿ ಮೂಡಿದ ಚಿಂತನೆ ಪ್ರಮುಖ ಕಾರಣ. ಕನ್ನಡ ನಾಡಿನಲ್ಲಿ ಕನ್ನಡದ ಉಳಿವಿಗೆ ಅಂತಹದ್ದೇ ಮಾದರಿಯಲ್ಲಿ ಕನ್ನಡ ಮನಸ್ಸುಗಳು ಜಾಗೃತವಾಗಬೇಕಿದೆ ಎಂದು ಹೇಳಿದರು.

ಹಿರಿಯ ಕವಿ ಡಾ.ದೊಡ್ಡರಂಗೇಗೌಡ ಮಾತನಾಡಿ, ಕನ್ನಡಪರ ಹೋರಾಟಗಾರರು ಮನೆ, ಮನೆಗೆ ಹೋಗಿ ಅರಿವು ಮೂಡಿಸುವ ಸ್ಥಿತಿ ಬಂದಿದೆ. ರಾಜ್ಯದಲ್ಲಿ ಮಾತೃಭಾಷೆ ಕನ್ನಡಕ್ಕೆ ಬಂದಿರುವ ಸ್ಥಿತಿ ಬೇಸರ ತರಿಸುತ್ತದೆ. ಕನ್ನಡಿಗರು ತಮ್ಮ ಮಕ್ಕಳಿಗೆ ಆರಂಭದಲ್ಲಿಯೇ ಮಾತೃಭಾಷೆ ಕುರಿತು ತಿಳಿಸಿಕೊಡಬೇಕು. ಅವರಲ್ಲಿ ಮನಪರಿವರ್ತನೆಗೆ ಪೂರಕವಾದ ವಾತಾವರಣ ಸೃಷ್ಟಿಸಬೇಕು ಎಂದರು. 

ಕನ್ನಡ ಉಳಿಸಿ, ಬೆಳೆಸುವ ಬಗ್ಗೆ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರ ನೇತೃತ್ವದಲ್ಲಿ ಇಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಂಡರೆ ಒಳಿತು. ಕನ್ನಡದ ಮನಸ್ಸುಗಳನ್ನೇ ಕನ್ನಡದ ಕೈಂಕರ್ಯಕ್ಕೆ ದುಡಿಯುವಂತೆ ಜಾಗೃತ ಮಾಡಬೇಕಿದೆ ಎಂದು ತಿಳಿಸಿದರು.

Advertisement

ಸನ್ಮಾನ ಸ್ವೀಕರಿಸಿದ ಹಿರಿಯ ಕೃಷಿ ವಿಜ್ಞಾನಿ ಡಾ.ಟಿ.ಎಸ್‌.ಚನ್ನೇಶ್‌, ರಾಜ್ಯದ ಜಲಸಂಪನ್ಮೂಲಗಳ ಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ರಫಾಯಲ್‌ ರಾಜ್‌ ಅವರಿಗೆ ಕನ್ನಡ ಚಿರಂಜೀವಿ, ಮಂ.ಅ.ವೆಂಕಟೇಶ್‌ ಅವರಿಗೆ ಕನ್ನಡ ಅರವಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉಡುಪಿ ಜಿಲ್ಲೆ ಹೆಸಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯ ಶೇಖರ ಕುಮಾರ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಇದೇ ವೇಳೆ ಕನ್ನಡಪರ ಕೆಲಸ ಮಾಡುತ್ತಿರುವ ವೆಂಕೋಬರಾವ್‌, ನಾ.ಸು.ಶಿವಾನಂದಮೂರ್ತಿ, ಟಿ.ಎನ್‌.ಸಾಯಿಕುಮಾರ್‌ರನ್ನು ಸನ್ಮಾನಿಸಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ, ಕಸಾಪ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಕರ್ನಾಟಕ ಕಾರ್ಮಿಕಲೋಕ ಸಂಘದ ಗೌರವ ಸಂಪಾದಕ ರಾ.ನಂ.ಚಂದ್ರಶೇಖರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next