ಮಲ್ಪೆ: ನಾಡದೋಣಿ ಮೀನುಗಾರಿಕೆ ಋತು ಆರಂಭವಾಗಿ ಬರೋಬ್ಬರಿ ಒಂದೂವರೆ ತಿಂಗಳ ಬಳಿಕ ಇದೀಗ ಕೆಲವೇ ದೋಣಿಗಳು ಸಮುದ್ರಕ್ಕೆ ಇಳಿದಿವೆ.
ಬುಧವಾರ ಕಡಲ ಅಬ್ಬರದ ನಡುವೆಯೇ ಮಲ್ಪೆ ಬಂದರು ವ್ಯಾಪ್ತಿಯ ಬಹುತೇಕ ಟ್ರಾಲ್‌ದೋಣಿಗಳು ಸಹಿತ ಡಿಸ್ಕೋ ದೋಣಿಗಳು ಮೀನುಗಾರಿಕೆಗೆ ತೆರಳಿದ್ದು ಕೆಲವೇ ದೋಣಿಗಳಿಗೆ ಅಲ್ಪ ಪ್ರಮಾಣದಲ್ಲಿ ಸಿಗಡಿ ಮೀನು ಸಹಿತ ಸಣ್ಣ ಪುಟ್ಟ ಮೀನುಗಳು ಲಭಿಸಿವೆ.
ಮಳೆಗಾಲದ ಯಾಂತ್ರಿಕ ಮೀನುಗಾರಿಕಾ ನಿಷೇಧದ ಅವಧಿ ಕೊನೆಗೊಳ್ಳುತ್ತಾ ಬಂದಿದ್ದು ಕಡಲಲ್ಲಿ ಎದ್ದಿರುವ ತೂಫಾನ್ ತಣ್ಣಗಾಗದ ಹಿನ್ನೆಲೆಯಲ್ಲಿ ನಾಡದೋಣಿ ಮೀನುಗಾರರು ತೀವ್ರ ನಷ್ಟ ಹೊಂದಿದ್ದಾರೆ.
ಈ ಸಲ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ಕಳೆದ 55 ದಿನಗಳಿಂದ ಸಮುದ್ರಕ್ಕೆ ಇಳಿಯಲಾಗದೆ ನಾಡದೋಣಿ ಮೀನುಗಾರರು ದಡದಲ್ಲೇ ಉಳಿದಿದ್ದರು. ಜೂನ್ ತಿಂಗಳಲ್ಲಿ ಶುರುವಾಗಬೇಕಾಗಿದ್ದ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರಿಗೆ ಜುಲೈ ಮುಗಿಯುತ್ತ ಬಂದರೂ ಆರಂಭಗೊಂಡಿರಲಿಲ್ಲ. ಜೂನ್‌ನಿಂದ ನಿರಂತರವಾಗಿ ಸುರಿಯುತ್ತಿದ್ದ ಗಾಳಿ ಮಳೆಗೆ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಮೀನುಗಾರರಿಗೆ ಕಡಲಿಗಿಳಿಯಲು ಸಾಧ್ಯವಾಗಿಲ್ಲ.
ನಾಡದೋಣಿ ಕಡಲಿಗಿಳಿಯದ ಕಾರಣ ಎಲ್ಲ ಮೀನು ಮಾರುಕಟ್ಟೆಯಲ್ಲಿ ತಾಜಾ ಮೀನಿಗೆ ಕೊರತೆ ಉಂಟಾಗಿತ್ತು. ದೂರದ ತಮಿಳುನಾಡು, ಆಂಧ್ರದ, ಕೇರಳದ ಅಥವಾ ಮೀನು ಸಂಸ್ಕರಣ ಘಟಕಗಳಿಂದ ತರಿಸಿಕೊಂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಬುಧವಾರ ಮಲ್ಪೆ ಬಂದರಿನಲ್ಲಿ ಅಗಷ್ಟೆ ಹಿಡಿದು ತಂದ ತಾಜಾ ಮೀನಿಗೆ ಜನರು ಮುಗಿ ಬೀಳುತ್ತಿರುವುದು ಕಂಡು ಬಂದಿದೆ.
ಸಮುದ್ರದಲ್ಲಿ ಮೀನು ಇದೆ. ಆದರೆ ಗಾಳಿ ಮತ್ತು ಕಡಲ ಅಬ್ಬರದಿಂದಾಗಿ ಮೀನು ಹಿಡಿದು ತರಲು ಆಗುತ್ತಿಲ್ಲ. ಯಾಂತ್ರಿಕ ಮೀನುಗಾರಿಕೆ ನಿಷೇಧದ ಅವಧಿ ಜು. 31ಕ್ಕೆ ಮುಗಿಯುತ್ತದೆ. ಹಾಗಾಗಿ ಎರಡು ದಿನಗಳಲ್ಲಿ ಟ್ರಾಲ್‌ದೋಣಿಗಳು ಮೀನುಗಾರಿಕೆಗೆ ತೆರಳಿವೆ. ಅಲ್ಪಸ್ವಲ್ಪ ಮೀನು ಲಭಿಸಿದೆ.
– ಪುರಂದರ ಕೋಟ್ಯಾನ್,
ಪಡುಕರೆ ನಾಡದೋಣಿ ಮೀನುಗಾರ