Advertisement

ಲೋಹೆ, ನೀಕ್ರೋ ಫ್ಯಾಂಗ್‌ರಪ್‌

05:01 PM Oct 02, 2019 | mahesh |

ನಾಗಾಲ್ಯಾಂಡ್‌ನ‌ಲ್ಲಿ ಮಹಿಳೆಯರು ತೊಡುವ ಸಾಂಪ್ರದಾಯಿಕ ದಿರಿಸು ಭಾರತದ ಇತರ ರಾಜ್ಯಗಳ ದಿರಿಸಿಗಿಂತ ಭಿನ್ನವಾಗಿದೆ. ನಾಗಾಲ್ಯಾಂಡ್‌ ಜನತೆ ತಮ್ಮ ಸಾಂಪ್ರದಾಯಿಕತೆ ಹಾಗೂ ಸಂಸ್ಕೃತಿಗೆ ಹೆಚ್ಚು ಒತ್ತು ಕೊಡುತ್ತಾರೆ. ಅಂತೆಯೇ ತಮ್ಮ ಸಾಂಪ್ರದಾಯಿಕ ತೊಡುಗೆ ತಮ್ಮ ನೆಲದ ಘಮವನ್ನು ಆಕರ್ಷಣೆಯನ್ನು, ವೈಭವವನ್ನು ಸೂಚಿಸುವ ವಸ್ತ್ರವೈವಿಧ್ಯ ಎಂದು ಅವರು ಸಾರುತ್ತಾರೆ. ಇತರ ಪ್ರಾಂತ್ಯಗಳ ಉಡುಗೆಗಳಿಂದ ನಾಗಾಲ್ಯಾಂಡ್‌ನ‌ ಮಹಿಳೆಯರ ಸಾಂಪ್ರದಾಯಿಕ ತೊಡುಗೆಯನ್ನು ಮುಖ್ಯವಾಗಿ ಬೇರ್ಪಡಿಸುವುದು ಆಕರ್ಷಕ ಹಾಗೂ ಗಾಢರಂಗುಗಳು!

Advertisement

ನಾಗಾಲ್ಯಾಂಡ್‌ನ‌ ಮಹಿಳೆಯರ ದಿರಿಸಿನಲ್ಲಿ ಅತೀ ಮುಖ್ಯವಾಗಿ ಗಮನ ಸೆಳೆಯುವುದು “ಶಾಲ್‌’ ಗಳು. ಈ ಶಾಲುಗಳು ಬೇರೆ ಬೇರೆ ಬುಡಕಟ್ಟು ಜನಾಂಗ ಹಾಗೂ ಪಂಗಡಗಳಲ್ಲಿ ಬೇರೆ ಬೇರೆಯಾಗಿರುವುದು ಇನ್ನೊಂದು ವೈಶಿಷ್ಟ್ಯ. ಒಂದೊಂದು ವಿಶೇಷ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ವಸ್ತ್ರ ಸಂಹಿತೆಯತ್ತ ಕಿರುನೋಟ ಇಲ್ಲಿದೆ.

ಅಂಗಾಮಿ ಜನಾಂಗ
ಅಂಗಾಮೀಯ ಮಹಿಳೆಯರು ಲೋಹೆ ಎಂಬ ಮೇಲ್‌ವಸ್ತ್ರವನ್ನು ಧಾರಣೆ ಮಾಡುತ್ತಾರೆ. ಲೋಹೆ ಸಾಮಾನ್ಯವಾಗಿ ಕೆಂಪು ಮತ್ತು ಹಳದಿ ಬಣ್ಣದ ಗಾಢ ವರ್ಣ ಸಂಯೋಜನೆಯಿಂದ ತಯಾರಿಸಲ್ಪಡುತ್ತದೆ.

ಲೋಥಾಸ್‌
ಇದು ಆಯಾ ಜನಾಂಗದಲ್ಲಿಯೂ ವಿವಿಧ ಸ್ತರದವರು ವಿವಿಧ ರೀತಿಯಲ್ಲಿ ಬಳಸುವಂತಹ ಶಾಲ್‌. ಮೊದಲ ಸ್ತರದ ಮಹಿಳೆಯರು ತೊಡುವ ಶಾಲ್‌ಗ‌ಳಿಗೆ “ಫ್ಯಾಂಗ್‌ರಪ್‌’ ಎಂದು ಹೆಸರು. ಇದರಲ್ಲಿ ವಿನ್ಯಾಸಗೊಂಡ ಸ್ಟ್ರೈಪ್‌ (ಗೆರೆಗಳಂಥ ವಿನ್ಯಾಸ) ವಿಶೇಷತೆಯನ್ನು ಸೂಚಿಸುತ್ತದೆ.

ವಿಶೇಷ ಸಮಾರಂಭಗಳಲ್ಲಿ ಮಹಿಳೆಯರು ತೊಡುವ ದಿರಿಸಿಗೆ ಅಝ ಜಂಗ್‌ಪ್‌ ಸು’ ಎನ್ನುತ್ತಾರೆ. ಅಂಗಾಮೀ ಜನಾಂಗದ ಮಹಿಳೆಯರು ಸ್ಕರ್ಟ್‌ನಂತೆ ಕಾಣುವ ಕಪ್ಪು ಗೆರೆಗಳ ಬ್ಯಾಂಡ್‌ಗಳನ್ನು ಹೊಂದಿರುವ ಬಿಳಿ ಬಣ್ಣದ ಮಿಶ್ರಿತ ರಂಗಿನ ದಿರಿಸು ಧರಿಸುತ್ತಾರೆ.

Advertisement

ಈ ಸ್ಕರ್ಟ್‌ನಂತಹ ದಿರಿಸು ನಿತ್ಯ ಬಳಕೆಗೆ ಕೆಂಪು ಹಾಗೂ ಹಳದಿ ಬಣ್ಣದ ದಪ್ಪ ಗೆರೆಗಳ ವಿನ್ಯಾಸ ಹೊಂದಿದ್ದು, ಕಾಲು ಮೀಟರ್‌ನಷ್ಟು ಉದ್ದವಾಗಿರುತ್ತದೆ. ಇದರ ಮೇಲೆ ಶರ್ಟ್‌ನಂತಹ ಮೇಲ್‌ವಸ್ತ್ರ ಧರಿಸುವುದು ಸಾಮಾನ್ಯ.

ವಿಶೇಷ ಸಮಾರಂಭಗಳಲ್ಲಿ ಮೇಖಲಾ ಎಂಬ ವಸ್ತ್ರವನ್ನು ಸ್ಕರ್ಟ್‌ನ ಸುತ್ತ ಸುತ್ತಿಯೂ, ಶಾಲ್‌ನೊಂದಿಗೆ ವಿನ್ಯಾಸಗಳಲ್ಲಿ ಬಳಸುತ್ತಾರೆ. ಇವುಗಳ ಜೊತೆಗೆ ಧರಿಸುವ ಆಭರಣಗಳೂ ನಾಗಾಲ್ಯಾಂಡ್‌ನ‌ ಮಹಿಳೆಯರಿಗೇ ಸೀಮಿತವಾಗಿರುವ ಹಾಗೂ ಸಾಂಪ್ರದಾಯಿಕ ತೊಡುಗೆಯ ವೈಭವವನ್ನು ಹೆಚ್ಚಿಸುವ ಧಾರ್ಮಿಕ ಪ್ರಾಧಾನ್ಯತೆ ಹೊಂದಿವೆ.

ನೀಕ್ರೋ ಎಂಬ ನೀಳ ವಸ್ತ್ರಧಾರಣೆಯೂ ಇಲ್ಲಿ ಪ್ರಾಮುಖ್ಯ ಪಡೆದಿದೆ. ಝೀಮೀ ಜನಾಂಗದ ಮಹಿಳೆಯರು ಬಿಳಿ ಬಣ್ಣದ ಸ್ಕರ್ಟ್‌ಗಳನ್ನು ತೊಡುತ್ತಾರೆ. ಇದರ ಅಂಚು ಕೆಂಪು ಹಾಗೂ ಕಪ್ಪು ರಂಗಿನಿಂದ ಕೂಡಿರುತ್ತದೆ.

ಲೋಥಾ ಮಹಿಳೆಯರ ಟೊಕು ಎಮಂಗ್‌ ಎಂಬ ಸಾಂಪ್ರದಾಯಿಕ ತೊಡುಗೆ ಇಂದಿಗೂ ಆಕರ್ಷಕ ಹಾಗೂ ಜನಪ್ರಿಯ. ನಾಗಾಲ್ಯಾಂಡ್‌ನ‌ಲ್ಲಿ ಮಾತ್ರವಲ್ಲ, ಭಾರತ ಇತರೆಡೆ ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿ ಬೇಡಿಕೆ ಹೊಂದಿರುವ ವಸ್ತ್ರವೆಂದರೆ ವೈವಿಧ್ಯಮಯ ಹಾಗೂ ಆಕರ್ಷಕ ನಾಗಾಲ್ಯಾಂಡ್‌ ಮಹಿಳೆಯರ ಅಂದಚಂದದ ಶಾಲ್‌ಗ‌ಳು.

ನಾಗಾ ಮಹಿಳೆಯರ ಕಪ್ಪು ಲೋಥಾ ಉಡುಗೆಯು ಆಕರ್ಷಕವಾಗಿದ್ದು, ಆಧುನಿಕ ಕಾಲದಲ್ಲಿ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಎಲ್ಲೆಡೆ ತೊಡುವ ಜನಪ್ರಿಯ ಸಾಂಪ್ರದಾಯಿಕ ತೊಡುಗೆಯಾಗಿದೆ.

“ಓ’ನಾಗಾ ಜನಾಂಗದ ಮಹಿಳೆಯರು ತೊಡುವ ಸ್ಕರ್ಟ್‌ ಹಾಗೂ ಗಾಢರಂಗಿನ ಮೇಲ್‌ವಸ್ತ್ರವೂ ಜನಪ್ರಿಯವಾಗಿದೆ. ಹೀಗೆ ನಾಗಾಲ್ಯಾಂಡ್‌ನ‌ ಮಹಿಳೆಯರ ಸಾಂಪ್ರದಾಯಿಕ ತೊಡುಗೆ ಹಲವು ವೈವಿಧ್ಯಗಳನ್ನು ಹೊಂದಿದ್ದು ಒಂದೊಂದು ಪಂಗಡ ಹಾಗೂ ಜನಾಂಗದ ವಿಶೇಷತೆ ಎತ್ತಿ ಹಿಡಿಯುವಂತಿದೆ!

ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next